ಮನೋರಂಜನೆ

ಹೊಸ ದಾರಿಯಲ್ಲಿ ಮಂಗಳೂರಿನ ಅನುಪಮ ಪಯಣ

Pinterest LinkedIn Tumblr

psmec23Anupama

ತಮ್ಮ ಹುಟ್ಟೂರು ಮಂಗಳೂರಿನಲ್ಲಿಯೇ ಬಾಲ್ಯ ಕಳೆದ ಅನುಪಮಾ ಭಟ್, ಹೈಸ್ಕೂಲ್‌ ಹೊತ್ತಿಗಾಗಲೇ ಬೆಂಗಳೂರು ಸೇರಿಯಾಗಿತ್ತು. ದೊಡ್ಡ ಸ್ನೇಹಬಳಗದಲ್ಲಿ ಬೆಳೆದ ಇವರಿಗೆ ಮಹಾನಗರಕ್ಕೆ ಬಂದಾಕ್ಷಣ ತೀರಾ ಒಂಟಿ ಅನ್ನಿಸತೊಡಗಿತು. ಬರೀ ಓದಿನಲ್ಲಿ ಮುಳುಗಿಹೋಗುವ ಬೇಜಾರಿನಿಂದ ಹೊರಬರಲಿಕ್ಕಾಗಿ ಅವರು ಗಮನ ಹರಿಸಿದ್ದು ಟೀವಿ ಜಗತ್ತಿನತ್ತ.

‘ಏನಾಗುತ್ತದೋ ನೋಡುವಾ’ ಎಂಬ ಭಾವದಲ್ಲಿಯೇ ಉದಯ ಟೀವಿ ಆ್ಯಂಕರಿಂಗ್‌ ಆಡಿಷನ್‌ಗೆ ಹಾಜರಾದ ಅನುಪಮಾ ನಿರೂಪಕಿಯಾಗಿ ಆಯ್ಕೆಯಾಗಿ ಕ್ಯಾಮೆರಾ ಎದುರು ನಿಂತಾಗ ಅವರಿಗಿನ್ನೂ 13 ವರ್ಷ. ಹೀಗೆ 2005ರಲ್ಲಿ ವೃತ್ತಿಬದುಕನ್ನು ಆರಂಭಿಸಿದ ಅನುಪಮಾ 2013ರವರೆಗೆ ಅನೇಕ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳಲ್ಲಿ ನಿರೂಪಕಿಯಾಗಿ ಮಾತಿನ ಮಾಲೆ ಪೋಣಿಸಿದ್ದಾರೆ.

ರಿಯಾಲಿಟಿ ಷೋನತ್ತ
ಎಂಟು ವರ್ಷಗಳ ನಿರಂತರ ನಿರೂಪಕಿ ವೃತ್ತಿ ಅನುಪಮಾ ಅವರಲ್ಲಿ ಏಕತಾನತೆ ಹುಟ್ಟಿಸಲು ಶುರುಮಾಡಿತ್ತು. ಭಿನ್ನವಾದದ್ದನ್ನೇನಾದರೂ ಮಾಡಬೇಕು ಎಂದು ಮನಸ್ಸು ಚಡಪಡಿಸುತ್ತಿರುವಾಗಲೇ ‘ಈ ಟೀವಿ’ಯಿಂದ ‘ಡಾನ್ಸಿಂಗ್ ಸ್ಟಾರ್‌’ ರಿಯಾಲಿಟಿ ಷೋದಲ್ಲಿ ಭಾಗವಹಿಸುವಂತೇ ಕರೆ ಬಂತು. ಚಿಕ್ಕಂದಿನಿಂದಲೇ ಡಾನ್ಸ್‌ನಲ್ಲಿ ಆಸಕ್ತಿಯಿದ್ದುದರಿಂದ ಖುಷಿಯಿಂದಲೇ ಒಪ್ಪಿಕೊಂಡರು. ಇದುವರೆಗೆ ಮಾತಿನ ಮಲ್ಲಿಯಾಗಿ ಮನೆಮನೆ ತಲುಪಿದ್ದ ಅನುಪಮಾ ‘ಡಾನ್ಸಿಂಗ್‌ ಸ್ಟಾರ್‌’ ಷೋ ಮೂಲಕ ನೃತ್ಯಗಾತಿಯಾಗಿ ಜನಪ್ರಿಯರಾದರು.
ಈ ಯಶಸ್ಸೇ ಅವರನ್ನು ‘ಬಿಗ್‌ ಬಾಸ್‌’ ಮನೆಬಾಗಿಲಿಗೂ ಕರೆದೊಯ್ದಿತು. ‘ಬಿಗ್‌ ಬಾಸ್‌’ . ರಿಯಾಲಿಟಿ ಷೋದಲ್ಲಿ ಅನುಪಮಾ ಪ್ರೇಕ್ಷಕರಿಗೆ ಇನ್ನಷ್ಟು ಆಪ್ತರಾದರು.

