ಮನೋರಂಜನೆ

ಚಾರ್ ಮಿನಾರ್ ಚಂದ್ರು ನಿರ್ಮಾಣದ ಮಳೆ ಚಿತ್ರದಲ್ಲಿ ಅಮೂಲ್ಯ-ಪ್ರೇಮ್

Pinterest LinkedIn Tumblr

male-release

ಇದು ವರ್ಷದ ಕೊನೆಯ ವರ್ಷಧಾರೆಯ ಸುದ್ದಿ. ಚಾರ್ ಮಿನಾರ್ ಚಂದ್ರು ನಿರ್ಮಾಣದ ಮಳೆ ಚಿತ್ರ ಧೋ ಎನ್ನುವ ಬಿರುಸಿನಲ್ಲಿ ಸಾಗುತ್ತಿದೆ. ಚಂದ್ರು ಪ್ರಕಾರ ಎಲ್ಲವೂ ಅಂದುಕೊಂಡಂತೆ ಆದರೆ, ಈ ತಿಂಗಳಲ್ಲಿ ಬಾಕಿ ಇರುವ ಒಂದು ಹಾಡಿನ ಚಿತ್ರೀಕರಣ ಮುಗಿಸಿ ಚಿತ್ರದ ಆಡಿಯೋ ಬಿಡುಗಡೆಯಾಗುತ್ತದೆ. ತಾವು ಖುದ್ದು ನಿರ್ದೇಶಕರಾಗಿದ್ದೂ ಸಹ ಮಳೆ ಚಿತ್ರವನ್ನು ತಮ್ಮ ಶಿಷ್ಯ ತೇಜಸ್ ಕೈಲಿ ಮಾಡಿಸುತ್ತಿರುವ ಚಂದ್ರು ಈ ಚಿತ್ರಕ್ಕೆ ಕೇವಲ ನಿರ್ಮಾಪಕರಷ್ಟೇ. ಆದರೆ ನಿರ್ದೇಶಕರ ಅಗತ್ಯಗಳನ್ನು ಅರಿತಿರುವ ಚಂದ್ರು ಯಾವ ಕುಂದುಕೊರತೆಯೂ ಆಗದಂತೆ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ಚಿತ್ರದ ಹಾಡಿನ ಸನ್ನಿವೇಶಗಳ ಚಿತ್ರೀಕರಣಕ್ಕಾಗಿ ಕನಕಪುರದ ದೊಡ್ಡಮರಳವಾಡಿಯಲ್ಲಿರುವ ಭವ್ಯವಾದ ಮನೆಯಲ್ಲಿ ಬೀಡುಬಿಟ್ಟಿದ್ದ ಮಳೆ ತಂಡ, ಚಿತ್ರದ ಅತ್ಯಂತ ವಿಶೇಷ ಹಾಡೊಂದನ್ನು ಮನಸ್ಸಿಗೆ ತೃಪ್ತಿಯಾಗುವಂತೆ ಶೂಟ್ ಮಾಡಿದ ಸಂತಸದಲ್ಲಿತ್ತು. ಅದು ಗೀತ ಸಾಹಿತಿ ಶಿವನಂಜೇಗೌಡ ಬರೆದ ಹಾಡೂ.

ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಲು ಹರ್ಷ ಅವರೇ ಬೇಕು ಎಂಬುದು ನಿರ್ದೇಶಕರ ಆಸೆ. ತೇಜಸ್ ಆಸೆಗೆ ಒಲ್ಲೆ ಎನ್ನದೆ ನಿರ್ಮಾಪಕ ಚಂದ್ರು ಬ್ಯುಸಿಯಿದ್ದ ಹರ್ಷ ಡೇಟ್‌ಗಾಗಿ ಕಾದಿದ್ದಾರೆ. ಲವ್ಲಿ ಪ್ರೇಮ್ ಮತ್ತು ಅಮೂಲ್ಯ ಕೂಡ ಹರ್ಷ ಈ ಹಾಡಿಗೆ ಅದ್ಭುತವಾದ ನೃತ್ಯ ಸಂಯೋಜನೆ ನೀಡಿಯೇ ನೀಡುತ್ತಾರೆ ಎಂಬ ನಿರೀಕ್ಷೆಯಿಂದ ಕಾಯಲು ಓಕೆ ಅಂದಿದ್ದಾರೆ.

