ಜ್ಯೂರಿಚ್ (ಎಎಫ್‌ಪಿ): ಪೋರ್ಚುಗಲ್ ಫುಟ್‌ಬಾಲ್ ತಂಡ ಖ್ಯಾತ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ‘ಫಿಫಾ ವರ್ಷದ ಆಟಗಾರ’ ಗೌರವ ತಮ್ಮದಾಗಿಸಿಕೊಂಡಿದ್ದಾರೆ.
ವರ್ಷದ ಆಟಗಾರನಿಗೆ ನೀಡುವ ‘ಬಲನ್ ಡಿ’ಓರ್’ ಪ್ರಶಸ್ತಿಯನ್ನು ಸೋಮವಾರ ರಾತ್ರಿ ಇಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅವರು ಪಡೆದರು.
29ರ ಹರೆಯದ ರೊನಾಲ್ಡೊ ಮೂರನೇ ಬಾರಿ ಈ ಗೌರವ ಪಡೆದಿದ್ದಾರೆ. ರಿಯಲ್ ಮ್ಯಾಡ್ರಿಡ್ ಕ್ಲಬ್‌ಗೆ ಆಡುವ ಈ ಮುನ್ನಡೆ ಆಟಗಾರ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿದರು. ಹೋದ ವರ್ಷ ಕೂಡಾ ರೊನಾಲ್ಡೊ ಅರ್ಜೆಂಟೀನಾದ ಆಟಗಾರನನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದುಕೊಂಡಿದ್ದರು.
181 ರಾಷ್ಟ್ರಗಳ ಫುಟ್‌ಬಾಲ್ ತಂಡಗಳ ಕೋಚ್‌ಗಳು, 182 ರಾಷ್ಟ್ರೀಯ ತಂಡಗಳ ನಾಯಕರು ಮತ್ತು 181 ಕ್ರೀಡಾ ಪತ್ರಕರ್ತರು ಮತದಾನದ ಮೂಲಕ ‘ಫಿಫಾ ವರ್ಷದ ಆಟಗಾರ’ನನ್ನು ಆಯ್ಕೆ ಮಾಡಿದರು.
ರೊನಾಲ್ಡೊ ಶೇ. 37.66 ಮತಗಳನ್ನು ಪಡೆದರೆ, ಮೆಸ್ಸಿ ಶೇ. 15.72 ಮತಗಳನ್ನು ಗಳಿಸಿದರು. ಶೇ 15.72 ಮತಗಳನ್ನು ಪಡೆದ ಜರ್ಮನಿ ತಂಡದ ಗೋಲ್‌ಕೀಪರ್ ಮ್ಯಾನುಯೆಲ್ ನುಯೆರ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರು.
2014ರ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರೊನಾಲ್ಡೊ ಒಟ್ಟು 61 ಗೋಲುಗಳನ್ನು ಗಳಿಸಿದ್ದರು. ಇವರ ಆಟದ ಬಲದಿಂದ ರಿಯಲ್ ಮ್ಯಾಡ್ರಿಡ್ ಯೂರೋಪಿಯನ್ ಚಾಂಪಿಯನ್ಸ್ ಲೀಗ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿತ್ತು. 12 ವರ್ಷಗಳ ಬಿಡುವಿನ ಬಳಿಕ ತಂಡ ಈ ಸಾಧನೆ ಮಾಡಿತ್ತು. ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ 11 ಪಂದ್ಯಗಳಿಂದ 17 ಗೋಲುಗಳನ್ನು ಗಳಿಸಿದ್ದರಲ್ಲದೆ, ಮೆಸ್ಸಿ ಹೆಸರಿನಲ್ಲಿದ್ದ (15 ಗೋಲು) ದಾಖಲೆಯನ್ನು ಮುರಿದಿದ್ದರು.
