ಮನೋರಂಜನೆ

‘ಗೊಂಬೆಗಳ ಲವ್‌’ ಹುಡುಗಿ ನಟಿ ಪಾವನಾ ಚಿತ್ತ ಗ್ಲಾಮರ್‌ನತ್ತ!

Pinterest LinkedIn Tumblr

pavana

ನಟಿ ಪಾವನಾ ಎಂದೊಡನೆ ನೆನಪಾಗುವುದು ‘ಗೊಂಬೆಗಳ ಲವ್‌’ ಮತ್ತು ‘ಜಟ್ಟ’ ಚಿತ್ರಗಳು. ಮೊಗಕ್ಕೆ ಬಣ್ಣ ತೀಡುವುದಕ್ಕಿಂತ ಪಾತ್ರದ ಭಾವಗಳಿಗೆ ರಂಗು ತುಂಬಬೇಕು’ ಎನ್ನುವ ತಮ್ಮ ನಿಲುವನ್ನು ಜತೆಯಲ್ಲಿರಿಸಿಕೊಂಡೇ ಗ್ಲಾಮರ್‌ ಆಗಿಯೂ ಕಾಣಿಸಿಕೊಳ್ಳುವ ದೃಢ ನಿರ್ಧಾರ ಅವರದು. ಗುರುವಾರ (ಜ.15) ತೆರೆಗೆ ಬಂದಿರುವ ‘ಜಾಕ್ಸನ್’ ತಮ್ಮ ವೃತ್ತಿ ಬದುಕಿಗೆ ಹೊಸ ಹಾದಿ ತೋರುತ್ತದೆ ಎನ್ನುವ ನಂಬಿಕೆ ಮತ್ತು ನಿರೀಕ್ಷೆ ಅವರದ್ದು.

* ನಿಮ್ಮ ವೃತ್ತಿ ಬದುಕಿನಲ್ಲಿ ‘ಜಾಕ್ಸನ್‌’ ಚಿತ್ರವನ್ನು ಹೇಗೆ ಗುರ್ತಿಸಬಹುದು?
‘ಗೊಂಬೆಗಳ ಲವ್‌’ ಚಿತ್ರ ನೋಡಿ ‘ಜಾಕ್ಸನ್‌’ ನಿರ್ಮಾಪಕರು ನನ್ನ ಆಯ್ಕೆ ಮಾಡಿಕೊಂಡಿದ್ದು. ಕಳೆದ ವರುಷ ಪೂರ್ಣವಾಗಿ ‘ಜಾಕ್ಸನ್‌’ ಚಿತ್ರದಲ್ಲಿಯೇ ತೊಡಗಿದ್ದೆ. ಸಿನಿಮಾಗಳ ಆಯ್ಕೆಯಲ್ಲಿ ನಾನು ಹೆಚ್ಚು ಚ್ಯೂಸಿ. ನನಗೆ ಹೆಸರು ತಂದುಕೊಟ್ಟ ಚಿತ್ರಗಳಲ್ಲಿ ಡಿಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೆ. ಇಲ್ಲಿ ಒಬ್ಬ ಕಾಲೇಜು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.

ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ– ಅದರಲ್ಲೂ ಸ್ಟಾರ್ ನಟನ ಜತೆ ನಟಿಸಿರುವ ಮೊದಲ ಚಿತ್ರ ಇದು. ಈ ಮೊದಲು ನನ್ನನ್ನು ನಿರ್ದೇಶಕರು ನೋಡುತ್ತಿದ್ದ ಕ್ರಮ ‘ಜಾಕ್ಸನ್‌’ನಿಂದ ಬದಲಾಗಲಿದೆ. ಈ ವರುಷದ ಮೊದಲ ಸಿನಿಮಾ ಖಂಡಿತಾ ಹೊಸ ಹಾದಿ ತೋರಲಿದೆ. ಈ ಬಗ್ಗೆ ಖಚಿತ ವಿಶ್ವಾಸವೂ ಇದೆ.

