ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಿ ಮತ್ತು ಅವರ ಪತ್ನಿ ನಾಗರತ್ನ ಅವರ ನಡುವಿನ ಪ್ರಕರಣ ಇತ್ಯರ್ಥಗೊಂಡಿದ್ದು, ನಾಗರತ್ನ ಅವರಿಗೆ ವಿಜಿ ಪ್ರತಿ ತಿಂಗಳು 30 ಸಾವಿರ ರುಪಾಯಿ ನೀಡಬೇಕು ಎಂದು ನ್ಯಾಯಾಲಯದ ಆದೇಶಿಸಿದೆ.
ಪತ್ನಿ ನಾಗರತ್ನ ಅವರೊಂದಿಗಿನ ಜೀವನ ಸಾಕು ಸಾಕಾಗಿ ಹೋಗಿದ್ದು ತಮಗೆ ವಿಚ್ಛೇದನ ನೀಡಬೇಕು ಎಂದು ನಟ ವಿಜಿ ಈ ಹಿಂದೆ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಸತತ ವಿಚಾರಣೆ ನಡೆದಿದ್ದು, ಇಂದು ನ್ಯಾಯಾಲಯ ತನ್ನ ಆದೇಶ ನೀಡಿದೆ. ನಟ ವಿಜಿ ತಮ್ಮ ಪತ್ನಿ ನಾಗರತ್ನ ಅವರಿಗೆ ಪ್ರತಿ ತಿಂಗಳು 30 ಸಾವಿರ ರುಪಾಯಿಯಂತೆ ಪ್ರತೀ ತಿಂಗಳು ಹಣ ನೀಡಬೇಕು. ವಿಜಿಯಾಗಲಿ ಅಥವಾ ನಾಗರತ್ನ ಅವರಾಗಲಿ ಮಾಧ್ಯಮಗಳಿಗೆ ಈ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಇನ್ನು ಪ್ರಕರಣ ಸಂಬಂಧ ಇಬ್ಬರಿಗೂ ಕೆಲ ನಿರ್ಬಂಧಗಳನ್ನು ವಿಧಿಸಿರುವ ನ್ಯಾಯಾಲಯ, ನಾಗರತ್ನ ಅವರು ಮಕ್ಕಳನ್ನು ಶಾಲೆಗೆ ಹೋಗಿ ನೋಡುವಂತಿಲ್ಲ ಎಂದು ಹೇಳಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ ಈ ಹಿಂದೆ ನಾಗರತ್ನ ಅವರು ತಮ್ಮ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದು, ಇದರಿಂದ ನಟನಾದ ನನಗೆ ಮತ್ತು ನನ್ನ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಎಂದು ವಿಜಿ ನ್ಯಾಯಾಲಯದಲ್ಲಿ ಆಲವತ್ತುಕೊಂಡಿದ್ದರು. ವಿಜಿ ಅವರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ನಾಗರತ್ನ ಅವರು ವಿಜಿ ಮನೆ ಬಳಿ ಹೋಗಿ ಜಗಳ ಮಾಡದಂತೆ ಸೂಚಿಸಿದೆ.
ಈ ಹಿಂದೆ ವಿಜಿ ವಿರುದ್ಧ ಪ್ರಕರಣ ದಾಖಲಿಸಿದ್ದ ನಾಗರತ್ನ ಅವರು ತಮಗೆ ತಿಂಗಳಿಗೆ 60 ಸಾವಿರ ರುಪಾಯಿ ಜೀವನಾಂಶ ಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ತಕರಾರು ಅರ್ಜಿ ಸಲ್ಲಿಸಿದ್ದ ನಟ ದುನಿಯಾ ವಿಜಿ ನಾನು ಅಷ್ಟು ಸಮರ್ಥನಲ್ಲ. ತಿಂಗಳಿಗೆ 60 ಸಾವಿರ ರುಪಾಯಿಗಳನ್ನು ನೀಡಲು ನನ್ನಿಂದ ಸಾಧ್ಯವಿಲ್ಲ ಹೀಗಾಗಿ ಆ ಮೊತ್ತವನ್ನು ಕಡಿತಗೊಳಿಸಬೇಕು ಎಂದು ವಿಜಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಇದೀಗ ನ್ಯಾಯಾಲಯ ಆ ಮೊತ್ತವನ್ನು 30 ಸಾವಿರಕ್ಕೆ ಇಳಿಕೆ ಮಾಡಿದೆ.
ಒಟ್ಟಾರೆ ಸ್ಯಾಂಡಲ್‌ವುಡ್‌ನಲ್ಲಿ ನಡ ದುನಿಯಾ ವಿಜಿ ಕೌಟುಂಬಿಕ ಬಿರುಕು ವಿಚಾರ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಮಾಧ್ಯಮಗಳಲ್ಲಿ ವಿಜಿ ಪ್ರಕರಣ ಪದೇ ಪದೇ ಪ್ರಸಾರವಾಗುವ ಮೂಲಕ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು.