ಮನೋರಂಜನೆ

ಮಕ್ಕಳಿಗೆ ತೋರಿಸಬೇಕಾದ ಸರಳ ಸುಂದರ ಮೈತ್ರಿ

Pinterest LinkedIn Tumblr

pu
ಚಿತ್ರ:
‘ಮೈತ್ರಿ’
ತಾರಾಗಣ:
ಪುನೀತ್‌ ರಾಜ್‌ಕುಮಾರ್‌, ಮೋಹನ್‌ಲಾಲ್‌, ಅತುಲ್‌ ಕುಲಕರ್ಣಿ, ರವಿಕಾಳೆ, ಭಾವನಾ ಮೆನನ್‌, ಅರ್ಚನಾ, ಮಾ.ಆದಿತ್ಯ, ಮಾ.ಕುಶಾಲ್‌ ಇತರರು
ನಿರ್ದೇಶನ:
ಬಿ.ಎಂ. ಗಿರಿರಾಜ್‌
ನಿರ್ಮಾಪಕರು:
ಎನ್‌.ಎಸ್‌.ರಾಜ್‌ಕುಮಾರ್‌

ಭರವಸೆಗಳೇ ಇಲ್ಲದ ಕುಟುಂಬ – ಸಮುದಾಯಗಳ ಮಕ್ಕಳು ಅನನ್ಯ ಸಾಧನೆ ಮೆರೆಯುವ ಮೂಲಕ ಸಮಾಜದ ಗಮನಸೆಳೆಯುವ ಕಥೆಗಳ ಅನೇಕ ಸಿನಿಮಾಗಳಿವೆ. ಮಕ್ಕಳ ಸಿನಿಮಾಗಳೂ ಆಗದ, ದೊಡ್ಡವರ ಸಿನಿಮಾಗಳೂ ಆಗದ ಆ ಚಿತ್ರಗಳು ಹುಸಿ ಭಾವುಕತೆಯಲ್ಲಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತವೆ. ಬಿ.ಎಂ. ಗಿರಿರಾಜ್‌ ನಿರ್ದೇಶನದ ‘ಮೈತ್ರಿ’ ಕೂಡ ಇಂಥ ಭಾವುಕತೆಯನ್ನೇ ನೆಚ್ಚಿಕೊಂಡ ಸಿನಿಮಾ.

ಆದರೆ, ತಮ್ಮ ಸಿನಿಮಾವನ್ನು ಮಕ್ಕಳ ಸಿನಿಮಾ ಮಾಡುವ ಹಟ ಗಿರಿರಾಜ್‌ ಅವರಿಗಿಲ್ಲ. ಬದಲಿಗೆ ಬಾಲಕನನ್ನು ಕೇಂದ್ರದಲ್ಲಿಟ್ಟುಕೊಂಡು ಹಲವು ಬದುಕುಗಳ ಕಥೆ ಹೇಳಹೊರಟಿರುವುದು ‘ಮೈತ್ರಿ’ ಸಿನಿಮಾಕ್ಕೆ ವಿಶೇಷ ಶೋಭೆ ನೀಡಿದೆ.

‘ಮೈತ್ರಿ’ ಚಿತ್ರ ಎರಡು ಕಾರಣಗಳಿಗಾಗಿ ಗಮನಸೆಳೆಯುತ್ತದೆ. ಮೊದಲನೆಯ ಕಾರಣ, ಅದು ನಿರ್ದೇಶಕರ ಸಿನಿಮಾ ಎನ್ನುವುದು.

ಏನನ್ನು ಹೇಳಬೇಕು, ಹೇಗೆ ಹೇಳಬೇಕು ಎನ್ನುವುದರ ಬಗ್ಗೆ ಗಿರಿರಾಜ್‌ ಅವರಿಗೆ ಸ್ಪಷ್ಟತೆಯಿದೆ. ತಾರಾ ವರ್ಚಸ್ಸಿನ ಇಬ್ಬರು ನಾಯಕರಿದ್ದರೂ, ಅವರ ಇಮೇಜ್‌ ಮರೆತು ಕಥೆ ಹೇಳುವುದು ಅವರಿಗೆ ಸಾಧ್ಯವಾಗಿದೆ. ಹಾಗೆಂದು ಕಮರ್ಷಿಯಲ್‌ ಸಾಧ್ಯತೆಗಳನ್ನು ಗಿರಿರಾಜ್‌ ಬಿಟ್ಟುಕೊಟ್ಟಿಲ್ಲ. ಯಾವು ದನ್ನೂ ಅತಿರೇಕಕ್ಕೆ ಒಯ್ಯದಿರುವುದು ಅವರ ವಿಶೇಷ.