* ನಿಮ್ಮ ಪಾತ್ರ..? ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೀರಿ ಎನ್ನುವ ಮಾತಿದೆ?
‘ಜಾಕ್ಸನ್’ನ ಮನೆಯ ಎದುರು ಮನೆಯಲ್ಲಿ ವಾಸಿಸುವ ಹುಡುಗಿ. ಚಿಕ್ಕಂದಿನಿಂದಲೂ ಆಕೆಯನ್ನು ಜಾಕ್ಸನ್ ಪ್ರೀತಿಸುತ್ತಿರುತ್ತಾನೆ. ಆದರೆ ಆಕೆ ಅದನ್ನು ತಿರಸ್ಕರಿಸುತ್ತಿರುತ್ತಾಳೆ. ಆದರೆ ಆತ ಆಕೆಯ ಬೆನ್ನು ಬಿದ್ದಿರುತ್ತಾನೆ. ದೊಡ್ಡಮಟ್ಟದಲ್ಲಿ ಗ್ಲಾಮರ್ ಆಗಿಯೇನೂ ಕಾಣಿಸಿಕೊಂಡಿಲ್ಲ. ಪಾತ್ರಕ್ಕೆ ಅಗತ್ಯವಿರುವ ಸಾಮಾನ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಹಿಂದಿನ ಚಿತ್ರಗಳಲ್ಲಿ ಪೌಡರ್ ಮತ್ತು ಫೇರ್ ಅಂಡ್ ಲವ್ಲಿ ಇರಲಿಲ್ಲ. ಇಲ್ಲಿ ಅದೆಲ್ಲವೂ ಇದೆ.

* ವೃತ್ತಿ ಬದುಕಿನ ಆರಂಭದಲ್ಲಿ ಉತ್ತಮ ಹೆಸರು ಗಳಿಸಿದರೂ, ಅವಕಾಶಗಳು ಬಂದಿದ್ದು ಕಡಿಮೆ ಅಲ್ಲವೇ?
ನಿಜ. ಒಂದೇ ವರುಷದಲ್ಲಿ ‘ಗೊಂಬೆಗಳ ಲವ್‌’ ಮತ್ತು ‘ಜಟ್ಟ’ ಚಿತ್ರದಲ್ಲಿ ತೊಡಗಿ ಉತ್ತಮ ಹೆಸರು ಪಡೆದೆ. ಅವು ಗ್ಲಾಮರ್ ಇಲ್ಲದ ಪಾತ್ರಗಳು. ದೊಡ್ಡ ನಿರ್ದೇಶಕರು, ನಿರ್ಮಾಪಕರು ಫೋನ್ ಮಾಡಿ ‘ಕನ್ನಡ ಚಿತ್ರರಂಗಕ್ಕೆ ನಿಮ್ಮಂಥ ಪ್ರತಿಭೆಗಳು ಬೇಕು, ಮತ್ತಷ್ಟು ಒಳ್ಳೆಯ ಚಿತ್ರಗಳನ್ನು ನೀಡಿ’ ಎಂದು ಬೆನ್ನು ತಟ್ಟಿದರು. ಆದರೆ ಇವರಾರೂ ತಮ್ಮ ದೊಡ್ಡ ಬ್ಯಾನರ್‌ನ ಚಿತ್ರಗಳಲ್ಲಿ ಅವಕಾಶ ಕೊಡಲಿಲ್ಲ.

ಹಾಗೆಂದು ನಾನು ಯಾರನ್ನೂ ದೂರುತ್ತಿಲ್ಲ. ಬಹುಶಃ ಪಾತ್ರಗಳಿಂದ ಹೊರಗೆ ಉಳಿಯಲು ಡಿಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೇ ಕಾರಣ ಇರಬಹುದು. ಹಲವು ಚಿತ್ರಗಳಿಗೆ ಆಯ್ಕೆ  ಸಂದರ್ಭದಲ್ಲಿ ನನ್ನ ಹೆಸರು ಪ್ರಸ್ತಾಪವಾಗಿತ್ತು. ಆದರೆ ನನ್ನ ಹಿಂದಿನ ಎರಡು ಚಿತ್ರಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಪಾತ್ರಕ್ಕೆ ಸರಿಹೊಂದುವುದಿಲ್ಲ ಎಂದು ನನ್ನ ಕೈಬಿಟ್ಟಿದ್ದಾರೆ.