ವೃತ್ತಿಜೀವನದಲ್ಲಿ ಹೊಸ ಕವಲು
‘ಬಿಗ್‌ಬಾಸ್‌’ ಮನೆಯಿಂದ ಹೊರಬಂದಾಗ ಅನುಪಮಾ ಸಾಕಷ್ಟು ಜನಪ್ರಿಯರಾಗಿದ್ದರು. ಈ ಪ್ರಸಿದ್ಧಿಯ ಜಾಡು ಹಿಡಿದೇ ಸಿನಿಮಾ, ಕಿರುತೆರೆಗಳಲ್ಲಿ ಸಾಕಷ್ಟು ಅವಕಾಶಗಳೂ ಅರಸಿ ಬಂದವು. ‘ಅವಕಾಶಗಳೇನೋ ಸಾಕಷ್ಟು ಬಂದವು. ಆದರೆ ಅವ್ಯಾವವೂ ನನಗೆ ಕನ್ವಿನ್ಸಿಂಗ್‌ ಆಗಲಿಲ್ಲ. ಹಾಗೆ ಪೂರ್ತಿ ನೂರಕ್ಕೆ ನೂರರಷ್ಟು ಒಪ್ಪಿತವಾಗದೇ ಯಾವ ಅವಕಾಶವನ್ನೂ ನಾನು ಒಪ್ಪಿಕೊಳ್ಳುವುದಿಲ್ಲ.’ ಎನ್ನುವ ಅನುಪಮಾ, ಝೀ ಟೀವಿಯಲ್ಲಿ ವಿನು ಬಳಂಜ ನಿರ್ದೇಶನದ ‘ಲವ್‌ ಲವಿಕೆ’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಕ್ಕಾಗ ಮಾತ್ರ ಪೂರ್ತಿ ಸಂತೋಷದಿಂದ ಒಪ್ಪಿಕೊಂಡರು.

‘ನಾನು ವಿನು ಬಳಂಜ ಅವರ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿ ನೋಡಿಕೊಂಡೇ ಬೆಳೆದವಳು. ಅವರ ಧಾರಾವಾಹಿಯ ಮೂಲಕವೇ ನಟನೆಯನ್ನು ಆರಂಭಿಸಲು ಅವಕಾಶ ಸಿಕ್ಕಾಗ ಖುಷಿಯಿಂದ ಒಪ್ಪಿಕೊಂಡೆ’ ಎಂದು ವಿವರಿಸುತ್ತಾರೆ ಅನುಪಮಾ.

ಅಲ್ಲದೇ ಈ ಧಾರಾವಾಹಿಯ ವಸ್ತು ಮತ್ತು ಪಾತ್ರ ಅವರಿಗೆ ತುಂಬಾ ಇಷ್ಟವಾಗಿದೆ. ತನ್ನ ಪಾತ್ರದ ಕುರಿತು ಅವರು ವಿವರಿಸುವುದು ಹೀಗೆ:
‘‘ಸಾಮಾನ್ಯವಾಗಿ ಧಾರಾವಾಹಿಗಳು ‘ಅಳುಮುಂಜಿ’ ಹೆಣ್ಣಿನ ಪಾತ್ರಗಳೇ ಹೆಚ್ಚು. ಆದರೆ ಈ ಪಾತ್ರ ವಿಭಿನ್ನವಾಗಿದೆ. ಈ ಧಾರಾವಾಹಿಯ ನಾಯಕಿ ಭಾವನಾತ್ಮಕ ಮನಸ್ಸಿರುವವಳು. ಆದರೆ ಅಳುಮುಂಜಿಯಲ್ಲ. ತನ್ನ ನೋವುಗಳೆಷ್ಟೇ ಇದ್ದರೂ ಅದನ್ನು ಮುಚ್ಚಿಟ್ಟುಕೊಂಡು ಸದಾ ಖುಷಿ ಖುಷಿಯಾಗಿರುವ ಹುಡುಗಿಯ ಪಾತ್ರವಿದು.’ ಎನ್ನುವ ಈ ಮುಕ್ತನಗುವಿನ ಹುಡುಗಿಯ ಧಾರಾವಾಹಿ ಪಾತ್ರದ ಹೆಸರೂ ಅನುಪಮಾ. ಬರೀ ಪಾತ್ರದಲ್ಲಿಯಷ್ಟೇ ಅಲ್ಲ. ನಿಜಜೀವನದಲ್ಲಿಯೂ ತನ್ನ ಮತ್ತು ‘ಲವ್‌ ಲವಿಕೆ’ ನಾಯಕಿಯ ನಡುವೆ ಸಾಕಷ್ಟು ಹೋಲಿಕೆಗಳಿವೆ ಎಂಬುದು ಅನುಪಮಾ ಅಂಬೋಣ.

