ಮನೋರಂಜನೆ

ಗೊಂಬೆಗಳ ಲವ್ ಚಿತ್ರದ ಖ್ಯಾತಿಯ ಪಾವನಾ ನ್ಯೂ ಲುಕ್‌ನಲ್ಲಿ

Pinterest LinkedIn Tumblr

pawana

ಗೊಂಬೆಗಳ ಲವ್ ಚಿತ್ರದ ಮೂಲಕ ಖ್ಯಾತಿಗೆ ಬಂದ ಪಾವನಾ ಈಗ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ಹೊಸ ರೀತಿಯ ಡ್ರೆಸ್ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದೀಗ ಎಲ್ಲ ನಾಯಕಿಯರು ಆರು ತಿಂಗಳಿಗೊಮ್ಮೆ ಹೊಸ ಫೋಟೋ ಶೂಟ್ ಮಾಡಿಸುವುದು ಕಾಮನ್ ಆಗಿದೆ. ಅದೇ ರೀತಿ ಫೋಟೋ ಶೂಟ್ ಮಾಡಿಸಿಕೊಂಡು ಆ ಹೊಸ ಫೋಟೋಗಳು ಲಭ್ಯವಾಗಿವೆ. ಗೊಂಬೆಗಳ ಲವ್ ಚಿತ್ರದಲ್ಲಿ ನೋಡಿರುವ ಪಾವನಾ ಈ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡಿರುವ ಪಾವನಾಗೂ ತುಂಬಾನೇ ವ್ಯತ್ಯಾಸ ಇದೆ. ಈ ಹೊಸ ಇಮೇಜ್ ಚೇಂಜ್ ಆದ ಬಗ್ಗೆ ಅವರು, ‘ಸ್ಯಾಂಡಲ್‌ವುಡ್‌ನಲ್ಲಿ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದರೆ ಅದಕ್ಕೆ ಬೇಡಿಕೆ ಇರುವುದಿಲ್ಲ. ನನ್ನ ಇಮೇಜ್ ಚೇಂಜ್ ಮಾಡಿಕೊಳ್ಳುವ ಸಲುವಾಗಿಯೇ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿಕೊಂಡಿದ್ದೇನೆ. ಈ ಫೋಟೋ ನೋಡಿದವರು ಇದು ನಾನೇನಾ ಎಂದು ಕೇಳುತ್ತಿದ್ದಾರೆ. ಬೇರೆಯವರ ಕಾಮೆಂಟ್ ಕೇಳಿ ನನಗೂ ತುಂಬಾನೇ ಖುಷಿಯಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಅಂದಹಾಗೆ ಪಾವನಾ ಈಗ ರಘುರಾಮ್ ನಿರ್ದೇಶನದ ಚಿತ್ರವೊಂದರಲ್ಲಿ ಖಳ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ವಿಜಯ್ ಜತೆ ಅಭಿನಯಿಸಿರುವ ಚಿತ್ರವೊಂದು ತೆರೆಕಾಣಲು ಸಿದ್ಧವಾಗಿದೆ. ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪಾವನಾ ಇನ್ನುಮೇಲೆ ರಾಗಿಣಿ, ರಚಿತಾಗೆ ಪೈಪೋಟಿ ಕೊಡುತ್ತಾರಾ ಕಾದು ನೋಡಬೇಕಿದೆ.
**

ಟ್ವಿಟರ್‌ಗೆ ಬಂದರು ಶರಣ್
ಇತ್ತೀಚೆಗೆ ಸ್ಟಾರ್‌ಗಳು ತಮ್ಮ ಬಿಝಿ ಶೆಡ್ಯೂಲ್‌ಗಳ ನಡುವೆಯೂ ಜನರ ಜತೆ ಬೆರೆಯಲು ಅಂತರ್ಜಾಲ ತಾಣದ ಮೊರೆ ಹೋಗಿದ್ದಾರೆನ್ನುವುದು ನಿಮಗೆಲ್ಲಾ ಗೊತ್ತು. ಈಗ ಶರಣ್ ಅಭಿಮಾನಿಗಳಿಗೆ ಒಂದು ಸಂತಸದ ಸಂಗತಿ. ಅಂತರ್ಜಾಲ ತಾಣಗಳಲ್ಲಿ ಒಂದಾದ ಟ್ವಿಟರ್‌ಗೆ ನಟ ಶರಣ್ ಕೂಡ ಬಂದಿದ್ದಾರೆ.

