ಮನೋರಂಜನೆ

ಭಾರತೀಯ ರಂಗಭೂಮಿಯ ಪ್ರವರ್ತಕ-ನಟ ಪೃಥ್ವಿರಾಜ್‌ ಕಪೂರ್ ಮೊಮ್ಮಗಳು ಸಂಜನಾ ಕಪೂರ್ ರಂಗ ಪಯಣ

Pinterest LinkedIn Tumblr

psmec30Sanjna-Kapoor

ಭಾರತೀಯ ರಂಗಭೂಮಿಯ ಪ್ರವರ್ತಕ ಹಾಗೂ ನಟ ಪೃಥ್ವಿರಾಜ್‌ ಕಪೂರ್ ಅವರ ಮೊಮ್ಮಗಳು ಸಂಜನಾ ಕಪೂರ್ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ‘ರಂಗಭೂಮಿ ನಿರ್ವಹಣೆ’ ಕುರಿತು ಹೊಸ ಯೋಜನೆಗಳನ್ನು ಹಾಕಿಕೊಂಡಿರುವ ಅವರು, ಹಲವು ಕಲಾವಿದರ ಗರಡಿ ಮನೆಯಾಗಿದ್ದ ‘ಪೃಥ್ವಿ ಥಿಯೇಟರ್’ನೊಂದಿಗಿನ ನಂಟು ಹಾಗೂ ತಮ್ಮ ರಂಗಪ್ರೀತಿಯ ಕುರಿತು ಮಾತನಾಡಿದರು.

* ನಿಮ್ಮ ಕುಟುಂಬ ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಿದೆ?
ನನ್ನ ಇಡೀ ಕುಟುಂಬದಲ್ಲೇ ನಟನೆ ರಕ್ತಗತವಾಗಿತ್ತು. ಹಾಗಾಗಿ ನಾನೂ ರಂಗಭೂಮಿ ನೆರಳಲ್ಲೇ ಬೆಳೆದವಳು. ನನ್ನ ತಾತ ಪೃಥ್ವಿರಾಜ್ ಕಪೂರ್ ಅವರಿಗೆ ನಾಟಕದೆಡೆಗೆ ಅಪಾರ ಒಲವು. ಅದರಲ್ಲೇ ಜೀವಿಸಿದವರು ಅವರು. ಅಪ್ಪ ಶಶಿ ಕಪೂರ್ ಅವರಿಗೂ ನಟನೆ ವರವಾಗಿತ್ತು. ಅವರ ಆ ಆಸಕ್ತಿ ನನ್ನಲ್ಲೂ ಮುಂದುವರಿದಿದೆ. ನಾನು ಸಾಕಷ್ಟು ಸಿನಿಮಾಗಳನ್ನು ನೋಡುತ್ತೇನೆ. ಆದರೂ ರಂಗಭೂಮಿಯೇ ನನಗೆ ತೃಪ್ತಿ ನೀಡಿರುವುದು. ಎಲ್ಲರಿಗೂ ಒಂದು ಪ್ಯಾಷನ್ ಇರುತ್ತದೆ. ಅದನ್ನು ಕಂಡುಕೊಳ್ಳುವುದೂ ಜೀವನಕ್ಕೆ ತುಂಬಾ ಅಗತ್ಯ. ನಾನು ಈ ವಿಷಯದಲ್ಲಿ ತುಂಬಾ ಅದೃಷ್ಟವಂತೆ. ಏಕೆಂದರೆ ನನ್ನ ಪ್ಯಾಷನ್ ಏನು ಎನ್ನುವುದು ನನ್ನ ಹುಟ್ಟಿನಿಂದಲೇ ನನಗೆ ತಿಳಿದುಬಿಟ್ಟಿತ್ತು.

