ಮನೋರಂಜನೆ

ಕುತ್ತಿಗೆ ರಕ್ಷಣೆಗೆ ಬೇಕಾಗಿದೆ ಹೆಲ್ಮೆಟ್: ಹ್ಯೂಸ್ ಸಾವು ಕ್ರಿಕೆಟಿಗರಿಗೆ ಆಘಾತ

Pinterest LinkedIn Tumblr

MASURI-cut

ಸಿಡ್ನಿ, ನ.28: ವಿಶ್ವಕಪ್‌ಗೆ ಇನ್ನು 77 ದಿನಗಳು ಮಾತ್ರ ಬಾಕಿ ಉಳಿದಿದೆ. ವಿಶ್ವ ಕ್ರಿಕೆಟ್ ಹಬ್ಬಕ್ಕೆ ಕಾಂಗರೂ ನಾಡಲ್ಲಿ ಭರ್ಜರಿ ತಯಾರಿ ನಡೆಯುತ್ತಿದ್ದಂತೆ ಆಸ್ಟ್ರೇಲಿಯದ ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಚೆಂಡು ತಲೆಗೆ ಬಡಿದು ಸಾವಿಗೀಡಾದ ಹಿನ್ನೆಲೆಯಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸೂತಕದ ಛಾಯೆ ಆವರಿಸಿದೆ. ಕ್ರಿಕೆಟಿಗರು ಭಯಭೀತರಾಗಿದ್ದಾರೆ.

ಕಳೆದ ಮಂಗಳವಾರ ಶೆಫೀಲ್ಡ್ ಶೀಲ್ಡ್ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಹ್ಯೂಸ್ ತಲೆಗೆ ಹೆಲ್ಮೆಟ್ ಧರಿಸಿದ್ದರೂ, ಅದು ಅವರ ರಕ್ಷಣೆಗೆ ಬರಲಿಲ್ಲ. ಸಿಯಾನ್ ಅಬಾಟ್ ಎಸೆದ ಬೌನ್ಸರ್‌ನ್ನು ಎದುರಿಸುವಲ್ಲಿ ಹ್ಯೂಸ್ ವಿಫಲರಾಗಿದ್ದರು. ಆದರೆ ಚೆಂಡು ಅವರ ಬ್ಯಾಟನ್ನು ವಂಚಿಸಿ ಕುತ್ತಿಗೆಗೆ ಬಡಿದಿತ್ತು. ಈ ಹೊಡೆತದಿಂದ ಆಘಾತಗೊಂಡ ಹ್ಯೂಸ್ ಚೇತರಿಸಿಕೊಳ್ಳಲೇ ಇಲ್ಲ. ಅವರ ಬದುಕನ್ನು ‘ಬೌನ್ಸರ್’ ಅಂತ್ಯಗೊಳಿಸಿತು.

ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳಿಂದ ಮಿಂಚಿನ ವೇಗದಲ್ಲಿ ಹಾರಿ ಬರುವ ಚೆಂಡು ಬಾಟನ್ನು ವಂಚಿಸಿ ತಲೆಗೆ ಬಡಿಯುವುದನ್ನು ತಪ್ಪಿಸಲು ಹೆಲ್ಮೆಟ್ ಧರಿಸುತ್ತಾರೆ. ಆದರೆ ಅದೇ ಹೆಲ್ಮೆಟ್ ತಲೆಗೆ ರಕ್ಷಣೆ ನೀಡಿದರೂ, ಕುತ್ತಿಗೆಗೆ ಬೀಳುವ ಪೆಟ್ಟನ್ನು ತಪ್ಪಿಸಲು ಸಾಧ್ಯವಿಲ್ಲ. ಹ್ಯೂಸ್ ಅವರು ಬ್ರಿಟಿಷ್ ಕಂಪೆನಿ ‘ಮಸೂರಿ’ ತಯಾರಿಸಿದ ಹೆಲ್ಮೆಟ್ ಧರಿಸಿದ್ದರು. ಆದರೆ ಹ್ಯೂಸ್ ತಲೆಗೆ ಪೆಟ್ಟು ಬಿದ್ದಿಲ್ಲ. ಕುತ್ತಿಗೆ ಮತ್ತು ಕಿವಿಯ ಅಂಚಿಗೆ ಚೆಂಡು ಬಡಿದಿದೆ.ಈ ಭಾಗಕ್ಕೆ ರಕ್ಷಣೆ ನೀಡುವ ಹೆಲ್ಮೆಟ್‌ಗಳು ಇನ್ನೂ ತಯಾರಾಗಿಲ್ಲ. ಹ್ಯೂಸ್ ಸಾವಿನ ಹಿನ್ನೆಲೆಯಲ್ಲಿ ಹೆಲ್ಮೆಟ್ ತಯಾರಿಕಾ ಕಂಪೆನಿಗಳು ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ರಕ್ಷಣೆ ನೀಡುವ ನವೀನ ರೀತಿಯ ಹೆಲ್ಮೆಟ್ ತಯಾರಿಸಬೇಕಾದ ಅಗತ್ಯತೆ ಉಂಟಾಗಿದೆ. ಇದರಿಂದಾಗಿ ಹಳೆಯ ಶೈಲಿಯ ಹೆಲ್ಮೆಟ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುವ ಸಾಧ್ಯತೆ ಇದೆ.

ಇದೊಂದು ಅಪರೂಪದ ಅಪಘಾತ. ಚೆಂಡಿನ ಪೆಟ್ಟಿನಿಂದಾಗಿ ಕುತ್ತಿಗೆಗೆ ಆಗಿರುವ ಗಾಯಕ್ಕೆ ಚಿಕಿತ್ಸೆ ನೀಡುವ ಸವಾಲು ಸಿಡ್ನಿಯ ತಜ್ಞ ವೈದ್ಯರ ತಂಡಕ್ಕೆ ಮೊದಲ ಬಾರಿ ಎದುರಾಗಿತ್ತು. ಹ್ಯೂಸ್‌ರನ್ನು ಉಳಿಸಲು ಸೈಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಪೀಟರ್ ಬ್ರೂಕ್ನರ್, ಟೋನಿ ಗ್ರಾಬ್ಸ್ ಅವರನ್ನು ಒಳಗೊಂಡ ವೈದ್ಯರ ತಂಡ ಎರಡು ದಿನಗಳ ಕಾಲ ನಡೆಸಿದ ಸತತ ಪ್ರಯತ್ನ ವಿಫಲಗೊಂಡಿತ್ತು. ಸಿಡ್ನಿ ಕ್ರೀಡಾಂಗಣದಲ್ಲಿ ಚೆಂಡಿನ ಪೆಟ್ಟು ತಾಳಲಾರದೆ ಹ್ಯೂಸ್ ಕುಸಿದು ಬಿದ್ದಾಗ ನ್ಯೂ ಸೌತ್ ವೇಲ್ಸ್ ತಂಡದ ವೈದ್ಯ ಜಾನ್ ಒರ್ಕಾರ್ಡ್ ಮತ್ತು ತೀವ್ರ ನಿಗಾ ವಿಭಾಗದ ತಜ್ಞ ವೈದ್ಯ ಟಿಮ್ ಸ್ಟಾನ್ಲಿ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಿದ್ದರು. ಅಲ್ಲಿಂದ ಹ್ಯೂಸ್‌ರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರ ವೇಳೆಗೆ ಕಾಲ ಮಿಂಚಿತ್ತು. ಕುತ್ತಿಗೆಗೆ ಆಗಿರುವ ಗಾಯದಿಂದಾಗಿ ಮೆದುಳಿನಲ್ಲಿ ರಕ್ತ ಸ್ರಾವ ಉಂಟಾಗಿತ್ತು. ಹ್ಯೂಸ್ ವೈದ್ಯರ ತಂಡ ಸ್ಕಾನಿಂಗ್ ನಡೆಸಿ ಗುಣಮಟ್ಟದ ಚಿಕಿತ್ಸೆ ನೀಡಿದ್ದರು.ಆದರೆ ಹ್ಯೂಸ್ ಕೋಮಾದಿಂದ ಚೇತರಿಸಿಕೊಳ್ಳಲೇ ಇಲ್ಲ. ಚೆಂಡು ಬಡಿದು ಕ್ರಿಕೆಟ್ ಆಟಗಾರ ಮೃತಪಟ್ಟ ಪ್ರಕರಣ ಇದು ಮೊದಲಲ್ಲ. ಈ ಹಿಂದೆ ಹಲವು ಮಂದಿ ಕ್ರಿಕೆಟ್ ಆಟಗಾರರ ಬದುಕು ಚೆಂಡಿನ ಪೆಟ್ಟಿನಿಂದಾಗಿ ಅಂತ್ಯಗೊಂಡಿದೆ. ಇನ್ನೂ ಮುಂದೆಯು ಕ್ರಿಕೆಟ್ ಆಟದಲ್ಲಿ ದುರಂತ ತಪ್ಪಿದ್ದಲ್ಲ. ಭಾರತದ ರಮಣ್ ಲಂಬಾ 1998ರಲ್ಲಿ ಢಾಕಾದಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದಾಗ ಬಾಂಗ್ಲಾದೇಶದ ಆಟಗಾರ ಬಾರಿಸಿದ ಚೆಂಡು ಮರ್ಮಾಂಗಕ್ಕೆ ಬಡಿದು ಸಾವಿಗೀಡಾಗಿದ್ದರು.