ಪ್ರಶಸ್ತಿ ಸ್ವೀಕರಿಸುವ ವೇಳೆ ರೊನಾಲ್ಡೊ ಭಾವುಕರಾದರು. ಅವರ ತಾಯಿ ಹಾಗೂ ಪುತ್ರ ಈ ವೇಳೆ ಹಾಜರಿದ್ದರು. ‘ಅಪ್ಪ, ಅಮ್ಮ ಹಾಗೂ ಕುಟುಂಬದ ಎಲ್ಲರಿಗೂ ಧನ್ಯವಾದಗಳು. ನನ್ನ ಅಪ್ಪ ಈಗ ಜೀವಿಸಿಲ್ಲ. ಅವರು ಸ್ವರ್ಗದಿಂದಲೇ ಎಲ್ಲವನ್ನೂ ನೋಡುತ್ತಿದ್ದಾರೆ’ ಎಂದು ರೊನಾಲ್ಡೊ ಹೇಳಿದರು.
ಜರ್ಮನಿ ತಂಡದ ಜೋಕಿಮ್ ಲೋವ್ ‘ವರ್ಷದ ಕೋಚ್’ ಗೌರವ ಪಡೆದರೆ, ವರ್ಷದ ಶ್ರೇಷ್ಠ ಗೋಲು ಗಳಿಸಿದ ಆಟಗಾರನಿಗೆ ನೀಡುವ ಪ್ರಶಸ್ತಿಯನ್ನು ಕೊಲಂಬಿಯದ ಜೇಮ್ಸ್ ರಾಡ್ರಿಗಸ್ ತಮ್ಮದಾಗಿಸಿಕೊಂಡರು. 2014ರ ವಿಶ್ವಕಪ್‌ನಲ್ಲಿ ಉರುಗ್ವೆ ವಿರುದ್ಧ ಅವರು ಶ್ರೇಷ್ಠ ಗೋಲು ಗಳಿಸಿದ್ದರು. ಜರ್ಮನಿಯ ನಾಡಿನ್ ಕೆಸ್ಲೆರ್ ‘ಫಿಫಾ ವರ್ಷದ ಆಟಗಾರ್ತಿ’ ಪ್ರಶಸ್ತಿಗೆ ಆಯ್ಕೆಯಾದರು. ಫಿಫಾ ‘ವಿಶ್ವ ಇಲೆವೆನ್’ ತಂಡವನ್ನು ಇದೇ ವೇಳೆ ಹೆಸರಿಸಲಾಯಿತು.
ತಂಡ ಹೀಗಿದೆ: ಗೋಲ್‌ಕೀಪರ್: ಮ್ಯಾನುಯೆಲ್ ನುಯೆರ್ (ಜರ್ಮನಿ)
ಡಿಫೆಂಡರ್ಸ್: ಡೇವಿಡ್ ಲೂಯಿಜ್ (ಬ್ರೆಜಿಲ್), ತಿಯಾಗೊ ಸಿಲ್ವ (ಬ್ರೆಜಿಲ್), ಸೆರ್ಜಿಯೊ ರಮೊಸ್ (ಸ್ಪೇನ್), ಫಿಲಿಪ್ ಲಾಮ್ (ಜರ್ಮನಿ)
ಮಿಡ್‌ಫೀಲ್ಡರ್ಸ್: ಏಂಜೆಲ್ ಡಿ ಮರಿಯಾ (ಅರ್ಜೆಂಟೀನಾ), ಆಂಡ್ರೆಸ್ ಇನೀಸ್ತಾ (ಸ್ಪೇನ್), ಟೋನಿ ಕ್ರೂಸ್ (ಜರ್ಮನಿ)
ಫಾರ್ವರ್ಡ್ಸ್: ಲಯೊನೆಲ್ ಮೆಸ್ಸಿ (ಅರ್ಜೆಂಟೀನಾ), ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್), ಅರ್ಯೆನ್ ರಾಬೆನ್ (ಹಾಲೆಂಡ್)
