ಮನೋರಂಜನೆ

ಬಾಕ್ಸಿಂಗ್ ವಿವಾದ: ಸರಿತಾ ದೇವಿಗೆ ಕಂಚು: ಕನ್ನಡಿಗ ವಿಕಾಸ್ ಗೌಡಗೆ ಬೆಳ್ಳಿ

Pinterest LinkedIn Tumblr

vikas-gowda-gold

ಇಂಚೋನ್, ಸೆ.30: ಖ್ಯಾತ ಡಿಸ್ಕಸ್ ಎಸೆತಗಾರ ಕರ್ನಾಟಕದ ವಿಕಾಸ್ ಗೌಡ ಬೆಳ್ಳಿ ಗೆಲ್ಲುವ ಮೂಲಕ ಭಾರತ ಏಷ್ಯನ್ ಗೇಮ್ಸ್‌ನ 11ನೆ ದಿನವಾಗಿರುವ ಇಂದು ಒಂದು ಬೆಳ್ಳಿ ಹಾಗೂ ಮೂರು ಕಂಚು ಪಡೆದು ಅಂಕ ಪಟ್ಟಿಯಲ್ಲಿ 10ನೆ ಸ್ಥಾನವನ್ನು ಕಾಯ್ದುಕೊಂಡಿದೆ.

ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ವಿಕಾಸ್ ಗೌಡ 62.58 ಮೀಟರ್ ದೂರಕ್ಕೆ ಡಿಸ್ಕನ್ನು ಎಸೆದು ಎರಡನೆ ಸ್ಥಾನದೊಂದಿಗೆ ಭಾರತಕ್ಕೆ ಬೆಳ್ಳಿ ತಂದುಕೊಟ್ಟರು. ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೋಮವಾರ ಸೀಮಾ ಪೂನಿಯಾ ಚಿನ್ನ ಜಯಿಸಿದ ಬಳಿಕ ವಿಕಾಸ್ ಗೌಡರಿಂದ ಚಿನ್ನ ನಿರೀಕ್ಷಿಸಲಾಗಿತ್ತು. ಆದರೆ ಅವರು ಆರು ಬಾರಿ ಪ್ರಯತ್ನ ನಡೆಸಿದ್ದರೂ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲ.

ಇರಾನ್‌ನ ಇಶಾನ್ ಹದಾದಿ (65.11 ಮೀ.) ಚಿನ್ನ ಮತ್ತು ಕತರ್‌ನ ಮುಹಮ್ಮದ್ ಅಹ್ಮದ್ ಧೀಬ್ (61.25 ಮೀ.) ಕಂಚು ಹಂಚಿಕೊಂಡರು.

ಮಹಿಳೆಯರ ಬಾಕ್ಸಿಂಗ್‌ನ 60 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಎಲ್.ಸರಿತಾ ದೇವಿ ವಿವಾದಾತ್ಮಕ ತೀರ್ಪಿನಿಂದಾಗಿ ದಕ್ಷಿಣ ಕೊರಿಯಾದ ಜಿನಾ ಪಾರ್ಕ್‌ಗೆ 0-3 ಅಂತರದಲ್ಲಿ ಶರಣಾಗಿ ಕಂಚು ಪಡೆದರು. ಮೊದಲೆರಡು ಸುತ್ತುಗಳಲ್ಲಿ ಸರಿತಾ ಮೇಲುಗೈ ಸಾಧಿಸಿದ್ದರೂ, ತೀರ್ಪುಗಾರರ ಅವಕೃಪೆಯಿಂದಾಗಿ ಫೈನಲ್‌ಗೆ ತಲುಪುವ ಅವಕಾಶ ಕಳೆದುಕೊಂಡರು.

ಸರಿತಾ ವಿಚಾರದಲ್ಲಿ ತೀರ್ಪುಗಾರರು ಅನುಸರಿಸಿದ ಪಕ್ಷಪಾತ ಧೋರಣೆಯನ್ನು ವಿರೋಧಿಸಿ ಭಾರತ ಎಐಬಿಎಗೆ ದೂರು ನೀಡಿದೆ. 500 ಡಾಲರ್ ಶುಲ್ಕವನ್ನು ಪಾವತಿಸಿ ದೂರು ನೀಡಿದೆ.

