ಮನೋರಂಜನೆ

ಚೆಂದುಳ್ಳಿ ಚೆಲುವೆ ಬೆಕ್ಕಿನ ನಡಿಗೆ: ಫ್ಯಾಷನ್‌ ಶೋನಲ್ಲಿ ರಶ್ಮಿ ಬಂಟ್ವಾಳ್ ಸೌಂದರ್ಯ ಪಯಣ

Pinterest LinkedIn Tumblr

rashmi1

ಇತ್ತೀಚೆಗೆ ನಗರದಲ್ಲಿ ನಡೆದ ಖ್ವಾಯಿಷ್ ಫ್ಯಾಷನ್‌ ಶೋನಲ್ಲಿ ಶೋ ಸ್ಟಾಪರ್ ಆಗಿ ಸಾಕಷ್ಟು ಜನರ ಚಪ್ಪಾಳೆ ಗಿಟ್ಟಿಸಿಕೊಂಡವರು ರಶ್ಮಿ ಬಂಟ್ವಾಳ್. ಗಾಢ ಕೆಂಪು ವರ್ಣದ ಉಡುಪಿನಲ್ಲಿ ಈ ಚೆಂದುಳ್ಳಿ ಚೆಲುವೆ ಬೆಕ್ಕಿನ ನಡಿಗೆ ನಡೆಯುತ್ತ ಬಂದು ನಗು ಚೆಲ್ಲಿದರು.

ರಶ್ಮಿ ಮಂಗಳೂರಿನ ಬೆಡಗಿ. ಇವರ ತಂದೆ ಬ್ಯಾಂಕ್ ಉದ್ಯೋಗಿ ಆದ್ದರಿಂದ ಇವರು ಊರೂರು ತಿರುಗಿದ್ದೇ ಹೆಚ್ಚು. ಹೊಸ ಊರು, ಹೊಸ ಜನ, ಅಲ್ಲಿನ ಜೀವನಶೈಲಿ ಎಲ್ಲವೂ ಇವರ ಮೇಲೆ ಪ್ರಭಾವ ಬೀರಿ ಇವರು ಫ್ಯಾಷನ್ ಲೋಕದತ್ತ ಹೆಜ್ಜೆ ಹಾಕಲು ಪ್ರೇರೇಪಿಸಿತು. ನಿಯತಕಾಲಿಕೆಗಳಿಗೆ ರೂಪದರ್ಶಿ, ಆಭರಣಗಳಿಗೆ ರಾಯಭಾರಿಯಾಗಿ ಕೆಲಸ ಮಾಡಿದ ರಶ್ಮಿ ಅವರಿಗೆ ಈಗ ಸಿನಿಮಾಗಳಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿವೆ. ತಮ್ಮ ಹವ್ಯಾಸ, ಆಸಕ್ತಿ ಜತೆಗೆ ಮಾಡೆಲಿಂಗ್ ಜಗತ್ತಿನ ಕುರಿತು ಮಾತು ಹಂಚಿಕೊಂಡಿದ್ದಾರೆ ರಶ್ಮಿ.

ಮಾಡೆಲಿಂಗ್ ಪಯಣ
ಮಧ್ಯಮ ವರ್ಗದಿಂದ ಬಂದಿರುವ ರಶ್ಮಿ ಅವರ ಮನೆಯಲ್ಲಿ ಓದಿಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ಇವರು ಶಾಲಾ ವಿದ್ಯಾಭ್ಯಾಸ ಮುಗಿಸಿದ್ದು ಬೆಂಗಳೂರಿನಲ್ಲೇ. ನಂತರ ಮುಂಬೈಗೆ ಹೋಗಿ ಅಲ್ಲಿ ‘ಬಿಸಿನೆಸ್’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ಆದರೆ ಇವರ ಆಸಕ್ತಿ ಇದ್ದದ್ದು ಕ್ಯಾಮೆರಾ, ಮೇಕಪ್‌ನಲ್ಲಿ.

