ಮನೋರಂಜನೆ

ಅರಮನೆ ನಗರಿಯಲ್ಲಿ ತಾರೆಗಳ ಸಂಭ್ರಮ

Pinterest LinkedIn Tumblr

pvec01315mys87

ಮೈಸೂರು: ಅರಮನೆಗಳ ನಗರಿಯ ಮಹಾರಾಜ ಕಾಲೇಜಿನ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭೋಗ, ಪ್ರಶಸ್ತಿ ಪುರಸ್ಕೃತ ಚಲನಚಿತ್ರ ತಾರೆಗಳ ಉಲ್ಲಾಸ–ಉತ್ಸಾಹವನ್ನು ಚಿತ್ರರಸಿಕರು ನೋಡಿ ಆನಂದಿಸಿದರು.

ಸಾಂಸ್ಕೃತಿಕ ನಗರಿಯಲ್ಲಿ 22 ವರ್ಷಗಳ ನಂತರ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ  2012 ಮತ್ತು 2013ನೇ ಸಾಲಿನ ವಿವಿಧ ಚಲನಚಿತ್ರಗಳನ್ನು ಮುಡಿಗೇರಿಸಿಕೊಂಡ ಸಿನಿಮಾ ಕ್ಷೇತ್ರದ ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಸಚಿವರು ಪ್ರಶಸ್ತಿಗಳನ್ನು ವಿತರಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕೊಂಚ ಮಳೆ ಸುರಿದು ಶುಭ ಕೋರಿತು. ಚಿತ್ರ ರಸಿಕರು ಕೊಡೆಗಳ ಆಸರೆ ಪಡೆದು ಆಸನಗಳಲ್ಲಿ ಆಸೀನರಾಗಿದ್ದರು. ಇಡೀ ಆವರಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಪ್ರಶಸ್ತಿ ಪ್ರದಾನದ ಜತೆಗೆ, ಕಾರ್ಯಕ್ರಮದ ಉದ್ದಕ್ಕೂ ನಾಡಿನ ವಿವಿಧೆಡೆಗಳಿಂದ ಬಂದಿದ್ದ ಕಲಾ­ತಂಡಗಳು ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದವು.

ಎಂ. ಭಕ್ತವತ್ಸಲ ಅವರಿಗೆ 2012ನೇ ಸಾಲಿನ ರಾಜ್‌ಕುಮಾರ್‌ ಪ್ರಶಸ್ತಿ, ಚಿ. ದತ್ತರಾಜ್‌ ಅವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಮತ್ತು ರಾಜೇಶ್‌ ಅವರಿಗೆ ವಿಷ್ಣುವರ್ಧನ್‌ ಪುರಸ್ಕಾರ ಮತ್ತು  ಶ್ರೀನಾಥ್‌ ಅವರಿಗೆ 2013ನೇ ಸಾಲಿನ ರಾಜ್‌ಕುಮಾರ್‌ ಪ್ರಶಸ್ತಿ, ಪಿ.ಎಚ್‌. ವಿಶ್ವನಾಥ್‌ ಅವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ  ಮತ್ತು ಕೆ.ವಿ. ಗುಪ್ತ ಅವರಿಗೆ ವಿಷ್ಣುವರ್ಧನ್‌ ಪ್ರಶಸ್ತಿ ವಿತರಿಸಲಾಯಿತು.

ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್‌, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್‌ ಡಿಸೋಜಾ, ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಇದ್ದರು.

70ರ ದಶಕದತ್ತ ಚಿತ್ತ ಹರಿಸಿ: ಭಕ್ತವತ್ಸಲ
ನಿರ್ಮಾಪಕ ಎಂ. ಭಕ್ತವತ್ಸಲ ಮಾತನಾಡಿ, ಸರ್ಕಾರವು ಚಲನಚಿತ್ರದ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಜನರ ನಿರೀಕ್ಷೆಗೆ ತಕ್ಕಂಥ ಸಿನಿಮಾಗಳು ಬರುತ್ತಿಲ್ಲ. ಕಾಪಿ ಮಾಡುವ ಪ್ರವೃತ್ತಿ ಜಾಸ್ತಿಯಾಗಿದೆ. 1970ರ ದಶಕದಲ್ಲಿ ಬಂದ ರೀತಿಯ ಸಿನಿಮಾಗಳನ್ನು ಮಾಡುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಚಿತ್ರರಂಗದ ಪ್ರತಿಯೊಬ್ಬರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

‘ಹುಮ್ಮಸ್ಸು ಹೆಚ್ಚಿದೆ’
ನಟ ಶ್ರೀನಾಥ್‌ ಮಾತನಾಡಿ, ರಾಜ್‌ಕುಮಾರ್‌ ಅವರ ಕಾಲದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಬೆಳೆದವರು ನಾವು. ಅವರ ಹೆಸರಿನ ಪ್ರಶಸ್ತಿ ಪಡೆದಿರುವುದು ಖುಷಿ ತಂದಿದೆ. ಈ ಪ್ರಶಸ್ತಿಯು ಇನ್ನಷ್ಟು ಸಾಧನೆ ಮಾಡಬೇಕು ಎಂಬ ಹುಮ್ಮಸ್ಸು ಮೂಡಿಸಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಚಿತ್ರನಗರಿ: ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮೈಸೂರು ತಾಲ್ಲೂಕಿನ ಇಮ್ಮಾವು ಗ್ರಾಮದ ಬಳಿ 100 ಎಕರೆಯಲ್ಲಿ ಚಿತ್ರನಗರಿ ತಲೆ ಎತ್ತಲಿದೆ ಎಂದು ಭರವಸೆ ನೀಡಿದರು.

Write A Comment