* ನಿಮ್ಮ ತಾತ ಪೃಥ್ವಿರಾಜ್ ಕಪೂರ್ ಅವರ ಬಗ್ಗೆ ತುಂಬಾ ನೆನಪಿರುವ ಸಂಗತಿ?
ನಾನು ಐದು ವರ್ಷದವಳಿದ್ದಾಗ ಅವರು ತೀರಿಕೊಂಡಿದ್ದು. ಅವರ ಹಾಗೂ ಅವರ ರಂಗಭೂಮಿಯೆಡೆಗಿನ ಆಸಕ್ತಿಯ ಕುರಿತ ಹಲವು ಕಥೆಗಳನ್ನು ಕೇಳಿ ಬೆಳೆದವಳು ನಾನು. 2006ರಲ್ಲಿ ಅವರ ನೂರು ವರ್ಷದ ಜನ್ಮದಿನದ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಈ ಸಂದರ್ಭದಲ್ಲಿ ಅವರ ಬಗೆಗೆ ನಮ್ಮ ತಂಡ ಸಾಕಷ್ಟು ಅಧ್ಯಯನ ನಡೆಸಿತು. ರಂಗಭೂಮಿಗಾಗಿ ಅವರು ಪಟ್ಟ ಶ್ರಮ, ಅದರೆಡೆಗಿನ ತೀರದ ಪ್ರೀತಿ, ನಾಟಕ ಕಂಪೆನಿಯೊಂದಿಗೆ 16 ವರ್ಷದ ಅವರ ಅಲೆದಾಟ, ಯಶಸ್ಸು, ಸವಾಲು ಎಲ್ಲವನ್ನೂ ಕಲೆಹಾಕಿದೆವು. ಈ ಪ್ರಕ್ರಿಯೆಯಲ್ಲಿ ನಾವು ತಿಳಿದುಕೊಂಡಿದ್ದು ಸಾಗರದಷ್ಟು. ಆ ಸಮಾರಂಭದಲ್ಲಿ ತಾತನ ಕಂಪೆನಿಯಿಂದ ಹೊರಬಂದ ಒಂಬತ್ತು ಪ್ರಸಿದ್ಧ ಕಲಾವಿದರು ಅವರ ಬಗೆಗಿನ ನೆನಪುಗಳನ್ನು ಮೆಲುಕು ಹಾಕಿದರು. ಅವರ ರಂಗಭೂಮಿಯ ಕನಸುಗಳು, ಅಚಲ ವಿಶ್ವಾಸ ಎಂಥವರನ್ನೂ ಅಚ್ಚರಿಗೊಳಿಸುವಂಥದ್ದು. ಅವರ ಅಗಲಿಕೆಗೆ ಕೊರಗುವ ಬದಲು ಅವರ ಕೆಲಸಗಳನ್ನು ನೋಡಿ ನಾವೂ ಕಲಿಯುವುದನ್ನು ಶುರುವಿಟ್ಟುಕೊಂಡೆವು.

* ನಿಮ್ಮ ‘ಜುನೂನ್’ ಬಗ್ಗೆ ಹೇಳಿ.
ಸಮೀರಾ ಮತ್ತು ನಾನು ಸೇರಿ ಈ ತಂಡವನ್ನು ಕಟ್ಟಿದ್ದು. ರಂಗಭೂಮಿಯಲ್ಲೇ ನಮ್ಮ ಅಸ್ತಿತ್ವ ಎಂಬ ನಿರ್ಧಾರವನ್ನು ಗಟ್ಟಿ ಮಾಡಿಕೊಂಡೆವು. ನಮ್ಮ ದೊಡ್ಡ ದೊಡ್ಡ ಕನಸು, ಆಸೆಗಳನ್ನು ಸಾಕಾರಗೊಳಿಸಲು ಜುನೂನ್ ಆರಂಭಿಸಿದೆವು. ಇದು ಯುವಜನರಿಗೆ ಒಂದು ವೇದಿಕೆ. ಯಾವುದೇ ತಂಡ ಅಥವಾ ಸ್ಥಳದಲ್ಲಿ ಗುರುತಿಸಿಕೊಳ್ಳದೇ ಈಗಿರುವ ರಂಗತಂಡಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ನಾಟಕ ನೋಡುವುದನ್ನು ಹವ್ಯಾಸದಂತೆ ಬೆಳೆಸುವ, ಜನರಿಗೆ ಹತ್ತಿರ ತರುವ  ಉದ್ದೇಶ ನಮ್ಮದು. ಎಲ್ಲ ವರ್ಗದವರೂ ನಾಟಕ ನೋಡುವಂತಾಗಬೇಕು ಮತ್ತು ಎಲ್ಲರಿಗೂ ಸುಲಭವಾಗಿ ನಿಲುಕುವಂತಿರಬೇಕು. ರಂಗಭೂಮಿ ಮೌಲ್ಯ ಮನರಂಜನೆಗಷ್ಟೇ ಸೀಮಿತವಲ್ಲ ಎಂಬುದನ್ನು ತೋರುವ ಸಣ್ಣ ಯತ್ನವಿದು.