ಸಿನಿಮಾದ ಮತ್ತೊಂದು ಕುತೂಹಲ ಕರ ಅಂಶ ನಾಯಕನಟ ಪುನೀತ್ ರಾಜಕುಮಾರ್‌. ಅವರನ್ನು ಹೊರತುಪಡಿಸಿ ಬೇರೆ ಯಾರು ನಟಿಸಿದ್ದರೂ ‘ಮೈತ್ರಿ’ ಈಗಿನ ರೂಪದಂತೆ ಇರುತ್ತಿರಲಿಲ್ಲ ಎನ್ನುವಷ್ಟರಮಟ್ಟಿಗೆ ಅವರು ತಮ್ಮನ್ನು ನಿರ್ದೇಶಕನಿಗೆ ಒಪ್ಪಿಸಿಕೊಂಡಿದ್ದಾರೆ. ಜನಪ್ರಿಯ ಕಲಾವಿದನೊಬ್ಬ ಹೀಗೆ ತಾನೇತಾನಾಗಿ ಪಾತ್ರದಲ್ಲಿ ತೊಡಗಿ ಕೊಂಡಿರುವುದು ಖುಷಿ ಹುಟ್ಟಿಸುತ್ತದೆ. ಪುನೀತ್‌ರ ಕಿರುತೆರೆಯ ‘ಕೋಟ್ಯಾಧಿಪತಿ’ ಆಟ ಸಿನಿಮಾದಲ್ಲಿ ಮುಂದು ವರೆದಿದೆ. ಆದರೆ, ಈ ಆಟ ಕಿರುತೆರೆಯಷ್ಟು ಅದ್ದೂರಿ ಯಾಗಿಲ್ಲ. ಮಲೆಯಾಳಂನ ಹಿರಿಯ ನಟ ಮೋಹನ್‌ಲಾಲ್‌ ಅವರ ಪಾತ್ರ ಸಣ್ಣದಾದರೂ, ಅದು ಇಡೀ ಕಥೆಗೆ ಹೊಸ ತಿರುವು ನೀಡುವಷ್ಟು ಶಕ್ತವಾಗಿದೆ.

ಬಾಲಕನೊಬ್ಬ ತನ್ನ ತಿಳಿವಳಿಕೆಯ ಮೂಲಕ ರಿಮ್ಯಾಂಡ್‌ ಹೋಂನ ಕತ್ತಲೆಯಿಂದ ಸಮಾಜದ ಮುಖ್ಯವಾಹಿನಿಗೆ ಬರುವ ಕಥೆ ‘ಮೈತ್ರಿ’ ಚಿತ್ರದ್ದು. ಇದು ಮೇಲ್ನೋಟಕ್ಕೆ ಹಿಂದಿಯ ‘ಸ್ಲಂ ಡಾಗ್‌ ಮಿಲೇನಿಯಂ’ ಚಿತ್ರವನ್ನು ನೆನಪಿಸುತ್ತದೆ. ಆದರೆ, ಕನ್ನಡದ ಈ ಸರಳ ಸುಂದರ ಚಿತ್ರದ ಕಥೆಗೆ ಹಲವು ಆಯಾಮಗಳಿವೆ. ಬಾಲಕನ ಬದುಕಿನ ಮೂಲಕ ಹಲವರ ದೃಷ್ಟಿಕೋನಗಳನ್ನು ಬದಲಿಸಲು ಪ್ರಯತ್ನಿಸುವ ಸಿನಿಮಾ ಇದು.

ಕಥೆಯನ್ನು ನೆಚ್ಚಿಕೊಂಡ ಸಿನಿಮಾದ ದೃಶ್ಯಸಾಧ್ಯತೆಗಳನ್ನು ಹೆಚ್ಚಿಸಲು ಎ.ವಿ. ಕೃಷ್ಣಕುಮಾರ್‌ ಅವರ ಕ್ಯಾಮೆರಾ ಪ್ರಯತ್ನಿಸಿದೆ. ಆದರೆ, ಇಳೆಯರಾಜ ಸಂಗೀತ ಆರಕ್ಕೇರುವಂತೇನಿಲ್ಲ. ಕೆಲವು ಗೀತೆಗಳು ಕಿರಿಕಿರಿ ಎನ್ನಿಸಿದರೂ, ಅವುಗಳನ್ನು ಕಥೆಯ ಭಾಗವಾಗಿ ಬಳಸಿಕೊಂಡಿರುವುದು ಸಹನೀಯವಾಗಿದೆ.

ಮಕ್ಕಳಿಗೆ ತೋರಿಸಬೇಕಾದ ಹಾಗೂ ಮನೆಯವರೆಲ್ಲರನ್ನೂ ಕರೆದುಕೊಂಡು ಹೋಗಬಹುದಾದ ಸಿನಿಮಾ ಬಹಳ ದಿನಗಳ ನಂತರ ಕನ್ನಡದಲ್ಲಿ ತೆರೆಕಂಡಿದೆ ಎನ್ನುವುದು ‘ಮೈತ್ರಿ’ಗೆ ಸಲ್ಲಬೇಕಾದ ಮೆಚ್ಚುಗೆ.

Write A Comment