ಮನೋರಂಜನೆ

ರಜನಿಕಾಂತ್ ‘ಲಿಂಗಾ’ ಚಿತ್ರಕ್ಕೆ ಮತ್ತೊಂದು ವಿಘ್ನ

Pinterest LinkedIn Tumblr

linga

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ‘ಲಿಂಗಾ’ ಚಿತ್ರ ಬಿಡುಗಡೆಗೆ ಹತ್ತಿರವಾಗುತ್ತಿದ್ದಂತೆ ಒಂದಲ್ಲ ಒಂದು ವಿಘ್ನಗಳೂ ಎದುರಾಗುತ್ತಿವೆ. ಇತ್ತೀಚೆಗಷ್ಟೇ ಚಿತ್ರ ಕೃತಿಚೌರ್ಯ ವಿವಾದಕ್ಕೆ ಗುರಿಯಾಗಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಆ ಕೇಸನ್ನು ವಜಾಗೊಳಿಸಿತ್ತು. ಇದೀಗ ಮತ್ತೊಮ್ಮೆ ಕೃತಿಚೌರ್ಯ ವಿವಾದ ‘ಲಿಂಗಾ’ ಚಿತ್ರಕ್ಕೆ ಸುತ್ತಿಕೊಂಡಿದೆ.

ಶಕ್ತಿವೇಲ್ ಎಂಬುವವರು ತಮ್ಮ ‘ಉಯಿರ್ ಅನೈ’ ಕಥೆಯನ್ನು ಕದ್ದು ಲಿಂಗಾ ಚಿತ್ರ ಮಾಡಿದ್ದಾರೆ ಎಂದು ಆರೋಪಿಸಿ ಚೆನ್ನೈ ಸಿಟಿ ಸಿವಿಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮುಳ್ಳಪೆರಿಯಾರ್ ಅಣೆಕಟ್ಟು ನಿರ್ಮಾಣದ ಹಿಂದಿರುವ ಪೆನ್ನಿಕ್ವಿಕ್ ಎಂಬ ಬ್ರಿಟಿಷ್ ಇಂಜಿನಿಯರ್ ಕುರಿತ ಕಥೆಯನ್ನು ತಮ್ಮ ಕೃತಿ ಒಳಗೊಂಡಿದೆ. ಈಗಾಗಲೆ ಈ ಕಥೆಯನ್ನು ಹಲವಾರು ನಿರ್ದೇಶಕರಿಗೆ ಹೇಳಿದ್ದೇನೆ. ಬಜೆಟ್ ಜಾಸ್ತಿಯಾಗುತ್ತದೆ ಎಂದು ಚಿತ್ರ ನಿರ್ಮಿಸಲು ಯಾರು ಮುಂದೆ ಬರಲಿಲ್ಲ. ತಮ್ಮ ಕಥೆಗೂ ಲಿಂಗಾ ಚಿತ್ರದ ಕಥೆಗೂ ಸಾಮ್ಯತೆಗಳಿರುವುದು ತಮ್ಮ ಗಮನಕ್ಕೆ ಬಂದಿದೆ.

ಈ ಚಿತ್ರ ತಮ್ಮದೇ ಕಥೆಯನ್ನು ಬಳಸಿಕೊಂಡಿರುವ ಕಾರಣ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಶಕ್ತಿವೇಲ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಚೆನ್ನೈ ಸಿಟಿ ಸಿವಿಲ್ ಕೋರ್ಟ್ ಚಿತ್ರದ ನಿರ್ದೇಶಕ ಕೆ.ಎಸ್. ರವಿಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಕಥೆ ಬರೆದಿರುವ ಪೊನ್ನು ಕುಮಾರ್ ಅವರಿಗೆ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿದೆ. ರಜನಿಕಾಂತ್ ಅವರ ಹುಟ್ಟುಹಬ್ಬದ ದಿನ ಅಂದರೆ ಡಿಸೆಂಬರ್ 12ರಂದು ಚಿತ್ರವನ್ನು ಬಿಡುಗಡೆ ಮಾಡಲು ಭಾರಿ ಸಿದ್ಧತೆಗಳು ನಡೆಯುತ್ತಿವೆ. ಇದೀಗ ಚಿತ್ರ ನ್ಯಾಯಾಲಯದ ಮುಂದೆ ಬಂದಿರುವ ಕಾರಣ ಯಾವಾಗ ಬಿಡುಗಡೆಯಾಗುತ್ತದೋ ಎಂಬ ಗುಮಾನಿ ಶುರುವಾಗಿದೆ.

Write A Comment