ಮನೋರಂಜನೆ

ಭರತನಾಟ್ಯ ನನ್ನ ಆತ್ಮ’; ಪ್ರಿಯಾ ನಾರಾಯಣ

Pinterest LinkedIn Tumblr

 

psmec07priyadance2

ಪ್ರಿಯಾ ನಾರಾಯಣ ಸಮಕಾಲೀನ ಶಾಸ್ತ್ರೀಯ ನೃತ್ಯ ಕಲಾವಿದೆ. ಅಮೆರಿಕದಲ್ಲಿದ್ದುಕೊಂಡೇ ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ಅಭ್ಯಸಿಸಿರುವ ಅವರಿಗೆ ಭರತನಾಟ್ಯದ ಮೇಲೆ ವಿಶೇಷ ಆಸ್ಥೆ. ಕಳೆದ ಎರಡು ದಶಕಗಳಿಂದ ಭರತನಾಟ್ಯ ಕಲಾವಿದೆಯಾಗಿ, ಶಿಕ್ಷಕಿಯಾಗಿ, ಹಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾ ಅಂತರರಾಷ್ಟ್ರೀಯ ಸಮಕಾಲೀನ ವೇದಿಕೆಗಳಲ್ಲಿ ಭಾರತದ ಶಾಸ್ತ್ರೀಯ ನೃತ್ಯಪ್ರಕಾರವನ್ನು ಜನಪ್ರಿಯಗೊಳಿಸುತ್ತಿರುವವರಲ್ಲಿ  ಪ್ರಮುಖರು. ಇತ್ತೀಚೆಗೆ ಸಾಯಿ ನೃತ್ಯೋತ್ಸವದಲ್ಲಿ ಭರತನಾಟ್ಯ ಪ್ರದರ್ಶನ ನೀಡಲು ಬೆಂಗಳೂರಿಗೆ ಬಂದಿದ್ದ ಪ್ರಿಯಾ ನಾರಾಯಣ ಮೆಟ್ರೊ ಜತೆ ಮಾತುಕತೆಗೆ ಸಿಕ್ಕರು.

ತಂದೆ ತಾಯಿ ಇಬ್ಬರೂ ಮೂಲತಃ ಕರ್ನಾಟಕದವರೇ ಆದರೂ ವೃತ್ತಿ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರಿಂದ ಪ್ರಿಯಾ ಹುಟ್ಟಿ ಬೆಳೆದದ್ದೆಲ್ಲ ಅಲ್ಲಿಯೇ. ಚಿಕ್ಕಂದಿನಿಂದಲೇ ಅವರಿಗೆ ಭರತನಾಟ್ಯದ ಬಗ್ಗೆ ವಿಪರೀತ ಮೋಹ. ಪ್ರಿಯಾ, ಅಜ್ಜಿ ಸುಮತಿ ಚಿಕ್ಕಣ್ಣ ಮೈಸೂರು ಮಹಾರಾಜರಿಂದ ಚಿನ್ನದ ಪದಕ ಪಡೆದ ಕರ್ನಾಟಕ ಸಂಗೀತ ಗಾಯಕಿ. ತಂದೆ ತಾಯಿ ಇಬ್ಬರೂ ಸಂಗೀತಪ್ರಿಯರು.

‘ನನ್ನ ಶಿಕ್ಷಣದ ಜತೆಗೇ ನೃತ್ಯವೂ ಹವ್ಯಾಸವಾಗಿ ಬೆಳೆಯುತ್ತ ಬಂತು. ನನ್ನ ಈ ಆಸಕ್ತಿಗೆ ಕುಟುಂಬದ ಬೆಂಬಲ ಇದ್ದೇ ಇತ್ತು. ಭರತನಾಟ್ಯ ಮತ್ತು ಅದರ ಸಂಸ್ಕೃತಿಯೇ ನನ್ನ ಬದುಕಿಗೊಂದು ಸ್ಪಷ್ಟತೆಯನ್ನು ಕೊಟ್ಟಿದ್ದು’ ಎಂದು ತಾವು ಕಲಾಜಗತ್ತಿಗೆ ಹೊರಳಿಕೊಂಡ ಸಂದರ್ಭವನ್ನು ಪ್ರಿಯಾ ಸ್ಮರಿಸಿಕೊಳ್ಳುತ್ತಾರೆ.