‘ನನಗೆ ಮೊದಲಿನಿಂದಲೂ ಕ್ಯಾಮೆರಾ ಮುಂದೆ ನಿಲ್ಲುವುದು, ಮೇಕಪ್ ಮಾಡಿಕೊಳ್ಳುವುದೆಂದರೆ ತುಂಬ ಇಷ್ಟ. ಅದೇ ನನ್ನನ್ನು ಈ ಕ್ಷೇತ್ರದತ್ತ ಮತ್ತಷ್ಟು ಸೆಳೆಯಲು ಕಾರಣವಾಯಿತು. ಈ ಕ್ಷೇತ್ರಕ್ಕೆ ಕಾಲಿಟ್ಟಾಗ ಏನೂ ಗೊತ್ತಿರಲಿಲ್ಲ. ಇಲ್ಲಿಗೆ ಬಂದಿದ್ದೂ ಆಕಸ್ಮಿಕವಾಗಿ. ಹೊಸ ಮುಖದ ಹುಡುಕಾಟ ನಡೆಸುತ್ತಿದ್ದ ಫೆಮಿನಾ ನಿಯತಕಾಲಿಕೆ ತಂಡ ಒಮ್ಮೆ ನಮ್ಮ ಕಾಲೇಜಿಗೆ ಬಂದಿತ್ತು. ಆಗ ನಾನು ಆಯ್ಕೆ ಆದೆ’ ಎಂದು ಮಾಡೆಲಿಂಗ್ ಪಯಣದ ತಮ್ಮ ಮೊದಲ ಹೆಜ್ಜೆ ಕುರಿತು ಹೇಳುತ್ತಾರೆ ರಶ್ಮಿ.

‘ಕಾಲೇಜಿನ ದಿನಗಳಿಂದ ವೇದಿಕೆಯ ಮೇಲೆ ಬೆಕ್ಕಿನ ನಡಿಗೆ ನಡೆದು ಅಭ್ಯಾಸವಿರುವ ಇವರಿಗೆ ಈ ಕ್ಷೇತ್ರ ಸಾಕಷ್ಟು ಖುಷಿಯ ಕ್ಷಣಗಳನ್ನು ನೀಡಿದೆಯಂತೆ. ‘ಎಲ್ಲ ಕ್ಷೇತ್ರಗಳಂತೆ ಫ್ಯಾಷನ್ ಕ್ಷೇತ್ರವೂ ಇದೆ. ಇದೇನೂ ಭಿನ್ನವಾಗಿಲ್ಲ. ಸವಾಲುಗಳು ಜಾಸ್ತಿ ಇರುತ್ತದೆ. ಸವಾಲುಗಳು ಹೆಚ್ಚಿದ್ದಾಗ ಕೆಲಸ ಮಾಡುವುದಕ್ಕೆ ಹುಮ್ಮಸ್ಸು ಬರುತ್ತದೆ. ಹಾಗಾಗಿ ನನಗೆ ಈ ಕ್ಷೇತ್ರ ಹೆಚ್ಚು ಆಪ್ತ. ಮಾಡೆಲ್‌ ಆಗಿ ನಾನು ಹೆಜ್ಜೆ ಹಾಕಿದರೂ ಇಲ್ಲಿನ ಫೋಟೊಗ್ರಫಿ ಕ್ಷೇತ್ರವೂ ನನಗೆ ತುಂಬ ಇಷ್ಟ. ಇಲ್ಲಿ ಕ್ರಿಯೇಟಿವಿಟಿ ಇದೆ’ ಎನ್ನುವ ರಶ್ಮಿಗೆ ಐಶ್ವರ್ಯಾ ರೈ ಸ್ಫೂರ್ತಿ. ಅವರಲ್ಲಿನ ಆತ್ಮವಿಶ್ವಾಸ ಕಂಡು ಇವರು ಬೆರಗುಗೊಂಡಿದ್ದಿದೆ.