ವಿವಾದಾತ್ಮಕ ತೀರ್ಪಿನಿಂದಾಗಿ ಸರಿತಾ ತೊಂದರೆಗೊಳಗಾದಾಗ ಅವರ ಸಮಸ್ಯೆಯನ್ನು ಕೇಳಲು ಅಲ್ಲಿ ಭಾರತದ ಅಧಿಕಾರಿಗಳು ಅಲ್ಲಿರಲಿಲ್ಲ. ಸರಿತಾ ಪತಿ ಥ್ಯೊಬಾ ಸಿಂಗ್ ಮತ್ತು ಕೋಚ್ ಸಾಗರ ಧೈಯಾ ಎಐಬಿಎಗೆ ದೂರು ಸಲ್ಲಿಸಿದರು.

ಭಾರತದ ಖ್ಯಾತ ಮಹಿಳಾ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಮಾತ್ರ ಫೈನಲ್ ಪ್ರವೇಶಿಸಿದ್ದಾರೆ. ಐದು ಬಾರಿ ವರ್ಲ್ಡ್ ಚಾಂಪಿಯನ್ ಮತ್ತು ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ ಮೇರಿ ಕೋಮ್ ಅವರು ಸರಿತಾಗೆ ಫೈನಲ್ ತಲುಪುವ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಆಘಾತಗೊಂಡಿದ್ದಾರೆ. ‘‘ಎದುರಾಳಿ ಕೊರಿಯಾದ ಬಾಕ್ಸರ್ ಆಗಿರುವ ಹಿನ್ನೆಲೆಯಲ್ಲಿ ಸರಿತಾಗೆ ಅನ್ಯಾಯವಾಗಿದೆ. ಇದು ದು:ಖದ ವಿಚಾರವಾಗಿದೆ’’ ಎಂದು ಹೇಳಿದ್ದಾರೆ.

‘‘ನಾನು ನನ್ನ ಮಗುವನ್ನು ದೂರ ಇರಿಸಿ ಏಷ್ಯನ್ ಗೇಮ್ಸ್‌ಗಾಗಿ ಕಠಿಣ ತಯಾರಿ ನಡೆಸಿದ್ದೆ. ಯಾರು ಕಷ್ಟಪಟ್ಟು ತರಬೇತಿ ಪಡೆಯುತ್ತಾರೋ ಅಂತಹ ಆಟಗಾರರಿಗೆ ಕೆಲವೊಮ್ಮೆ ಈ ರೀತಿಯ ಸಮಸ್ಯೆ ಎದುರಾಗುವುದು ಸಹಜ. ಇದು ಆಘಾತಕಾರಿ ಸಂಗತಿಯಾಗಿದೆ ’’ ಎಂದು ಸರಿತಾ ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರ ಬಾಕ್ಸಿಂಗ್‌ನ 69-75 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಪೂಜಾ ರಾಣಿ ಸೋತು ಕಂಚು ಪಡೆದಿದ್ದಾರೆ. ಮಹಿಳೆಯರ ಸೈಲಿಂಗ್‌ನಲ್ಲಿ ವರ್ಷಾ ಗೌತಮ್ ಮತ್ತು ಐಶ್ವರ್ಯ ನೇತೃತ್ವದ ತಂಡ ಕಂಚು ಗೆದ್ದುಕೊಂಡಿದೆ.

ಪುರುಷರ ಹಾಕಿಯಲ್ಲಿ ಆಕಾಶ್ ದೀಪ್ ಸಿಂಗ್ ದಾಖಲಿಸಿದ ಏಕೈಕ ಗೋಲು ನೆರವಿನಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು 1-0 ಅಂತರದಲ್ಲಿ ಮಣಿಸಿ ಫೈನಲ್‌ಗೆ ತೇರ್ಗಡೆಯಾಗಿದೆ. ಭಾರತ 16 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಪ್ರಯತ್ನ ನಡೆಸಲಿದೆ.

Write A Comment