ಮನೋರಂಜನೆ

ಸಹಜತೆಯೇ ನಟನೆಯ ಸೂತ್ರ: ತುಂಬುಗೆನ್ನೆ ಚೆಲುವೆಯ ಹೆಸರು ಐಶ್ವರ್ಯಾ ಸಿಂದೋಗಿ

Pinterest LinkedIn Tumblr

psmec24aishwarya

‘ನಟಿಸಬೇಕು ಎಂಬ ಪ್ರಜ್ಞೆಯಲ್ಲಿ ಅಭಿನಯಕ್ಕೆ ಇಳಿದರೆ ಉತ್ತಮ ನಟನೆ ಸಾಧ್ಯವಿಲ್ಲ. ನಾವು ನಿರ್ವಹಿಸುತ್ತಿರುವ ಪಾತ್ರವನ್ನು ಆವಾಹಿಸಿಕೊಂಡು ಸಾಧ್ಯವಾದಷ್ಟೂ ಸಹಜವಾಗಿ ನಿರ್ವಹಿಸಿದರೆ ಉತ್ತಮ ನಟನೆ ಸಾಧ್ಯ’– ಹೀಗೆ ಅನುಭವಿ ಕಲಾವಿದೆಯಂತೆ ಅಭಿನಯ ವ್ಯಾಖ್ಯಾನ ನೀಡುವ ತುಂಬುಗೆನ್ನೆ ಚೆಲುವೆಯ ಹೆಸರು ಐಶ್ವರ್ಯಾ ಸಿಂದೋಗಿ.

‘ಸಿಂಹಾದ್ರಿ’, ‘ಜಾಕ್ಸನ್‌’ ಚಿತ್ರಗಳಲ್ಲಿನ ಪಾತ್ರಗಳ ಮೂಲಕ ಗಾಂಧಿನಗರದ ಗಲ್ಲಿಗಳಲ್ಲಿ ಗಟ್ಟಿ ಹೆಜ್ಜೆಯೂರುತ್ತಿರುವ ಇವರ ಪ್ರಕಾರ ಸಹಜತೆಯೇ ಶ್ರೇಷ್ಠ ನಟನೆಯ ಸೂತ್ರ. ಸದ್ಯಕ್ಕೆ ರಾಮಯ್ಯ ಕಾಲೇಜಿನಲ್ಲಿ ಬಿಎಚ್‌ಎಂ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಐಶ್ವರ್ಯಾ ಹುಟ್ಟಿ ಬೆಳದಿದ್ದೆಲ್ಲ ಉದ್ಯಾನನಗರಿಯಲ್ಲಿಯೇ. ಚಿಕ್ಕಂದಿನಲ್ಲಿ ಶಾಲೆಯಲ್ಲಿ ನಡೆಯುವ ಫ್ಯಾಷನ್‌ ಷೋ, ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೂ ಸಿನಿಮಾ ಕ್ಷೇತ್ರದತ್ತ ಎಳ್ಳಷ್ಟೂ ಆಸಕ್ತಿ ಇವರಿಗಿರಲಿಲ್ಲ.

‘ನಾನು ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿರುವಾಗ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬಂತು. ‘ಹಾಫ್‌ ಮೆಂಟಲ್‌’ ಚಿತ್ರದ ನೃತ್ಯ ಸಂಯೋಜಕರಾಗಿದ್ದ ಮಂಜು ನನ್ನ ತಂದೆಯ ಸ್ನೇಹಿತರು. ಅವರು ನನ್ನನ್ನು ನೋಡಿ ಆ ಚಿತ್ರದ ಒಂದು ಹಾಡಿನಲ್ಲಿ ನಟಿಸಲು ಅವಕಾಶ ನೀಡಿದರು. ಅಲ್ಲಿಂದ ನಟನೆಯತ್ತ ನನ್ನ ಅಭಿರುಚಿ ಬೆಳೆಯಿತು’ ಎಂದು ಚಂದನವನಕ್ಕೆ ಅಡಿಯಿಟ್ಟ ಸಂದರ್ಭವನ್ನು ಅವರು ವಿವರಿಸುತ್ತಾರೆ.

ಹೀಗೆ ನಟನಾ ಲೋಕದತ್ತ ದೃಷ್ಟಿನೆಟ್ಟ ಐಶ್ವರ್ಯಾ ಅವರಿಗೆ ಎರಡನೇ ಚಿತ್ರ ‘ಸಪ್ನೋಂಕಿ ರಾಣಿ’ಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರ ಇನ್ನೂ ತೆರೆಕಾಣಬೇಕಿದೆ. ಸಿಂಹಾದ್ರಿಯಲ್ಲಿ ದುನಿಯಾ ವಿಜಯ್‌ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯಾಗೆ ಅದು ಅತ್ಯಂತ ಸವಾಲಿನ ಪಾತ್ರಗಿತ್ತು.

‘ಸಿಂಹಾದ್ರಿ ಚಿತ್ರದಲ್ಲಿ ನನ್ನ ವಯಸ್ಸಿಗೆ ಮೀರಿದ ಪ್ರಬುದ್ಧ ಪಾತ್ರದಲ್ಲಿ ನಟಿಸಿದ್ದೆ. ಆ ಪಾತ್ರಕ್ಕಾಗಿ ನಾನು ತುಂಬ ಕಷ್ಟಪಟ್ಟಿದ್ದೇನೆ. ಹಾಗೆಯೇ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾದಾಗ ಸಂತಸವನ್ನೂ ಅನುಭವಿಸಿದ್ದೇನೆ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ. ‘ಸಿಂಹಾದ್ರಿ’ ಚಿತ್ರದಲ್ಲಿನ ನಟನೆಯೇ ಅವರಿಗೆ ‘ಜಾಕ್ಸನ್‌’ ಚಿತ್ರದಲ್ಲಿ ದುನಿಯಾ ವಿಜಯ್‌ ಅವರಿಗೆ ನಾಯಕಿಯಾಗಿ ನಟಿಸುವ ಅವಕಾಶ ನೀಡಿತು.

ಸದ್ಯಕ್ಕೆ ರಾಮ್‌ ಎಂಬ ಯುವ ನಿರ್ದೇಶಕರ ‘ವಾಟ್ಸ್‌ಅಪ್‌ ಲವ್‌’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಮುಂದಿನ ಚಿತ್ರ ‘ಆಶಿಕಿ 3’ ಚಿತ್ರೀಕರಣ ಮಾರ್ಚ್‌ನಿಂದ ಆರಂಭವಾಗಲಿದೆ. ‘ನನಗೆ ನಟನೆಯ ಎಬಿಸಿಡಿ ಗೊತ್ತಿರಲಿಲ್ಲ. ಆದರೆ ಮೊದಲ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಂಡಾಗ ವ್ಯಕ್ತವಾದ ಮೆಚ್ಚುಗೆಯಿಂದ ವಿಶ್ವಾಸ ಹುಟ್ಟಿತು. ಹೀಗೆ ಆಕಸ್ಮಿಕವಾಗಿಯೇ ಚಿತ್ರರಂಗಕ್ಕೆ ಬಂದು ಈಗ ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದೇನೆ ಎನ್ನುವ ಐಶ್ವರ್ಯಾ ಅವರಿಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡು ತನ್ನ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕು ಎಂಬ ಅಭಿಲಾಷೆ.

ದೇಹಾಕಾರ ದೇವರ ಕೊಡುಗೆ
‘ದೇಹಾಕಾರ ಎನ್ನುವುದು ನನಗೆ ಗಾಡ್‌ ಗಿಫ್ಟ್‌. ನಾನು ಜಾಸ್ತಿ ದಪ್ಪವೂ ಇಲ್ಲ. ಅತಿ ತೆಳ್ಳಗೂ ಇಲ್ಲ. ಸಮತೂಕದ ದೇಹ ನನಗೆ ನೈಸರ್ಗಿಕವಾಗಿಯೇ ಬಂದಿದೆ. ಇದಕ್ಕೆ ನಾನು ಅಪ್ಪ ಅಮ್ಮನಿಗೆ ಥ್ಯಾಂಕ್ಸ್‌ ಹೇಳಬೇಕಷ್ಟೆ’ ಎಂದು ನಗುತ್ತಾರೆ ಈ ಮಿಂಚುಗಣ್ಣಿನ ಹುಡುಗಿ.

ದಿನಕ್ಕೆ ಒಂದು ಗಂಟೆ ಜಿಮ್‌ನಲ್ಲಿ ಕಾಲ ಕಳೆಯುವುದು ಇವರ ದಿನಚರಿಯ ಭಾಗ. ಲೈಟ್‌ ವೇಟ್‌ ಎಕ್ಸರ್‌ಸೈಜ್ ಮತ್ತು ಕಾರ್ಡಿಯೊ ವ್ಯಾಯಾಮಗಳನ್ನೇ ಹೆಚ್ಚಾಗಿ ಮಾಡುತ್ತಾರೆ. ‘ಫಿಟ್‌ನೆಸ್‌ ಎನ್ನುವುದು ದೇಹಕ್ಕಿಂತ ಮನಸ್ಸಿಗೆ ಹೆಚ್ಚು ಸಂಬಂಧಿಸಿದ್ದು’ ಎನ್ನುವುದು ಐಶ್ವರ್ಯಾ ಅನುಭವ ನುಡಿ.

‘ಮನಸ್ಸಿನ ಆರೋಗ್ಯ ಹೆಚ್ಚು ಮುಖ್ಯ. ಸದಾ ಸಕಾರಾತ್ಮಕವಾಗಿ ಯೋಚಿಸುತ್ತಿರಬೇಕು. ಖುಷಿ ಖುಷಿಯಾಗಿರಬೇಕು ಮತ್ತು ನಮ್ಮ ಸುತ್ತಲಿನವರನ್ನೂ ಖುಷಿಯಾಗಿಡಬೇಕು. ಆಗ ಅದರ ಪರಿಣಾಮ ದೇಹದ ಮೇಲೂ ಪ್ರತಿಬಿಂಬಿತವಾಗುತ್ತದೆ’ ಎನ್ನುವುದು ಅವರ ನಂಬುಗೆ.