ಈ ಕ್ಷಣದಲ್ಲಿ ಬದುಕುವವಳು
ವೃತ್ತಿ ಜೀವನದ ಮುಂದಿನ ಹೆಜ್ಜೆಯ ಬಗ್ಗೆ ಪ್ರಶ್ನಿಸಿದರೆ ‘ನಾನು ಈ ಕ್ಷಣದಲ್ಲಿ ಬದುಕುವವಳು. ಇನ್ನು ಹತ್ತು ವರ್ಷದ ನಂತರ ಏನಾಗಿರಬೇಕು ಎಂದು ನಾನು ಎಂದಿಗೂ ಯೋಚಿಸಿಲ್ಲ. ಈ ಗಳಿಗೆಯನ್ನು ಪೂರ್ತಿ ಸಂತೋಷದಿಂದ ಜೀವಿಸಬೇಕು ಎಂಬುದು ನನ್ನ ಪಾಲಿಸಿ. ಸಿನಿಮಾ ಆಗಲಿ ಧಾರಾವಾಹಿಯಾಗಲಿ, ನನಗೆ ತೃಪ್ತಿ ನೀಡುವ ಅವಕಾಶ ಬಂದರೆ ಮಾಡುತ್ತೇನೆ.’ ಎನ್ನುತ್ತಾರೆ.

ಡಯಟ್‌ ಗಿಯಟ್‌ ಕೇಳಬೇಡಿ.
ಡಯಟ್‌ ಏನಾದ್ರೂ ಮಾಡ್ತೀರಾ? ಎಂದು ಕೇಳಿದರೆ ‘ನನ್ನ ನೋಡಿದ್ರೆ ಡಯಟ್‌ ಮಾಡೋಳ ಥರ ಕಾಣ್ತೀನಾ?’ ಎಂದು ಮರುಪ್ರಶ್ನೆ ಎಸೆಯುತ್ತಾರೆ ಅನುಪಮಾ. ಬರೀ ಕ್ಯಾರೆಟ್‌, ಸೌತೆಕಾಯಿ ತಿಂದುಕೊಂಡು ಬದುಕುವುದು ಇವರಿಗೆ ಬಲೇ ಬೋರು. ಹಾಗೆಂದು ತಿಂಡಿಪೋತೆಯೂ ಅಲ್ಲ. ಆದರೆ ವೈವಿಧ್ಯಮಯ ತಿನಿಸುಗಳನ್ನು ಆಸ್ವಾದಿಸುವುದು ಇವರ ಸ್ವಭಾವ. 20 ಕಿ.ಮೀ ಡ್ರೈವ್‌ ಮಾಡಿಕೊಂಡು ಹೋಗಿ ಒಂದೇ ಒಂದು ಪಾನಿಪೂರಿ ತಿಂದು ಬಂದಿದ್ದೂ ಇದೆಯಂತೆ.
‘ಸದಾ ಸಂತೋಷವಾಗಿರಬೇಕು ಎನ್ನುವುದು ನನ್ನ ತತ್ವ. ಆದ್ದರಿಂದಲೇ ಸದಾ ನಗುನಗುತ್ತಿರುತ್ತೇನೆ’ ಎನ್ನುವ ಈ ಹೊಳಪುಗಣ್ಣಿನ ಹುಡುಗಿಯನ್ನು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಕಣ್ತುಂಬಿಕೊಳ್ಳಬಹುದು.

Write A Comment