ವಿದೇಶದಲ್ಲಿಯೇ ಬೆಳೆದರೂ ಪ್ರಿಯಾ ಅವರಿಗೆ ಭಾರತೀಯ ಸಂಸ್ಕೃತಿಯ ಮೇಲೆ ವಿಶೇಷ ಪ್ರೀತಿ. ‘ಅನಿವಾಸಿ ಭಾರತೀಯಳಾಗಿ ನಾನು ನಮ್ಮ ಸಂಸ್ಕೃತಿಯನ್ನೇನೂ ತಿರಸ್ಕರಿಸಿಲ್ಲ.  ನಾನು ಭಾರತೀಯಳು. ಕನ್ನಡ ಭಾಷೆ ಬಲ್ಲವಳು. ಇಂಗ್ಲಿಷ್‌ ನನ್ನ ಪ್ರಥಮ ಭಾಷೆ. ನಾನು ಕನ್ನಡ ಕಲಿತಿದ್ದು ಸ್ವಲ್ಪ ತಡವಾಗಿ. ಆದರೆ ನೃತ್ಯಗಾರ್ತಿಯಾಗಿ ನಮ್ಮ ಹಿಂದೂ ಸಂಪ್ರದಾಯ ಮತ್ತು ಪುರಾಣ ಕಥೆಗಳ ಬಗ್ಗೆ ತಿಳಿದುಕೊಂಡಾಗ ಭಾರತದ ಬಗ್ಗೆ ಹೆಮ್ಮೆಯೆನಿಸಿತು’ ಎಂದು ಅವರು ಹೇಳಿಕೊಳ್ಳುತ್ತಾರೆ.

ಪ್ರಿಯಾ ಅವರಿಗೆ ಭರತನಾಟ್ಯ ಮೆಚ್ಚಿನದ್ದಾದರೂ ವಿವಿಧ ಕಲೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಆದ್ದರಿಂದ ಕಥಕ್‌ ಅನ್ನು ಕೂಡ ಅಭ್ಯಸಿಸಿದ್ದಾರೆ. ಬೇರೆ ಬೇರೆ ಹಿನ್ನೆಲೆ ಇರುವ ಗುರುಗಳಿಂದ ಕಲಿಯಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವ ಪ್ರಿಯಾ ಅವರಿಗೆ ನೃತ್ಯಗುರು ಡಾ. ಸುಪರ್ಣಾ ವೆಂಕಟೇಶ್‌ ಅವರ ಮೇಲೆ ವಿಶೇಷ ಗೌರವ.

‘ಭರತನಾಟ್ಯ ಅಂದರೆ ಆನಂದ, ಶಾಂತಿ. ಅದು ನನ್ನ ಆತ್ಮ. ನಾಟ್ಯ ಮಾಡುವಾಗ ನನ್ನಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಇರುವುದಿಲ್ಲ. ಭರತನಾಟ್ಯ ನನ್ನನ್ನು ಎಂದೂ ಮಾನಸಿಕವಾಗಿ ಕುಗ್ಗಲು ಬಿಟ್ಟಿಲ್ಲ. ಅದು ನನ್ನನ್ನು ಪೋಷಿಸಿ ಬೆಳೆಸಿದೆ. ಅದರಿಂದ ಹೊಮ್ಮಿದ ಆನಂದ ನನ್ನ ಬದುಕಿನ ಎಲ್ಲ ಆಯಾಮಗಳಲ್ಲಿಯೂ ಪ್ರತಿಫಲಿಸಿದೆ’ ಎನ್ನುವುದು ಪ್ರಿಯಾ ವಿವರಣೆ.