ಹವ್ಯಾಸದ ಗುಂಗು
ರಶ್ಮಿ ಮಾಡೆಲಿಂಗ್ ಜತೆಗೆ ಸಾಕಷ್ಟು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ಕಿಕ್‌ ಬಾಕ್ಸಿಂಗ್, ಕುದುರೆ ಸವಾರಿ, ಮಾರ್ಷಲ್ ಆರ್ಟ್ಸ್, ಪುಸ್ತಕ ಓದುವುದು ಇವರಿಗೆ ತುಂಬ ಇಷ್ಟ. ಸಮಯ ಸಿಕ್ಕಾಗಲೆಲ್ಲಾ ಸಂಗೀತ ಕೇಳುತ್ತಾರೆ. ಜತೆಗೆ ಹೊಸದೇನಾದರೂ ಕಲಿಯಬೇಕು ಎಂಬ ತುಡಿತ ಇವರದ್ದು.

ಕಾಯ ಕಾಳಜಿ
ರಶ್ಮಿಗೆ ಮೊದಲಿಂದಲೂ ತಮ್ಮ ಕಾಯದ ಕುರಿತು ವಿಶೇಷ ಕಾಳಜಿ. ಹಿತಮಿತವಾಗಿ ತಿಂದರೂ ಅದನ್ನು ಕರಗಿಸಿಕೊಳ್ಳುವುದರತ್ತ ಹೆಚ್ಚು ಗಮನ ನೀಡುತ್ತಾರೆ. ಜುಂಬಾ, ಪಿಲ್ಲಾಟಸ್,  ಇವರಿಗೆ ಇಷ್ಟ. ಜಿಮ್‌ನಿಂದ ರಶ್ಮಿ ದೂರ. ದೈಹಿಕ ಫಿಟ್ ಜತೆಗೆ ಮಾನಸಿಕವಾಗಿ ಫಿಟ್ ಆಗಿರಲು ರಶ್ಮಿ ಮೊರೆಹೋಗಿದ್ದು ಯೋಗ ಮತ್ತು ನಿದ್ದೆಗೆ. ಶೂಟಿಂಗ್ ಇದ್ದಾಗ ಚೆನ್ನಾಗಿ ತಿಂದು ವರ್ಕೌಟ್ ಮಾಡುತ್ತಾರೆ. ಇದರಿಂದ ವೇದಿಕೆ ಮೇಲೆ ತುಂಬ ಚೆನ್ನಾಗಿ ಕಾಣಿಸಿಕೊಳ್ಳಬಹುದು ಎನ್ನುವುದು ರಶ್ಮಿ ಅಭಿಪ್ರಾಯ. ‘ಸದಾ ಒತ್ತಡದಲ್ಲಿ ಇರಬೇಡಿ ನಗುತ್ತಾ ಇರಿ. ಆಗ ಮುಖ, ಮನಸ್ಸು ಎರಡೂ ಚೆನ್ನಾಗಿ ಇರುತ್ತದೆ’ ಎಂಬ ಟಿಪ್ಸ್ ಕೂಡ ನೀಡುತ್ತಾರೆ.

‘ತುಂಬ ಒತ್ತಡದಲ್ಲಿ ಇರಬೇಡಿ. ನಿಮಗೆ ಏನು ಇಷ್ಟವಾಗುತ್ತದೆಯೋ ಅದನ್ನು ಮಾಡಿ. ಮಾಡುವ ಕೆಲಸದ ಕುರಿತು ಗೌರವ ಇರಲಿ, ಆಗ ನಿಮಗೂ ಗೌರವ ಸಿಗುತ್ತದೆ’ ಎನ್ನುವುದು ಕಿರಿಯರಿಗೆ ಈ ಬೆಡಗಿಯ ಕಿವಿಮಾತು.

Write A Comment