ಅಂತೂ ಮುಹೂರ್ತ ಕೂಡಿ ಬಂದಿದೆ. ಎಲ್ಲರ ನಿರೀಕ್ಷೆಗೂ ಮೀರಿ ಹಾಡಿನ ಚಿತ್ರಣ ಮೂಡಿ ಬಂದಿದೆ. ಇಡೀ ತಂಡದ ಮುಖದಲ್ಲಿ ಕಾದಿದ್ದೂ ಸಾರ್ಥಕ ಎಂಬ ಭಾವ. ನಾಯಕಿ ಅಮೂಲ್ಯಳ ಗೆಳತಿಯ ಮದುವೆಯ ಸಂದರ್ಭ. ಅಲ್ಲಿಗೆ ನಾಯಕ ಪ್ರೇಮ್ ಕೂಡ ಬರುತ್ತಾನೆ. ಆಗ ನಾಯಕನ ದೃಷ್ಟಿಕೋನದಲ್ಲಿ ಬರುವ ಹಾಡಿನ ಚಿತ್ರೀಕರಣವದು. ತಮ್ಮ ಇತ್ತೀಚಿನ ಚಿತ್ರಗಳಲ್ಲೆಲ್ಲ ಮಳೆ ಚಿತ್ರದ ಈ ಹಾಡಿನ ಬಗ್ಗೆ ಪ್ರೇಮ್‌ಗೆ ಅತೀವ ಭರವಸೆ.

ಅದಕ್ಕಾಗಿಯೇ ಈ ಹಾಡಿಗೊಂದು ವಿಭಿನ್ನ ಅನಿಸುವ ನೃತ್ಯ ಸಂಯೋಜನೆ ಬೇಕೆಂದು ಪ್ರತಿದಿನವೂ ಕೂತು ಚರ್ಚೆಯಾಗುತ್ತಿತ್ತಂತೆ. ಅಮೂಲ್ಯಾಗೂ ಈ ಹಾಡಿನ ಮೇಲೆ ತುಂಬ ಪ್ರೀತಿ. ಹರ್ಷ ಕೋರಿಯೋಗ್ರಾಫಿಯಿಂದ ಈ ಹಾಡೂ ಇನ್ನಷ್ಟು ಅದ್ಭುತವಾಗಿದೆ ಎಂಬುದು ಅಮೂಲ್ಯ ಅಭಿಪ್ರಾಯ. ಅಂದಿನ ಕೇಂದ್ರ ಬಿಂದು ಹರ್ಷ ಮಾಸ್ಟರ್!

ನಿರ್ಮಾಪಕರಾಗುವ ಎತ್ತರಕ್ಕೆ ಚಂದ್ರು ಬೆಳೆದು ಬಂದ ಹಾದಿಯ ಬಗ್ಗೆ ಮಚ್ಚೆ ಮಾತಾಡಿದ ಹರ್ಷ, ಬಜೆಟ್ ವಿಷಯದಲ್ಲಿ ಕಾಂಪ್ರೋಮೈಸ್ ಆಗದ ಚಂದ್ರು ಗುಣವನ್ನು ಕೊಂಡಾಡಿದರು. ಚಂದ್ರು ಅವರ ಎಲ್ಲ ಚಿತ್ರಗಳಲ್ಲೂ ಕಡೇ ಪಕ್ಷ ಒಂದು ಹಾಡಿಗಾದರೂ ನೃತ್ಯ ಸಂಯೋಜಿಸುವ ಅವಕಾಶ ಸಿಕ್ಕಿದ್ದಕ್ಕೆ ಹರ್ಷವಿದೆಯಂತೆ ಅವರಿಗೆ. ನೆನಪಿರಲಿ ಪ್ರೇಮ್‌ರ  ದೈಹಿಕ ಕ್ಷಮತೆ ಬಗೆಗೂ ಮೆಚ್ಚುಗೆಯ ಮಾತನಾಡಿದ ಹರ್ಷ ಜ್ಞಾನಮೂರ್ತಿ ಕ್ಯಾಮೆರಾ ಕೈಚಳಕಕ್ಕೆ ಬೆರಗೂ ವ್ಯಕ್ತಪಡಿಸಿದರು.

ಅಂದಹಾಗೆ ಶಿವಮೂರ್ತಿ ಎಂಬ ಹೆಸರಿನಿಂದ ಪರಿಚಿತರಾಗಿದ್ದ ನಿರ್ದೇಶಕ ಈಗ ತೇಜಸ್ ಆಗಿದ್ದಾರೆ. ಒಟ್ಟಾರೆಯಾಗಿ ಚಂದ್ರು ನಿರ್ಮಾಣದ ಮಳೆ ಈ ವರ್ಷ ಭರ್ತಿ ಬೆಳೆ ತರುವ ನಿರೀಕ್ಷೆಯಂತೂ ಇದೆ. ಇದರ ಬೆನ್ನಲ್ಲೇ ಚಂದ್ರು ನಿರ್ದೇಶನದ ನಾಗಚೈತನ್ಯ ನಾಯಕತ್ವದ ತೆಲುಗು ಚಿತ್ರವೂ ಬಿಡುಗಡೆಗೆ ಸಿದ್ಧವಾಗುತ್ತಿರುವುದು ತಂಡದ ಪಾಲಿಗೆ ಖುಷಿ ಸುದ್ದಿ.

Write A Comment