* ಯುವಜನರಲ್ಲಿ ನಾಟಕದೆಡೆಗಿನ ಆಸಕ್ತಿ ಹೇಗಿದೆ?
‘ಜುನೂನ್‌’ನ ಒಂದು ಭಾಗವಾಗಿ ಶಾಲೆಯಲ್ಲಿ ಕಾರ್ಯಕ್ರಮ ನಡೆಸುತ್ತೇವೆ. ಮಕ್ಕಳು ಈ ಕಲೆಯೆಡೆಗೆ ತೆರೆದುಕೊಳ್ಳಬೇಕೆಂಬ ಉದ್ದೇಶ ಇದರದ್ದು. ಮಕ್ಕಳು, ಯುವಜನತೆಯಲ್ಲಿ ನಾಟಕದೆಡೆಗೆ ಆಸಕ್ತಿ ತುಂಬಾ ಇದೆ. ಅವರಿಗೆ ಅವಕಾಶದ ಅಗತ್ಯವಿದೆ. ಕೆಲವರು ಯುವಜನರಲ್ಲಿ ಆಸಕ್ತಿ ಕೊರತೆ ಇದೆ ಎನ್ನುತ್ತಾರೆ. ಅದು ಸುಳ್ಳು. ದಿನೇ ದಿನೇ ಇದರೆಡೆಗೆ ಅವರ ಪ್ರೀತಿ ಬೆಳೆಯುತ್ತಿದೆ ಎಂದು ನನ್ನ ಅನುಭವಕ್ಕೆ ಬಂದಿದೆ.

* ಬೆಂಗಳೂರು ರಂಗ ಸಂಸ್ಕೃತಿ ಬಗ್ಗೆ ನಿಮ್ಮ ಅಭಿಪ್ರಾಯ?
ಇನ್ನೂ ಇಲ್ಲಿ ತಿಳಿದುಕೊಳ್ಳಬೇಕಾದದ್ದು ಬೇಕಾದಷ್ಟಿದೆ. ಇಲ್ಲಿಯ ವಿಷಯಗಳನ್ನು ಓದಬೇಕು, ಇನ್ನಷ್ಟು ಸಮಯವನ್ನು ಇಲ್ಲಿ ಕಳೆಯಬೇಕು. ಇಲ್ಲಿನ ರಂಗಶಂಕರ ಹಾಗೂ ಜಾಗೃತಿ ವೇದಿಕೆ ಯುವಜನರ ಆಸಕ್ತಿಗಳಿಗೆ ಶಕ್ತಿ ತುಂಬುತ್ತಿದೆ ಎಂಬ ಮಾತು ಕೇಳಿ ಸಂತೋಷವಾಯಿತು. ಎಲ್ಲರೂ ಒಂದಾಗಿ ಅವರದ್ದೇ ಅವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ ಎನ್ನಿಸಿತು. ಅದು ತುಂಬಾ ಆಶ್ಚರ್ಯಕರ ಸಂಗತಿ. ನಮ್ಮ ಸ್ಮಾರ್ಟ್‌ ಕಮ್ಮಟದಲ್ಲೂ ಬೆಂಗಳೂರಿನವರು ಇದ್ದರು.

* ಸಿನಿಮಾ ಹಾಗೂ ರಂಗಭೂಮಿ ಇವೆರಡರಲ್ಲಿ ನಿಮ್ಮ ಇಷ್ಟದ್ದು?
ನನಗೆ ರಂಗಭೂಮಿ ಎಂದರೆ ಪ್ರಾಣ. ಅದರಲ್ಲೇ ನನ್ನ ನೆಲೆ.