* ಈವರೆಗೆ ಬರೀ ಸದಭಿರುಚಿಯ, ಪ್ರಯೋಗಾತ್ಮಕ ನಿರ್ದೇಶಕರ ಗಮನವನ್ನು ಮಾತ್ರ ಸೆಳೆದಿದ್ದೀರಲ್ಲಾ?
ಹೌದು. ನಾನು ಇಲ್ಲಿಯವರೆಗೂ ತೆರೆಯ ಮೇಲೆ ಕಲರ್‌ಪುಲ್ ಆಗಿ ಕಾಣಿಸಿಕೊಂಡಿಲ್ಲ. ಅಲ್ಲದೆ ಬಹುಮಂದಿ ನನ್ನನ್ನು ಚಿತ್ರಗಳಲ್ಲಿ ನೋಡಿದ್ದಾರೆಯೇ ಹೊರತು ನೇರವಾಗಿ ನೋಡಿಲ್ಲ. ನಾನು ಇಂಥ ಪಾತ್ರಗಳಿಗೇ ಸೂಕ್ತ ಎನ್ನುವ ಭಾವನೆ ಅವರಲ್ಲಿ ಇರಬಹುದು. ಪಾತ್ರಗಳಿಗೆ ಎಷ್ಟು ನ್ಯಾಯ ಒದಗಿಸಬೇಕೋ ಅದನ್ನು ಮಾಡಿದ್ದೇನೆ. ನನ್ನ ಈಗಲೂ ಗುರ್ತಿಸುವುದು ಮೊದಲ ಎರಡು ಚಿತ್ರಗಳಿಂದಲೇ. ಕಮರ್ಷಿಯಲ್ ಚಿತ್ರ ‘ಟಿಪಿಕಲ್ ಕೈಲಾಸ್‌’ನಲ್ಲಿ ನಟಿಸಿದರೂ ಅದು ಗುರ್ತಾಗಲಿಲ್ಲ. ಹಿಂದಿನ ಎರಡು ಚಿತ್ರಗಳೇ ನನಗೆ ಬದುಕು ಕೊಟ್ಟಿದ್ದು. ಅವಕಾಶಗಳು ತಡವಾದರೂ ಸರಿ; ಸಿಕ್ಕಿರುವ ಹೆಸರನ್ನು ಉಳಿಸಿಕೊಂಡು ಹೋಗಬೇಕು ಎನ್ನುವುದು ನನ್ನ ನಿಲುವು.

* ಸಿನಿಮಾಕ್ಕೆ ಗ್ಲಾಮರ್ ಅನಿವಾರ್ಯ ಎನ್ನುವ ಭಾವನೆ ಬಂದಿದೆಯೇ?
ಗ್ಲಾಮರ್ ಅನಿವಾರ್ಯವೇ ಇಲ್ಲವೇ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಸಿನಿಮಾ ಪ್ರಪಂಚವೇ ಗ್ಲಾಮರ್. ಸಿನಿಮಾಕ್ಕೆ ಹೋಗುವುದು ಮನರಂಜನೆಗಾಗಿ ಹಾಗೂ ಚೆನ್ನಾಗಿ ಕಾಣಿಸುವುದನ್ನು ನೋಡುವುದಕ್ಕಾಗಿ. ಇಂದಿನ ಮಾರುಕಟ್ಟೆ ಮತ್ತು ಬದುಕಿನ ಶೈಲಿಯಲ್ಲಿ ಗ್ಲಾಮರ್ ಮುಖ್ಯವಾಗುತ್ತದೆ. ಸೌಂದರ್ಯ ಎನ್ನುವುದು ಕೇವಲ ಸಿನಿಮಾಕ್ಕೆ ಮಾತ್ರ ಅಲ್ಲ ನಿತ್ಯ ಜೀವನಕ್ಕೂ ಬೇಕು. ಸೌಂದರ್ಯವಾಗಿದ್ದರೆ ಅದು ಸಿನಿಮಾಕ್ಕೆ ಒಂದು ಪ್ಲಸ್ ಆಗುತ್ತದೆ.

ಚಿತ್ರರಂಗದಲ್ಲಿ ಅಂತಿಮವಾಗಿ ಗ್ಲಾಮರ್ ಮುಖ್ಯ ಎನ್ನುವುದು ಸತ್ಯ. ಅದು ನನ್ನಲ್ಲಿಯೂ ಇತ್ತು. ನನ್ನ ಕಡೆಯಿಂದ ತಪ್ಪುಗಳಾಗಿವೆ ಎನಿಸಿತು. ಎರಡು ಚಿತ್ರಗಳಲ್ಲಿ ನಟಿಸಿದ ನಂತರ ಟಿಪಿಕಲ್, ಡಿಗ್ಲಾಮರ್ ರೀತಿ ಇದ್ದೇನೆಯೇ ಎನ್ನುವ ಭಾವನೆ ನನ್ನ ಬಗ್ಗೆ ನನಗಿತ್ತು. ಈಗ ಪ್ರೊಪೈಲ್ ಸಿದ್ಧಮಾಡಿಕೊಂಡಿರುವೆ. ಜಾಕ್ಸನ್‌ ನಂತರ ಫೋಟೊ ಶೂಟ್ ಮಾಡಿಸಿದ್ದೇನೆ. ಈ ಹಿನ್ನೆಲೆಯಲ್ಲಿಯೇ ನೋಡುವುದಾದರೆ ಇನ್ನು ಮುಂದೆ ಕಮರ್ಷಿಯಲ್ ಚಿತ್ರಗಳ ಹಾದಿ ತೆರೆದುಕೊಳ್ಳಲು ‘ಜಾಕ್ಸನ್’ ಒಂದು ಉತ್ತಮ ರಹದಾರಿ. ನನಗೆ ಈ ಚಿತ್ರದ ಬಗ್ಗೆ ಅಪಾರವಾದ ಕುತೂಹಲವಿದೆ.

