ಮನೋರಂಜನೆ

ಸೆಟ್‌ಗೆ ಬರುವ ಮುನ್ನವೇ ಅಳುವ ಬಗ್ಗೆ ಸಿದ್ಧತೆ ಮಾಡಿಕೊಂಡು ಬರುತ್ತಿದ್ದೆ: ನಟಿ ದೀಪಿಕಾ ದಾಸ್

Pinterest LinkedIn Tumblr

psmec11Deepikaನನಗೆ ಅಳುವುದೆಂದರೆ ತುಂಬಾ ಕಷ್ಟ. ಆದರೆ ನಾನು ತೆರೆಯ ಮೇಲೆ ಕಾಣಿಸಿಕೊಂಡಿದ್ದು ಕಣ್ಣೀರು ಹಾಕುತ್ತಲೇ. ಅಮ್ಮಣ್ಣಿ ಕಾಲೇಜಿನಲ್ಲಿ ಪಿಯೂಸಿ ಓದುವಾಗಲೇ ‘ಕೃಷ್ಣ–ರುಕ್ಮಿಣಿ’ ಧಾರಾವಾಹಿಯ ಮಲ್ಲಿಕಾ ಪಾತ್ರಕ್ಕೆ ಕರೆ ಬಂದಿದ್ದು. ಸೆಟ್‌ಗೆ ಬರುವ ಮುನ್ನವೇ ಅಳುವ ಬಗ್ಗೆ ಸಿದ್ಧತೆ ಮಾಡಿಕೊಂಡು ಬರುತ್ತಿದ್ದೆ. ಗ್ಲಿಸರಿನ್ ಹಾಕಿದರೂ ಅಳುವ ಕಷ್ಟ ತಪ್ಪುವುದಲ್ಲ.
ಓದಿನ ಜೊತೆಗೆ ಸುಮ್ಮನೇ ರ್ಯಾಂಪ್ ಮೇಲೆ ಬೆಕ್ಕಿನ ಹೆಜ್ಜೆ ಹಾಕುತ್ತ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದ ನನ್ನನ್ನು ಟೀವಿ ಪರದೆ ಮೇಲೆ ತಂದು ನಿಲ್ಲಿಸಿ ಸಂಭಾಷಣೆ ಹೇಳು, ಅಳು, ಕಣ್ಣೀರು ಸುರಿಸು ಎಂದರೆ? ಸಣ್ಣ ಅಳಕು, ಭಯ ಇದ್ದಿದ್ದೇ…
ಆದರೆ ಕೃಷ್ಣ ರುಕ್ಮಿಣಿ ನನಗೆ ನಟನೆಯ ಮೊದಲ ಪಾಠ ಕಲಿಸಿದ ಪ್ರಾಥಮಿಕ ಶಾಲೆ ಎಂದರೂ ತಪ್ಪಿಲ್ಲ. ಕ್ಯಾಮೆರಾ ಮ್ಯಾನ್ ಆಗಿದ್ದ ಶಶಿಧರ್ ತುಂಬ ತಾಳ್ಮೆಯಿಂದ, ಪ್ರೀತಿಯಿಂದ ಮನಸ್ಸಿನಾಳದಿಂದ ಅಳುವುದನ್ನು ಕಲಿಸಿಕೊಟ್ಟರು.
