ಮನೋರಂಜನೆ

ಯುಎಇ ವಿರುದ್ಧ ಜಿಂಬಾಬ್ವೆಗೆ ರೋಚಕ ಗೆಲುವು

Pinterest LinkedIn Tumblr

33

ನೆಲ್ಸನ್, ಫೆ.19: ರೋಚಕ ಹಣಾಹಣಿಯಲ್ಲಿ ಕೊನೆಗೂ ಜಿಂಬಾಬ್ವೆಯ ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ಇಂದು ಯುಎಇ ವಿರುದ್ಧ ಜಯ ಸಾಧಿಸಿದೆ. ಇಲ್ಲಿ ನಡೆದ ಗ್ರೂಪ್ ಬಿ ವಿಭಾಗದ ಪಂದ್ಯದಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಸೋತು ತೀವ್ರ ಒತ್ತಡದಲ್ಲೇ ಕಣಕ್ಕಿಳಿದ ಜಿಂಬಾಬ್ವೆ ಜಯಗಳಿಸಲು ಸಾಕಷ್ಟು ಪ್ರಯಾಸ ಪಡಬೇಕಾಯಿತು. ಅನಾನುಭವಿ ಯುಎಇ ತಂಡ ಮೊದಲ ಬ್ಯಾಟ್ ಮಾಡಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ನಿಗದಿತ 50 ಓವರ್‌ಗಳಲ್ಲಿ 285 ರನ್‌ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿ ಕ್ರಿಕೆಟ್ ಪಂಡಿತರ ಹುಬ್ಬೇರುವಂತೆ ಮಾಡಿತ್ತು.

ಈ ಕಠಿಣ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ಸಂಘಟಿತ ಆಟದ ನೆರವಿನಿಂದ ಚಿಂಗಬೂರ ಹಾಗೂ ವಿಲಿಯಮ್ಸ್ ಅವರ ಜವಾಬ್ದಾರಿ ಆಟದ ನೆರವಿನಿಂದ ಇನ್ನೂ 2 ಓವರ್ ಬಾಕಿ ಉಳಿದಿರುವಂತೆಯೇ ಭರ್ಜರಿ ಜಯ ಸಾಧಿಸಿ ಅಂತಿಮ 8ರ ಪಟ್ಟಿಗೆ ಸೇರುವ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ.

3

5

Zimbabwe-Won

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಜಿಂಬಾಬ್ವೆ ಆರಂಭದಲ್ಲಿ ಯುಎಇ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಿತು. ಮೊದಲ ವಿಶ್ವಕಪ್ ಆಡುತ್ತಿರುವ ಯುಎಇಗೆ ಆರಂಭಿಕ ಪಂದ್ಯದಲ್ಲಿ ಕ್ರೀಜಿಗಿಳಿದ ಅಂಜಾದ್ ಆಲಿ ಮತ್ತು ಬಿರಿನಿಗಿರ್ ಜೋಡಿ ಸ್ವಲ್ಪ ಮಟ್ಟಿಗೆ ಆರಂಭಿಕ ಮುನ್ನಡೆ ಸಾಧಿಸಿದರೂ 6ನೆ ಓವರ್‌ನಲ್ಲಿ ಜತೆಯಾಟ ಬೇರ್ಪಟ್ಟಿತು. ಚತಾರಾ ಅವರ ಬೌಲಿಂಗ್‌ನಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿ ಅಂಜಾದ್ ಆಲಿ ಔಟಾದ ನಂತರ ಬಂದ ಕೃಷ್ಣಾ ಚಂದರನ್ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಆದರೆ, ಇವರ ಜತೆಗಿದ್ದ ಬಿರಿನಿಗರ್ ತಾಳ್ಮೆ ಕಳೆದುಕೊಂಡು ಜಿಂಬಾಬ್ವೆಯ ವೇಗಿ ಮಿರಿ ಬೌಲಿಂಗ್‌ನಲ್ಲಿ ಔಟಾಗಿ ನಿರಾಸೆಯಿಂದ ಪೆವಿಲಿಯನ್ ಸೇರಿದರು. 10ನೆ ಓವರ್ (40) ನೊಳಗೆ ರನ್‌ರೇಟ್ ಸಮಾಧಾನಕರವಾಗಿದ್ದರೂ ಎರಡು ವಿಕೆಟ್ ಕಳೆದುಕೊಂಡು ಯುಎಇ ಸ್ವಲ್ಪಮಟ್ಟಿಗೆ ಚಡಪಡಿಸುವಂತಿತ್ತು. ಆದರೆ, ನಂತರ ಬಂದ ಕುರಾರಾಂಖಾನ್ ಎಚ್ಚರಿಕೆಯ ಆಟ ಪ್ರದರ್ಶಿಸಿ ಚಂದರನ್ ಜತೆಗೂಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ನೋಡುನೋಡುತ್ತಿದ್ದಂತೆ ರನ್ ಗತಿ ಹೆಚ್ಚುತ್ತಿರುವುದನ್ನು ಗಮನಿಸಿದ ಜಿಂಬಾಬ್ವೆ ಅದಕ್ಕೆ ಬ್ರೇಕ್ ಹಾಕಲು ಸಾಕಷ್ಟು ಪ್ರಯಾಸಪಟ್ಟಿತು.