ಇತ್ತೀಚೆಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡಿರುವ ಶರಣ್‌ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಅವರ ಮುಂದಿನ ಚಿತ್ರದ ಬಗ್ಗೆಯೂ ಜನರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಹೀಗಿರುವ ಸಂದರ್ಭದಲ್ಲೇ ಶರಣ್ ತಮ್ಮ ಟ್ವಿಟರ್ ಖಾತೆಯನ್ನು ಪ್ರಾರಂಭ ಮಾಡಿದ್ದಾರೆ. ಅಟ್‌ಶರಣ್‌ಹೃದಯ್… ಎಂಬ ಹೆಸರಿನಲ್ಲಿ ಖಾತೆಯನ್ನು ತೆರೆದಿದ್ದಾರೆ.

ಶರಣ್ ಖಾತೆಯನ್ನು ತೆರೆಯುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ನೂರಕ್ಕೂ ಹೆಚ್ಚು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಜತೆಗೆ ನಟಿ ಹರಿಪ್ರಿಯಾ ಟ್ವಿಟರ್ ಲೋಕಕ್ಕೆ ಶರಣ್‌ರನ್ನು ಸ್ವಾಗತಿಸಿ ಕಾಮೆಂಟ್ ಹಾಕಿದ್ದಾರೆ. ಸ್ಯಾಂಡಲ್‌ವುಡ್‌ನ ನಟನಟಿಯರು ಈಗಾಗಲೇ ಟ್ವಿಟರ್‌ನಲ್ಲಿ ಸಾವಿರಾರು ಫಾಲೋಯರ್ಸ್‌ಗಳನ್ನು ಪಡೆದಿದ್ದಾರೆ. ರಮ್ಯಗೆ ಮೂರು ಲಕ್ಷ, ಸುದೀಪ್‌ಗೆ 2 ಲಕ್ಷ ಜನ ಟ್ವಿಟರ್ ಅಭಿಮಾನಿಗಳಿದ್ದಾರೆ. ಉಪೇಂದ್ರ ಇದೀಗ 50,000 ದಾಟಿದ್ದಾರೆ.
**

ಇಗೋ ಬೇಡ ಎಂದ ನವರಸ ನಾಯಕ
ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎನ್ನುವ ಮಾತಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನವರಸ ನಾಯಕ ಜಗ್ಗೇಶ್ ಮತ್ತೊಬ್ಬ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡುವ ಮೂಲಕ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಹೌದು ಜೋಗಿ ಪ್ರೇಮ್ ನಟಿಸಿರುವ ಡಿಕೆ ಸಿನಿಮಾಗೆ ಜಗ್ಗೇಶ್ ಕಾಮಿಡಿ ಡೈಲಾಗ್‌ಗಳಿಂದ ನಿರೂಪಣೆ ಮಾಡಿದ್ದಾರೆ. ಇದುವರೆಗೂ ಹೆಚ್ಚಾಗಿ ತಮ್ಮ ಮಕ್ಕಳ ಸಿನಿಮಾಗೆ ಹಾಡುವ ಮೂಲಕ, ನಿರೂಪಣೆ ಮೂಲಕ ಗಮನ ಸೆಳೆದಿದ್ದ ಜಗ್ಗೇಶ್, ಬೇರೆ ಸ್ಟಾರ್ ಸಿನಿಮಾಗಳಿಗೆ ಧ್ವನಿ ನೀಡಿದ್ದು ತುಂಬಾನೆ ವಿರಳ. ಆದರೆ ಈಗ ಪ್ರೇಮ್ ಅಭಿನಯದ ಸಿನಿಮಾಗೆ ಧ್ವನಿ ನೀಡಿ, ಸ್ವತಃ ಟ್ವೀಟ್ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲ,’ಎಲ್ಲಾ ನಟರಿಗೂ ಹೇಳುವೆ, ಒಗ್ಗಟ್ಟಿನಲ್ಲಿ ಬಲದೆ, ಇಗೋ ಬೇಡ’ ಎಂದು ಕಿವಿ ಮಾತು ಹೇಳಿದ್ದಾರೆ.

ಕನ್ನಡ ಚಿತ್ರರಂಗ ಗುಂಪು ಗುಂಪಾಗಿ ಹರಿದು ಹೋಗುತ್ತಿದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿರುವಾಗಲೇ, ಜಗ್ಗೇಶ್ ಅವರ ಈ ನುಡಿಗಳು ಯಾವ ರೀತಿ ಸ್ವೀಕಾರವಾಗಲಿದೆ ಅನ್ನೋದು ಸದ್ಯದ ಕುತೂಹಲ. ಅಂದಹಾಗೆ ಜಗ್ಗೇಶ್ ನೀಡುವ ಈ ಕಾಮಿಡಿ ಮಾತುಗಳು, ಡಿಕೆನಲ್ಲಿ ಯಾವ ರೀತಿ ಇರಲಿದೆ, ಅನ್ನೋದನ್ನ ತಿಳಿಯಲಿಕ್ಕೆ ಇನ್ನೂ ಕೆಲ ದಿನ ಕಾಯಲೇಬೇಕು.

Write A Comment