ನಂತರ ಎಷ್ಟೊ ಸೊಗಸಾಗಿ ಅಳುವುದನ್ನು ಕಲಿತೆ ಎಂದರೆ ಗ್ಲಿಸರಿನ್ ಇಲ್ಲದೆಯೂ ಅಳುತ್ತಿದ್ದೆ. ನಿಜ ಜೀವನದಲ್ಲಿ ನನ್ನದು ಹುಡುಗನಂತಹ ವ್ಯಕ್ತಿತ್ವ. ಬಂದಿದ್ದೆಲ್ಲವನ್ನೂ ಧೈರ್ಯದಿಂದ ಎದುರಿಸಬೇಕು ಎನ್ನುವುದನ್ನು ಅಮ್ಮ ಚಿಕ್ಕಂದಿನಿಂದಲೇ ಕಲಿಸಿಕೊಟ್ಟರು. ಇದೇ ಸಮಯದಲ್ಲಿ ‘ಬೆಂಗಳೂರು ಮೆಟ್ರೊ’ ಸಿನಿಮಾದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂತು. ಕೃಷ್ಣ–ರುಕ್ಮಿಣಿಯಲ್ಲಿ ಅತ್ತು ಅತ್ತೂ ರೂಢಿ ಆಗಿತ್ತಲ್ಲ, ಈ ಚಿತ್ರದ ಆಡಿಶನ್‌ನಲ್ಲಿ ಗ್ಲಿಸರಿನ್ ಇಲ್ಲದೇ ಅತ್ತು ಬಿಟ್ಟೆ. ನಿರ್ದೇಶಕರು ‘ನಿನಗಿಂತ ಚೆನ್ನಾಗಿ ಅಳೋರ್‌್ಯಾರು’ ಎಂದು ನನ್ನೇ ಆಯ್ಕೆ ಮಾಡಿದರು.
ನಿಜಕ್ಕೂ ಅಳೋ ಹಾಗೆ ಆಗಿದ್ದು…
ಆದರೆ ನಿಜಕ್ಕೂ ಅಳೋ ಹಾಗೆ ಆಗಿದ್ದು ‘ಮಿಸ್ಟರ್ ಮನ್ಮಥ’ ತೆಲುಗು ಚಿತ್ರದ ಸಮಯದಲ್ಲಿ. ಬೇರೆ ಭಾಷೆಯ ಚಿತ್ರಗಳನ್ನೂ ಮಾಡುವುದರಿಂದ ಅನುಭವದ ಹರವು ದೊಡ್ಡದಾಗುತ್ತದೆ ಎಂದರು ಅಮ್ಮ. ‘ಮಿಸ್ಟರ್ ಮನ್ಮಥ’ ಮತ್ತು ‘ಈ ಮನಸೇ’ ತೆಲುಗು ಚಿತ್ರವನ್ನು ಒಪ್ಪಿಕೊಂಡೆ. ಆದರೆ ಡೈಲಾಗ್‌ಗಳನ್ನು ಇಂಗ್ಲಿಷ್‌ನಲ್ಲಿ ಬರೆದುಕೊಂಡು ಅದಕ್ಕೆ ಫೀಲ್ ಕೊಡುತ್ತ ಹೋಗುವುದು ಸುಲಭವೇನೂ ಆಗಿರಲಿಲ್ಲ.
ನೆಗೆಟಿವ್ ಪಾತ್ರ
‘ರಂಗನ್ ಸ್ಟೈಲ್’ ಒಂದು ವಿಭಿನ್ನ ಅನುಭವ ಕಟ್ಟಿಕೊಟ್ಟ ಚಿತ್ರ. ಅದರಲ್ಲಿ ಒಂದು ರೀತಿ ನೆಗೆಟಿವ್ ಶೇಡ್ ಇರುವ ಪಾತ್ರ. ಆದರೆ ಒಂದೇ ರೀತಿಯ ಪಾತ್ರಗಳಿಗೆ ಬ್ರಾಂಡ್ ಆಗಬಾರದು, ಭಿನ್ನ ಅವಕಾಶಗಳಲ್ಲಿಯೇ ಒಳ್ಳೆಯ ಅನುಭವ ಸಿಗುವುದು ಎಂದು ಈ ಚಿತ್ರವನ್ನು ಒಪ್ಪಿಕೊಂಡೆ.