* ಏಕೆ ಈ ಕುತೂಹಲ?
ತುಂಬಾ ಕಾಯ್ದು ಕಾಯ್ದು ಸಿನಿಮಾ ಮಾಡಿದ್ದೇನೆ. ಹೆಸರು ಮಾಡಿದ ನಂತರ ಉಳಿಸಿಕೊಳ್ಳುವುದು ಮುಖ್ಯ. ಒಂದು ಸಿನಿಮಾ ಜರ್ನಿಯನ್ನು ಕಟ್ ಮಾಡಬಾರದು. ಅದನ್ನು ಬೆಳೆಸಬೇಕು. ಈ ಕಾರಣಕ್ಕೆ ‘ಜಾಕ್ಸನ್‌’ ನನ್ನ ಬೆಳವಣಿಗೆಗೆ ವಿಸ್ತಾರವಾದ ವೇದಿಕೆ ಆಗುವುದಷ್ಟೇ ಅಲ್ಲ ಪ್ರೇಕ್ಷಕರೂ ಬೇರೆಯ ರೀತಿ ಗುರ್ತಿಸುತ್ತಾರೆ.

* ಮುಂದಿನ ದಿನಗಳಲ್ಲಿ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಾರವಿದೆಯೇ?
ಗ್ಲಾಮರ್, ಡಿಗ್ಲಾಮರ್ ಎಂದು ನಾನು ಪಾತ್ರಗಳನ್ನು ನೋಡುವುದಿಲ್ಲ. ಡಿಗ್ಲಾಮರ್ ಪಾತ್ರಗಳು ಕಷ್ಟ. ಆ ಚಿತ್ರಗಳಿಂದ ಗುರ್ತು ನಿಧಾನವಾಗುತ್ತದೆ. ಆದರೆ ‘ಖತಂ’ ಆಗುವುದಿಲ್ಲ. ಅದಕ್ಕೆ ನಾನೇ ನಿದರ್ಶನ! ಪಾತ್ರ ಏನನ್ನು ಬೇಡುತ್ತದೆ ಎಂದು ನೋಡುವೆ. ಹೆಚ್ಚೆಚ್ಚು ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಯೋಚನೆ ಮತ್ತು ನಿರ್ಧಾರವಿದೆ. ಅದಕ್ಕಾಗಿ ವರ್ಕ್‌ಔಟ್ ಸಹ ನಡೆಯುತ್ತಿದೆ.

* ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ನಿಮ್ಮ ಹೆಸರು ಬದಲಾಯಿಸಿಕೊಂಡಿದ್ದಿರಿ; ಈಗ ಯಾವ ಹೆಸರು?
ಅಮ್ಮ– ಅಮ್ಮ ಆಶೀರ್ವದಿಸಿ ಇಟ್ಟ ಹೆಸರು ಪಾವನಾ. ಇನ್ನು ಮುಂದೆ ನಾನು ವೃಂದಾ ಅಲ್ಲ, ಪಾವನಾ. ಈ ಚಿತ್ರದ ನಂತರ ಕುಮುದಾ ಎಂದೂ ಕರೆಯಬಹುದು.

* ಮುಂದಿನ ಚಿತ್ರಗಳು ಯಾವುವು?
ಸದ್ಯ ‘ಆಟಗಾರ’. ಇದು ಒಂದು ರೀತಿ ಕಮರ್ಷಿಯಲ್ ಸಿನಿಮಾ. ಅದು ಯಾವ ರೀತಿ ಕಮರ್ಷಿಯಲ್ ಸಿನಿಮಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Write A Comment