ಮುಖದ ಸೌಂದರ್ಯಕ್ಕೆ ಇವರು ವಿಶೇಷ ಕಾಳಜಿಯನ್ನೇನೂ ವಹಿಸುವುದಿಲ್ಲ. ‘ನಮಗೆ ಜನ್ಮಜಾತವಾಗಿ ಬಂದ ಬಣ್ಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಅದನ್ನು ಕೊಂಚ ಹೆಚ್ಚು ಬ್ರೈಟ್‌ ಮಾಡಬಹುದಷ್ಟೆ. ನಟನೆ ಅಥವಾ ಇತರ ಸಮಯದಲ್ಲಿ ನಾವು ಮಾಡಿಕೊಳ್ಳುವ ಮೇಕಪ್‌ ನಮ್ಮ ಚರ್ಮಕ್ಕೆ ವಿಷವಾಗಿ ಪರಿಣಮಿಸುತ್ತದೆ. ಅದರಿಂದ ಮುಖದ ಕಾಂತಿಯನ್ನು ರಕ್ಷಿಸಿಕೊಳ್ಳಲು ನಾನು ನ್ಯಾಚುರಲ್‌ ಸ್ಕ್ರಬ್ಬಿಂಗ್‌ ಮತ್ತು ಫೇಶಿಯಲ್‌ಗಳನ್ನು ಮಾಡಿಕೊಳ್ಳುತ್ತೇನೆ’ ಎಂದು ಅವರು ವಿವರಿಸುತ್ತಾರೆ.

ಪರ್ಯಟನೆ–ಅಡುಗೆ–ನಟನೆ
ಐಶ್ವರ್ಯಾ ಮಾನಸಿಕ ಸಂತೋಷಕ್ಕಾಗಿ ಸಾಧ್ಯವಾದಾಗಲೆಲ್ಲ ಪ್ರವಾಸಕ್ಕೆ ಹೊರಟುಬಿಡುತ್ತಾರೆ. ‘ಪ್ರವಾಸ ನನ್ನ ನೆಚ್ಚಿನ ಹವ್ಯಾಸ. ಕೆಲಸದ ನಡುವೆ ಒಂದು ದಿನದ ಬಿಡುವು ಸಿಕ್ಕರೂ ಎಲ್ಲಿಗಾದರೂ ಪ್ರವಾಸಕ್ಕೆ ಹೊರಟುಬಿಡುತ್ತೇನೆ’ ಎನ್ನುವ ಐಶ್ವರ್ಯಾ ಅವರಿಗೆ ಮಡಿಕೇರಿ ಮತ್ತು ಚಿಕ್ಕಮಗಳೂರು ನೆಚ್ಚಿನ ಪ್ರವಾಸಿ ತಾಣಗಳು. ಪದೆ ಪದೇ ಆ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾರೆ.

ಅಡುಗೆ ಐಶ್ವರ್ಯಾ ಮನಸ್ಸಿಗೆ ಖುಷಿನೀಡುವ ಇನ್ನೊಂದು ಕೆಲಸ. ‘ನನಗೆ ಬಿಡುವು ಸಿಗುವುದೇ ಅಪರೂಪ. ಹಾಗೆ ಬಿಡುವು ಸಿಕ್ಕಾಗಲೆಲ್ಲ ಅಡುಗೆ ಮಾಡುತ್ತೇನೆ. ಆ ಕೆಲಸ ನನಗೆ ಖುಷಿಕೊಡುತ್ತದೆ. ಹಲವು ಬಗೆಯ ಅಡುಗೆ ಮಾಡಲು ಬರುತ್ತದೆ. ಆದರೆ ಚಿಕನ್‌ ಮಾಡುವುದು ನನಗೆ ಇಷ್ಟ’ ಎನ್ನುವ ಇವರಿಗೆ ಸ್ವೀಟ್‌ಗಿಂತ ಖಾರವೇ ಹಿಡಿಸುವುದು.

ಇವೆರಡನ್ನು ಬಿಟ್ಟರೆ ನಟನೆ ಅವರಿಗೆ ಆತ್ಮತೃಪ್ತಿ ನೀಡುವ ಕಾಯಕ. ‘ನಟಿಸುವಾಗ ನಾನು ಪಾತ್ರದಲ್ಲಿ ಸಂಪೂರ್ಣವಾಗಿ ಕಳೆದು ಹೋಗುತ್ತೇನೆ. ಅದು ಅತ್ಯಂತ ತೃಪ್ತಿ ನೀಡುವ ಕೆಲಸ’ ಎನ್ನುವ ಈ ಹುಡುಗಿಗೆ ಗಾಂಧಿನಗರದಲ್ಲಿ ಬೇರೂರಿ ಬೆಳೆಯುವ ಕನಸು, ಕಸುವು ಎರಡೂ ಇದೆ.

Write A Comment