ಹೆಚ್ಚು ಖುಷಿ ಕೊಟ್ಟ ಚಿತ್ರ
ನನ್ನೊಳಗಿನ ನಟನೆಗೆ ಸಾಕಷ್ಟು ಅವಕಾಶವಿತ್ತ ಪಾತ್ರ ಎಂದರೆ ‘ದೂದ್ ಸಾಗರ್’ ಸಂಪೂರ್ಣ ತದ್ವಿರುದ್ಧ ಇರುವ ದ್ವಿಪಾತ್ರದಲ್ಲಿ ನಟಿಸುವುದು ದೊಡ್ಡ ಸವಾಲು. ಬೋರ್ಡ್ ಆಗಿರುವ ನರ್ತನೆ ಒಂದು ಪಾತ್ರಕ್ಕೆ, ಮತ್ತೆ ಕಣ್ಣೀರು ಹಾಕುವ ಪಾತ್ರ ಮತ್ತೊಂದು. ನಿಜವಾಗಲೂ ನಾನೇನು ಅಂತ ನನಗೇ ಗೊತ್ತು ಮಾಡಿ ಕೊಟ್ಟ ಅವಕಾಶ ಅದಾಗಿತ್ತು.
ನಂತರದ ಪಯಣದಲ್ಲಿ ಸೈಕಲ್ ಗ್ಯಾಪಲ್ಲಿ, ಕೋಟಿಗಾಗಿ ಎದುರಾದವು. ಈಗ ನಿರ್ದೇಶಕ ಚಲಪತಿ ಅವರ ‘ಕಲಿಯುಗ’ದ ನಾಯಕಿ ನಾನು. ಜೊತೆ ನಾಯಕ ನಟನಾಗಿ ಪ್ರತೀಕ್ ಅಕ್ಕಿ ಇದ್ದಾರೆ.
ನನ್ನ ಪ್ಲಸ್–ಮೈನಸ್
ನಾನೇ ಹೇಳಿಬಿಡುತ್ತೇನೆ. ನನ್ನ ಎತ್ತರವೇ ನನಗೆ ಪ್ಲಸ್ (5.7) ಕೆಲವೊಮ್ಮೆ ಇದೇ ನನಗೆ ಮೈನಸ್ ಆಗುವುದೂ ಇದೆ. ಇನ್ನು ನನ್ನ ಬಾಡಿ ಲಾಂಗ್ವೇಜ್. ನನ್ನ ನಡೆ–ನುಡಿ, ಮಾತು–ಕತೆ ಎಲ್ಲಾ ಹುಡುಗನಂತಿದೆ. ಕೆಲವೊಂದು ಪಾತ್ರಗಳಿಗೆ ಇಂತಹ ಲುಕ್ ಒಪ್ಪಲ್ಲ. ತೆರೆಯ ಮೇಲೆ ‘ಫೆಮನೈನ್’ ಆಗಿ ಕಾಣಿಸಿಕೊಳ್ಳಬೇಕಲ್ಲ. ನಿಜ ಜೀವನದಲ್ಲಿ ಹುಡುಗನಂತಿರಲು ಇಷ್ಟ. ತೆರೆಯ ಮೇಲೆ ಹುಡುಗಿಯಾಗಿ ಕಾಣಿಸಿಕೊಳ್ಳಲು ಇಷ್ಟ. ಮೊದಲೆಲ್ಲ ಜಿಮ್, ಸ್ವಿಮ್ಮಿಂಗ್, ಜಿಮ್ನಾಸ್ಟಿಕ್ ನಂತಹ ಹುಡುಗರ ಚಟುವಟಿಕೆಗಳಲ್ಲಿಯೇ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದೆ. ಆದರೆ ನಂತರ ಡಾನ್ಸ್, ಏರೊಬಿಕ್ಸ್‌ಗೆ ಸೇರಿಕೊಂಡೆ.