ಅವರ ಪಾಲಿಗೆ ನೃತ್ಯ ದೇವರೊಂದಿಗೆ ಸಂಬಂಧ ಹೊಂದುವ ಮಾರ್ಗವೂ ಹೌದು. ‘‘ಗಾಯಕಿಯಾದ ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ‘ನಾನು ಅವನಿಗಾಗಿ (ದೇವರಿಗಾಗಿ) ಹಾಡುತ್ತೇನೆ. ಗಾಯನ ಎನ್ನುವುದು ಅವನೊಂದಿಗಿನ ನನ್ನ ಸಂಬಂಧ’ ಎನ್ನುವ ಅವರ ನಂಬಿಕೆ ನನ್ನ ನಂಬಿಕೆಯೂ ಹೌದು. ನೃತ್ಯ ಮಾಡುತ್ತಿರುವಾಗ ನನ್ನ ಮತ್ತು ಅವನ ನಡುವೆ ಏನೂ ಅಡ್ಡಬರುವುದಿಲ್ಲ. ಆ ಕ್ಷಣಗಳಲ್ಲಿ ಸಂಗೀತದಿಂದ ನನ್ನನ್ನು ಬೇರ್ಪಡಿಸುವುದು ಯಾರಿದಂಲೂ ಸಾಧ್ಯವಿಲ್ಲ’ ಎನ್ನುವುದು ಪ್ರಿಯಾ ನಂಬಿಕೆ.

ಭಾರತೀಯ ಮತ್ತು ಪಾಶ್ಚಾತ್ಯ ಎಂದು ಕಲೆಯನ್ನು ವಿಭಜಿಸುವುದರಲ್ಲಿ ಇವರಿಗೆ ನಂಬಿಕೆಯಿಲ್ಲ. ‘ನನಗೆ ಕರ್ನಾಟಕ ಸಂಗೀತ ಇಷ್ಟ. ಅದರೊಟ್ಟಿಗೆ ಅಮೆರಿಕನ್‌ ಪಾಪ್‌ ಮತ್ತು ಹಿಪ್‌ಹಾಪ್‌ ಕೂಡ ಇಷ್ಟ. ಬಿಯಾನ್ಸ್‌ ಮತ್ತು ಟೋನಿ ನನ್ನ ನೆಚ್ಚಿನ ಕಲಾವಿದರು.

ಇಂದಿನ ಅನೇಕ ಯುವ ಕಲಾವಿದರು ಶಾಸ್ತ್ರೀಯ ಮತ್ತು ಆಧುನಿಕ ಎರಡೂ ಪ್ರಕಾರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಹಾಗೆ ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕು ಎಂಬ ರೀತಿಯಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಕಲೆಗಳನ್ನು ನೋಡುವುದು ಸರಿಯಲ್ಲ. ಅವೆರಡನ್ನೂ ಏಕಕಾಲದಲ್ಲಿ ಪ್ರೀತಿಸಿ ಆನಂದಿಸಬಹುದು’ ಎಂದು ನಿಲುವು ವ್ಯಕ್ತಪಡಿಸುತ್ತಾರೆ. ಅಮೆರಿಕನ್ನರಿಗೆ ಭರತನಾಟ್ಯ ಅಪರಿಚಿತ ಕಲೆಯಲ್ಲ ಎನ್ನುವುದು ಪ್ರಿಯಾ ಮಾತು.

‘ಅಮೆರಿಕದಲ್ಲಿ ಮೊಟ್ಟಮೊದಲು ಗಮನ ಸೆಳೆದ ಭಾರತೀಯ ನೃತ್ಯಪ್ರಕಾರ ಭರತನಾಟ್ಯ. ಈಗಾಗಲೇ ಸಾಕಷ್ಟು ಜನ ಅಮೆರಿಕದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ಅದು ಅಲ್ಲಿನವರಿಗೆ ಅಪರಿಚಿತ ಕಲೆಯಾಗಿಯೇನೂ ಉಳಿದಿಲ್ಲ. ಭರತನಾಟ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಭಾರತೀಯೇತರ ಪ್ರೇಕ್ಷಕರೂ ಬರುತ್ತಾರೆ. ಅವರಲ್ಲಿ ಕೆಲವರಷ್ಟೇ ನಿಜವಾಗಿ ಅರ್ಥೈಸಿಕೊಂಡು ಪ್ರಶಂಸಿಸುತ್ತಾರೆ’ ಎಂದು ವಿವರಿಸುವ ಪ್ರಿಯಾ ಅವರಿಗೆ ಭಾರತೀಯ ನಾಟ್ಯವನ್ನು ಒಂದರ ಹಿಂದೆ ಒಂದರಂತೇ ಪ್ರದರ್ಶಿಸುವುದರಲ್ಲಿ ಆಸಕ್ತಿ ಇಲ್ಲ. ಅದರಲ್ಲಿ ಹೊಸದೇನಾದರೂ ಮಾಡಬೇಕು ಎನ್ನುವುದು ಅವರ ಹಂಬಲ.