27ನೆ ಓವರ್‌ನಲ್ಲಿ ಪುನಃ ಮಿರಿ ತಂಡಕ್ಕೆ ಯಶಸ್ಸು ತಂದುಕೊಟ್ಟರು. ಈ ಬಾರಿ ಚಂದಿರನ್ ಔಟಾಗಿ ಪೆವಿಲಿಯನ್ ಸೇರಿದರು. ನಂತರ 5ನೆ ಕ್ರಮಾಂಕದಲ್ಲಿ ಬಂದ ತಂಡದ ನಾಯಕ ಪಾಟೀಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.
ಜತೆಯಾಟ ಬರುತ್ತಿದೆ ಎನ್ನುವಷ್ಟರಲ್ಲೇ ಜಿಂಬಾಬ್ವೆ ಬೌಲರ್‌ಗಳು ವಿಕೆಟ್ ಕೀಳುತ್ತಿದ್ದರು. ಅರ್ಧಶತಕದ ಅಂಚಿನಲ್ಲಿದ್ದ ಕುರಾರಾಂಖಾನ್ (45) ಔಟಾದ ನಂತರ ಬಂದ ಸಲ್ಮಾನ್ ಅನ್ವರ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ನಾಯಕ ಪಾಟೀಲ್ ಜತೆಗೂಡಿ ಆಕರ್ಷಕ ಹೊಡೆತಗಳ ಮೂಲಕ ತಂಡವನ್ನು 200ರ ಗಡಿ ದಾಟಿಸಿದರು. ಅರ್ಧಶತಕ ಸಿಡಿಸಿ ಗಮನ ಸೆಳೆದರು. ಆದರೂ ಅಂತಿಮ ಕ್ಷಣಗಳಲ್ಲಿ ರನ್ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಿ ಪಾಟೀಲ್ ಅನ್ವರ್ ನಿರ್ಗಮಿಸಿದರು. ಆದರೂ ಛಲ ಬಿಡದ ಯುಎಇನ ಬಾಲಂಗೋಚಿ (ಬೌಲರ್)ಗಳು ಕೂಡ ಆರ್ಭಟಿಸಿದರು. ಅದರನ್ವಯ 8ನೆ ವಿಕೆಟ್‌ಗೆ ಅಮ್ಜದ್ ಜಾವಿದ್ ಮತ್ತು ಮಹಮ್ಮದ್ ನವೀದ್ ಅರ್ಧಶತಕದ ಜತೆಯಾಟ ನೀಡಿ ತಂಡವನ್ನು ಸುಭದ್ರ ಮೊತ್ತಕ್ಕೆ ತಂದಿಟ್ಟರು.