* ಈಗಿನ ರಂಗ ತಂಡಗಳು ಎದುರಿಸುತ್ತಿರುವ ಸವಾಲು ಯಾವುದು?
ಮೂಲಸೌಕರ್ಯದ ಕೊರತೆ. ಎಷ್ಟೋ ತಂಡಗಳಿಗೆ ಕಟ್ಟಡವೇ ಇರುವುದಿಲ್ಲ. ಹಾಗಾಗಿ ತಾಲೀಮಿನ ಕೊರತೆಯೂ ಆಗುತ್ತದೆ. ಜೊತೆಗೆ ರಂಗ ನಿರ್ವಹಣೆ ಕುರಿತ ತರಬೇತಿಯೂ ಇಲ್ಲ. ಹಣ ಹೊಂದಿಸುವುದು ಇನ್ನೊಂದು ಸವಾಲು.

* ರಂಗಭೂಮಿ ಮೇಲೆ ಸಿನಿಮಾ ಹೇಗೆ ಪರಿಣಾಮ ಬೀರಿದೆ?
ಅದು ಸಣ್ಣ ಮಟ್ಟದ್ದು. ಸಂಗೀತ, ಅಭಿನಯವನ್ನು ಕೊಂಚ ಮಟ್ಟಿಗೆ ಮಾರ್ಪಾಡು ಮಾಡಿಕೊಂಡಿರಬಹುದು. ಆದರೆ  ರಂಗಭೂಮಿ ಅದರ ಹೊರತಾಗಿಯೂ ತನ್ನತನವನ್ನು ಉಳಿಸಿಕೊಂಡಿದೆ. ಅದರದ್ದೇ ಧ್ವನಿ ಬೆಳೆಸಿಕೊಂಡಿದೆ.

* ಬಾಲಿವುಡ್‌ ಕಡೆ ಏಕೆ ಆಕರ್ಷಿತವಾಗಲಿಲ್ಲ?
ನಾನು ಬಾಲಿವುಡ್ ಬಿಟ್ಟಿಲ್ಲ. ಒಂದು ಸಿನಿಮಾ ಮಾಡಿದ್ದೇನಷ್ಟೆ. ಅದರಲ್ಲಿ ನಟಿಸಿದ ಮೇಲೆ ಅಭಿನಯ ತರಬೇತಿಗೆ ಸೇರಿಕೊಂಡಿದ್ದು. ನಂತರ ಪೂರ್ಣ ಆಸಕ್ತಿ ಇಲ್ಲೇ ಬೆಳೆದುಕೊಂಡಿತು.

* ರಂಗಭೂಮಿಯಿಂದ ಸಿನಿಮಾಗೆ ಹೋದವರು ಮತ್ತೆ ನಾಟಕಗಳೆಡೆ ಮುಖ ಮಾಡುವುದಿಲ್ಲ. ಇದಕ್ಕೆ  ಕಾರಣ ಏನು?
ನಾಸಿರುದ್ದೀನ್ ಶಾ ಈ ವಿಷಯಕ್ಕೆ ಒಳ್ಳೆ ಉದಾಹರಣೆ. ಅವರು ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು. ಅಲ್ಲಿಯೂ ಬೆಳೆದು, ಇಲ್ಲಿಯೂ ಉಳಿದವರು. ಈಗಿನವರು ರಂಗಭೂಮಿಯನ್ನು ಸಿನಿಮಾಕ್ಕೆ ಮೆಟ್ಟಿಲಿನಂತೆ ಮಾಡಿಕೊಳ್ಳುತ್ತಾರೆ ಎನ್ನುವ ಅಂಶವೂ ನಿಜ. ಆದರೆ ಕಳೆದ 5–6 ವರ್ಷದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ರಂಗಭೂಮಿಯನ್ನೇ ನೆಚ್ಚಿಕೊಂಡು ಇದರಲ್ಲಿ ತೊಡಗಿಸಿಕೊಳ್ಳಲು ಯುವಕರು ಇಷ್ಟಪಡುತ್ತಿದ್ದಾರೆ.

Write A Comment