‘ಹಾಗೆ ಹೊಸದನ್ನು ಸೃಷ್ಟಿಸಬೇಕಾದರೆ ಅದರಲ್ಲಿಯೇ ಮುಳುಗಿ ಏಳಬೇಕು. ಅನ್ನ, ನೀರು, ಉಸಿರು, ಕೆಲಸ ಎಲ್ಲವೂ ಭರತನಾಟ್ಯವೇ ಆಗಬಲ್ಲ ತನ್ಮಯತೆ ಬೇಕು. ನಾವೀಗ ಅಲ್ಲಿ ಪ್ರಸ್ತುತಪಡಿಸುವ ಪ್ರದರ್ಶನ ಹೇಗಿರಬೇಕೆಂದರೆ ಅದನ್ನು ನೋಡಿದವರು ಭಾರತಕ್ಕೆ ಬಂದು ಆ ನಾಟ್ಯಶಾಸ್ತ್ರದ ಬಗ್ಗೆ ಅರಿತುಕೊಳ್ಳಲು ಪ್ರೇರೇಪಿಸುವಂತಿರಬೇಕು. ಅಲ್ಲಿನ ಸಂಘ ಸಂಘಟನೆಗಳೂ ಇಂತಹ ಪ್ರಯತ್ನಕ್ಕೆ ಬೆಂಬಲ ನೀಡಬೇಕು’ ಎಂದು ಪ್ರಿಯಾ ನಾಟ್ಯಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಗಮನ ಸೆಳೆಯುತ್ತಾರೆ. ಸದ್ಯಕ್ಕೆ ಡೊಮೆಸ್ಟಿಕ್ ವಯಲೆನ್ಸ್‌ ಕುರಿತಾದ ಸಮಕಾಲೀನ ಶಾಸ್ತ್ರೀಯ ನೃತ್ಯ ರೂಪಕವೊಂದನ್ನು ರೂಪಿಸುವ ಕೆಲಸದಲ್ಲಿ ಪ್ರಿಯಾ ನಿರತರಾಗಿದ್ದಾರೆ.ಬೆಂಗಳೂರಿನ ಬಗೆಗೆ ಇವರಿಗೆ ಅಪಾರ ಪ್ರೀತಿ.

‘ಷಿಕಾಗೋ ಬಿಟ್ಟರೆ ಬೆಂಗಳೂರು ನನ್ನ ನೆಚ್ಚಿನ ನಗರ. ಇಲ್ಲಿಗೆ ಬರುವುದೆಂದರೆ ನನಗೆ ಸಂಭ್ರಮ. ಸಂಪ್ರದಾಯ, ಸಂಸ್ಕೃತಿ, ಪಶ್ಚಿಮದ ಸೌಕರ್ಯಗಳು, ಪೂರ್ವದ ಸೌಂದರ್ಯ ಹೀಗೆ ಈ ನಗರದಲ್ಲಿ ಎಲ್ಲವೂ ಇದೆ. ಇಲ್ಲಿನ ಕಲಾವಿದರ ನಡುವೆ ಇರುವ ನಿಕಟ ಸ್ನೇಹವನ್ನು ನಾನು ಬೇರೆ ಯಾವ ನಗರಗಳಲ್ಲಿಯೂ ಕಂಡಿಲ್ಲ’ ಎಂದು ಉದ್ಯಾನನಗರಿಯ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಪ್ರಿಯಾ.

Write A Comment