ಅಂತಿಮವಾಗಿ ಯುಎಇ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 285 ರನ್‌ಗಳನ್ನು ಕಲೆ ಹಾಕಿತು. ಜಿಂಬಾಬ್ವೆ ಪರ ಮಿರಿ 2, ಚತಾರಾ 3, ಚಿಗಂಬುರ 2 ವಿಕೆಟ್ ಪಡೆದರು. ಒಟ್ಟಾರೆ ಸಾಂಘಿಕ ಹೋರಾಟದ ಮೂಲಕ ದೊಡ್ಡ ಮೊತ್ತವನ್ನೇ ಪೇರಿಸಿ ಯುಎಇ ಅಚ್ಚರಿ ಮೂಡಿಸಿತು. ಈ ಸವಾಲನ್ನು ಬೆನ್ನತ್ತಿದ ಜಿಂಬಾಬ್ವೆ ಆರಂಭ ಉತ್ತಮವಾಗಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಜಾ ಮತ್ತು ಚಕಬಾವೆ ಭರ್ಜರಿ ಅಡಿಪಾಯ ಹಾಕಿಕೊಟ್ಟರು. 12ನೆ ಓವರ್‌ವರೆಗೂ ಉತ್ತಮ ಜತೆಯಾಟ ಪ್ರದರ್ಶಿಸಿ ಯುಎಇ ಬೌಲರ್‌ಗಳನ್ನು ಕಾಡಿದರು. ಆದರೂ 64 ರನ್‌ಗಳಾಗಿದ್ದಾಗ ಯುಎಇ ವೇಗಿ ಮಹಮ್ಮದ್ ತಾಕೀರ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.

ಕೃಷ್ಣಚಂದ್ರನ್ ಹಿಡಿದ ಅದ್ಭುತ ಕ್ಯಾಚ್‌ಗೆ ರಾಜಾ ಔಟಾದರು. ನಂತರ ಬಂದ ಮಸಾಖಡ್ಜಾ ಕೇವಲ 1 ರನ್ ಗಳಿಸುವಷ್ಟರಲ್ಲೇ ಸುಸ್ತಾದರು. ಯುಎಇನ ಜಾವೀದ್ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು ಔಟಾದರು. ಜಿಂಬಾಬ್ವೆ ದಿಢೀರನೆ ತನ್ನ 2ನೆ ವಿಕೆಟ್ ಕಳೆದುಕೊಂಡಿತು.

ಇದರಿಂದ ವಿಚಲಿತರಾದಂತೆ ಜಿಂಬಾಬ್ವೆ ಪಾಳಯ ಕಂಡುಬಂದರೂ ಮೂರನೆ ಕ್ರಮಾಂಕದಲ್ಲಿ ಕಣಕ್ಕಿಳಿದ ಟೈಲರ್ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರಲ್ಲದೆ ಸರಾಸರಿ ರನ್ ಮೊತ್ತವನ್ನು ಕೂಡ ಕಾಯ್ದುಕೊಂಡರು. ಇನ್ನೇನು ಈ ಜೋಡಿ ಅಪಾಯಕಾರಿಯಾಗಿ ಪರಿಣಮಿಸಿದಾಗ ದಾಳಿಗಿಳಿದ ಯುಎಇ ನಡೆಸಿದ ಗೇಮ್‌ಪ್ಲಾನ್ ವರ್ಕ್‌ಔಟ್ ಆಯಿತು. ತಾಳ್ಮೆಯಿಂದ ಬ್ಯಾಟ್ ಬೀಸುತ್ತಿದ್ದ ಚಕಾಬಾವಾ ಹಿಟ್ ವಿಕೆಟ್ ಆಗಿ ಔಟಾದರು. ಅದೃಷ್ಟ ಕೈ ಕೊಟ್ಟಿತೆಂಬಂತೆ ಜಿಂಬಾಬ್ವೆಯ 3ನೆ ವಿಕೆಟ್ ಪತನಗೊಂಡಿತು.

ನಂತರ ಬಂದ ವಿಲಿಯಮ್ಸ್ ಯಾವುದೇ ಒತ್ತಡಕ್ಕೆ ಸಿಲುಕದೆ ತಮ್ಮ ನೈಜ (ಸ್ಫೋಟಕ) ಆಟಕ್ಕೆ ಮುಂದಾಗಿ ಜಿಂಬಾಬ್ವೆಯನ್ನು ಕ್ಷಣಮಾತ್ರದ ಆಪತ್ತಿನಿಂದ ಪಾರು ಮಾಡಿದರು. ಇದಕ್ಕೆ ಟೈಲರ್ ಕೂಡ ಸಾಥ್ ನೀಡಲು ಸ್ವಲ್ಪಮಟ್ಟಿಗೆ ಯಶಸ್ವಿಯಾದರೂ ಕೂಡ ನಾಜೀರ್ ಅಜೀಜ್ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು ನಿರಾಸೆಯಿಂದ ಪೆವಿಲಿಯನ್ ಸೇರಿದರು.

ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಜಿಂಬಾಬ್ವೆ ಪಾಳಯದಲ್ಲಿ ದುಗುಡ ಶುರುವಾಯಿತು. ಏನಾಗುತ್ತದೋ ಎಂಬ ಆತಂಕ ಶುರುವಾಗಿತ್ತು. ಪಂದ್ಯ ರೋಚಕದ ಕ್ಷಣಕ್ಕೆ ಸಾಕ್ಷಿಯಾಗಲಿದೆ ಎಂದು ಆಗಲೇ ನಿರ್ಧಾರವಾಗಿತ್ತು. ಅದರಂತೆಯೇ 5ನೆ ಕ್ರಮಾಂಕದಲ್ಲಿ ಬಂದ ಮಿಲಿ (9) ನಿರ್ಗಮಿಸಿದಾಗ ಮತ್ತಷ್ಟು ಆತಂಕ ಶುರುವಾಯಿತು. ಆದರೆ, ವಿಲಿಯಮ್ಸನ್ ಮಾತ್ರ ಧೈರ್ಯಗೆಡದೆ ಬ್ಯಾಟ್ ಬೀಸುತ್ತಲೇ ಇದ್ದರು. ಮಿಲಿ ನಿರ್ಗಮನದ ನಂತರ ಬಂದ ಇರ್ವಿನ್ ಜತೆಗೂಡಿ ತಂಡವನ್ನು ಉತ್ತಮವಾಗಿ ನಿರ್ವಹಿಸಿ ರನ್ ಕಲೆ ಹಾಕಿದರು. ಇನ್ನೇನು ತಂಡ ಗೆಲುವಿನ ಸನಿಹ ಬಂತು (250 ರನ್) ಎನ್ನುವಷ್ಟರಲ್ಲಿಯೇ ಇರ್ವಿನ್ (42) ಔಟಾದರು. ಜಿಂಬಾಬ್ವೆಯ 6ನೆ ವಿಕೆಟ್ ಪತನಗೊಂಡಿತು. ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಇರ್ವಿನ್ 2 ಸಿಕ್ಸರ್, 2 ಬೌಂಡರಿಗಳನ್ನು ಬಾರಿಸಿ ಕೇವಲ 32 ಎಸೆತಗಳಲ್ಲಿ 42 ರನ್ ಕಲೆ ಹಾಕಿ ತಂಡಕ್ಕೆ ಬಹು ಅಮೂಲ್ಯ ಕಾಣಿಕೆ ನೀಡಿದರು.

ನಂತರ ಬಂದ ಆಲ್‌ರೌಂಡರ್ ಆಟಗಾರ ಹಾಗೂ ತಂಡದ ನಾಯಕ ಚಿಗಂಬುರ ತಂಡದ ಗೆಲುವನ್ನು ಖಚಿತಪಡಿಸಿದರು. ಇನ್ನು ಕೊನೆಯ 5 ಓವರ್‌ಗಳಲ್ಲಿ 30 ರನ್ ಮಾಡಬೇಕಾದ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಅವಕಾಶಕ್ಕಾಗಿ ಕಾದರು. 48ನೆ ಓವರ್‌ನಲ್ಲಿ ನವೀದ್ ಅವರ ಬೌಲಿಂಗ್‌ನಲ್ಲಿ ಸತತ 2 ಬೌಂಡರಿಗಳನ್ನು ಬಾರಿಸುವ ಮೂಲಕ 285 ರನ್‌ಗಳ ಗುರಿಯನ್ನು ದಾಟಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನು ಎರಡು ಓವರ್‌ಗಳು ಬಾಕಿ ಉಳಿದಿರುವಂತೆಯೇ ಜಿಂಬಾಬ್ವೆ 4 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಂಕ ಗಳಿಸಿಕೊಂಡಿತು. ಯುಎಇ ಪರವಾಗಿ ಮಹಮ್ಮದ್ ತಾಕೀರ್ 2, ಕೃಷ್ಣಾ ಚಂದ್ರನ್, ಅಜೀಜ್, ಜಾವೀದ್, ನವೀದ್ ತಲಾ 1 ವಿಕೆಟ್ ತಂದುಕೊಟ್ಟರು.

Write A Comment