ಸರಳ ಸೌಂದರ್ಯ
ಪಾರ್ಲರ್, ಸಲ್ಯೂನ್, ಸ್ಪಾ ತೀರಾ ಕಡಿಮೆ. ನನ್ನ ಡ್ರೆಸ್ಸಿಂಗ್ ಟೇಬಲ್ ಮೇಲೆ ಸೌಂದರ್ಯ ಉತ್ಪನ್ನಗಳ ರಾಶಿ ಕಾಣುವುದಿಲ್ಲ. ಏಕೆಂದರೆ ನಾನು ಅವುಗಳನ್ನು ಬಳಸುವುದು ತೀರಾ ಕಡಿಮೆ. ಮುಖಕ್ಕೆ ಮನೆಯಲ್ಲಿಯೇ ಫ್ರೂಟ್ ಪ್ಯಾಕ್‌ಗಳನ್ನು ಹಾಕುತ್ತೇನೆ. ಮೇಕಪ್ ಹಾಕುವುದು ಅನಿವಾರ್ಯ. ಆದರೆ ಮೇಕಪ್ ತೆಗೆಯುವ ವಿಧಾನ ಮಾತ್ರ ನನ್ನದೇ. ನ್ಯಾಚುರಲ್ ಬೇಬಿ ಆಯಿಲ್ ಬಳಸಿಯೇ ನಾನು ಮೇಕಪ್ ತೆಗೆಯುವುದು.
ಊಟ–ತಿಂಡಿಯ ವೃತ್ತಾಂತ
ಇಷ್ಟ ಆಗಿದ್ದನ್ನೆಲ್ಲ ತಿನ್ನುತ್ತೇನೆ. ಡೈಟಿಂಗ್ ಬಗ್ಗೆ ಪಕ್ಕಾ ಪ್ಲಾನ್‌ ಅಂತೆನೂ ಇಲ್ಲ. ಅಮ್ಮ ಏನಾದರೂ ರುಚಿಯಾಗಿ ರೈಸ್ ಐಟಮ್ ಮಾಡಿದರೆ ಸಿಕ್ಕಾಪಟ್ಟೆ ತಿನ್ನುತ್ತೇನೆ. ಇಷ್ಟವಾಗದಿದ್ದರೆ ತುಂಬಾ ಕಡಿಮೆ ತಿನ್ನುತ್ತೇನೆ. ಸ್ವೀಟ್ ಅಂದ್ರೆ ತುಂಬಾ ಇಷ್ಟ, ಎಲ್ಲದರಲ್ಲೂ ತುಪ್ಪ ಸೇವಿಸುತ್ತೇನೆ. ನೀರು ಜಾಸ್ತಿ ಕುಡಿಬೇಕು ಅಂತ ಹೇಳುತ್ತಾರೆ. ಆದರೆ ನಾನು ತುಂಬಾ ಕಡಿಮೆ ನೀರು ಕುಡಿಯುತ್ತೇನೆ. ಹಾಗೇ ಇರಬೇಕು, ಹೀಗೇ ಇರಬೇಕು ಅಂತ ನಿಯಮಗಳ ಮೇಲೆ ನಡೆಯೋಕೆ ನನ್ನಿಂದ ಕಷ್ಟ.
ಅಪ್ಪ–ಅಮ್ಮ ನನ್ನ ಹಿಂದಿರುವ ದೊಡ್ಡ ಶಕ್ತಿ. ನನ್ನ ಬದುಕಿನ ಮಹತ್ವದ ನಿರ್ಧಾರಗಳನ್ನು ಅವರ ಜೊತೆ ಚರ್ಚಿಸದೇ ತೆಗೆದುಕೊಂಡಿಲ್ಲ. ಈಗ ಅಪ್ಪ ನಮ್ಮನ್ನಗಲಿದ್ದಾರೆ. ಸೋದರ ಮಾವ ವೆಂಕಟರಾಮು (ಅಮ್ಮನ ಅಣ್ಣ) ಮನೆಯ ಹಿರಿಯನ ಜಾಗ ತುಂಬಿದ್ದಾರೆ. ಯಾವುದೇ ಚಿತ್ರಕ್ಕೆ ಸಹಿ ಹಾಕಬೇಕೆಂದರೂ ಅಮ್ಮ ಓಕೆ ಅನ್ನಲೇಬೇಕು. ಅಣ್ಣ ದಿಲಿಪ್ ಈ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳುವುದಿಲ್ಲ.

Write A Comment