ಬೆನ್ನುಹುರಿ ರಕ್ತನಾಳದ ಸೀಳುನೋಟ
– ಹ್ಯೂಸ್ ಬೆನ್ನುಹುರಿ ರಕ್ತನಾಳದ ಒಳಭಾಗದ ಪದರ ಹರಿದು (ಘಾಸಿ) ಹೋಗಿರುವುದನ್ನು ಈ ಚಿತ್ರವು ಸೂಚಿಸುತ್ತದೆ. ಕುತ್ತಿಗೆಯಲ್ಲಿರುವ ಈ ರಕ್ತನಾಳವು ಮೆದುಳಿಗೆ ರಕ್ತವನ್ನು ಪೂರೈಸುತ್ತದೆ.
-ಹೀಗೆ ಪದರವು ಘಾಸಿಗೊಳ್ಳುವುದರಿಂದ ರಕ್ತವು ನಾಳದ ಗೋಡೆಗೆ ಹರಿದು ಹೆಪ್ಪುಗಟ್ಟುವುದು. ಹೆಪ್ಪುಗಟ್ಟಿದ ರಕ್ತವು ನಂತರ ಮೆದುಳಿಗೆ ಚಲಿಸುವುದು.

-ಮೊಂಡಾದ ವಸ್ತುವೊಂದರಿಂದ ಕುತ್ತಿಗೆಗೆ ಹೊಡೆತ ಬೀಳುವುದರಿಂದ ಇಂತಹ ಗಾಯಗಳಾಗುತ್ತವೆ. – ಇಂತಹ ಗಾಯಗಳಾಗುವುದು ಬಹಳ ಅಪರೂಪ. ಹ್ಯೂಸ್ ಪ್ರಕರಣದಲ್ಲಿ ಇದು ಕೆಳನಡುಪೊರೆಗಳ ರಕ್ತಸ್ರಾವಕ್ಕೆ ಕಾರಣವಾಗಿದೆ. ಅಂದರೆ ಮೆದುಳು ಮತ್ತು ತಲೆಬುರುಡೆಗಳ ನಡುವಣ ಪ್ರದೇಶಗಳಿಗೆ ರಕ್ತ ಪೂರೈಕೆ ಮಾಡುವ ರಕ್ತನಾಳ ಅದಾಗಿದೆ. ಇದರ ಪರಿಣಾಮವಾಗಿ ಮೆದುಳು ಸಂಕುಚಿತಗೊಂಡು ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ.
ಹ್ಯೂಸ್ ನಿಧನಕ್ಕೆ ನಡಾಲ್, ಮರ್ರೆ ಶೋಕ ಸಿಡ್ನಿ, ನ.28: ಸ್ಪೇನ್‌ನ ಟೆನಿಸ್ ಸ್ಟಾರ್ ರಫೆಲ್ ನಡಾಲ್, ಬ್ರಿಟನ್ ಟೆನಿಸ್ ತಾರೆ ಆ್ಯಂಡಿ ಮರ್ರೆ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್‌ರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಗುರುವಾರ ಹ್ಯೂಸ್ ನಿಧನರಾದಾಗ ಕ್ರಿಕೆಟ್ ಆಡುವ ಎಲ್ಲ ದೇಶಗಳ ಕ್ರಿಕೆಟಿಗರು ತೀವ್ರ ಶೋಕ ವ್ಯಕ್ತಪಡಿಸಿದ್ದರು. ಶುಕ್ರವಾರ ಕ್ರಿಕೆಟ್ ಅಲ್ಲದೆ ಇತರ ಕ್ರೀಡಾಪಟುಗಳು ದುಃಖ ವ್ಯಕ್ತಪಡಿಸುತ್ತಿದ್ದಾರೆ.

ಫಿಲಿಪ್ ಹ್ಯೂಸ್ ನಿಧನ ನಿಜಕ್ಕೂ ದುರಂತಮಯ…. ಹ್ಯೂಸ್ ಕುಟುಂಬದ ಕುರಿತು ಚಿಂತಿಸುವಂತಾಗಿದೆ. ವೇಗದ ಬೌಲರ್ ಸಿಯಾನ್ ಅಬೊಟ್ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ ಎಂದು ಮರ್ರೆ ಟ್ವಿಟ್ ಮಾಡಿದ್ದಾರೆ. ಸ್ಪೇನ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿದ್ದರೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಖಾಯಂ ಆಗಿ ಭಾಗವಹಿಸುತ್ತಿರುವ ರಫೆಲ್ ನಡಾಲ್ ಅವರು ಹ್ಯೂಸ್ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯದ ಉದಯೋನ್ಮುಖ ಕ್ರಿಕೆಟಿಗ ಹ್ಯೂಸ್ ನಿಧನದ ಸುದ್ದಿ ಕೇಳಿ ನನಗೆ ಆಘಾತವಾಯಿತು. ಅವರ ಕುಟುಂಬ ವರ್ಗ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ನಡಾಲ್ ಹೇಳಿದ್ದಾರೆ.

ದಕ್ಷಿಣ ಆಸ್ಟ್ರೇಲಿಯದ ತವರು ಮೈದಾನ ಅಡಿಲೇಡ್ ಓವಲ್‌ನ ಸ್ಕೋರ್ ಬೋರ್ಡ್‌ನಲ್ಲಿ‘‘ ವಾಲೆ ಫಿಲಿಪ್ ಹ್ಯೂಸ್ 1988-2014’’ ಎಂಬ ಸಂದೇಶವನ್ನು ಹಾಕಲಾಗಿತ್ತು. ಲಂಡನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರಗ್ಬಿ ಆಡಲು ತೆರಳಿದ್ದ ಆಸ್ಟ್ರೇಲಿಯದ ರಗ್ಬಿ ಯೂನಿಯನ್ ಟೀಮ್ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸಿ ಹ್ಯೂಸ್‌ಗೆ ಗೌರವ ನೀಡಲು ನಿರ್ಧರಿಸಿದೆ.

Write A Comment