
ಮುಂಬೈ (ಜು. 20): ಮುಂಬೈನಲ್ಲಿ ಭಿಕ್ಷೆ ಬೇಡುತ್ತಲೇ 4 ಫ್ಲಾಟ್ಗಳನ್ನು ಖರೀದಿಸಿದ್ದ ಹೈಟೆಕ್ ಭಿಕ್ಷುಕಿಯನ್ನು ಆಸ್ತಿಯಾಸೆಗೆ ಆಕೆಯ ಸೊಸೆಯೇ ಕೊಲೆ ಮಾಡಿದ್ದಾಳೆ. ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಸೊಸೆಯೇ ಅತ್ತೆಯನ್ನು ಆಸ್ಪತ್ರೆಗೆ ಸೇರಿಸಿದ್ದಳು. ತನ್ನ ಅತ್ತೆ ಕಾಲು ಜಾರಿ ಬಾತ್ರೂಂನಲ್ಲಿ ಬಿದ್ದಿದ್ದಾರೆ ಎಂದು ಸುಳ್ಳು ಹೇಳಿದ್ದಳು. ಆದರೆ, ಗಾಯಗಳನ್ನು ನೋಡಿದ ವೈದ್ಯರಿಗೆ ಇದು ಕೊಲೆ ಪ್ರಯತ್ನ ಎಂಬುದು ಗೊತ್ತಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಭಿಕ್ಷುಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮುಂಬೈನ ಚೆಂಬೂರಿನ ಪೆಸ್ತುಂ ಸಾಗರ್ ಕಾಲೋನಿಯಲ್ಲಿ 70 ವರ್ಷದ ಸಂಜನಾ ಪಾಟೀಲ್ ಭಿಕ್ಷುಕಿ ವಾಸವಾಗಿದ್ದರು. ಚೆಂಬೂರ್ ಮತ್ತು ವೋರ್ಲಿಯಲ್ಲಿ 4 ಫ್ಲಾಟ್ಗಳನ್ನು ಹೊಂದಿದ್ದ ಭಿಕ್ಷುಕಿ 3 ಫ್ಲಾಟ್ಗಳನ್ನೂ ಬಾಡಿಗೆಗೆ ಕೊಟ್ಟು ಒಂದು ಫ್ಲಾಟ್ನಲ್ಲಿ ಮಗನ ಜೊತೆ ವಾಸವಾಗಿದ್ದರು. ಅವರ ಗಂಡ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅವರಿಗೆ ಮಕ್ಕಳಿಲ್ಲದ ಕಾರಣ ದಿನೇಶ್ ಎಂಬಾತನನ್ನು ದತ್ತು ಪಡೆದಿದ್ದರು. ಆತನಿಗೂ ಕೆಲವು ವರ್ಷಗಳ ಹಿಂದೆ ಅಂಜನಾ ಎಂಬ ಯುವತಿ ಜೊತೆ ಮದುವೆ ಮಾಡಲಾಗಿತ್ತು.
ದೇವಸ್ಥಾನದ ಎದುರು ಭಿಕ್ಷೆ ಬೇಡುವುದನ್ನೇ ಕಸುಬಾಗಿಸಿಕೊಂಡಿದ್ದ ಸಂಜನಾ 4 ಫ್ಲಾಟ್, ಚಿನ್ನಾಭರಣ ಖರೀದಿಸಿದ ನಂತರವೂ ಭಿಕ್ಷೆ ಬೇಡುವುದನ್ನು ಮುಂದುವರೆಸಿದ್ದರು. ಹಾಗೇ ಮೂರು ಮನೆಗಳಿಂದ ಬಾಡಿಗೆಯೂ ಬರುತ್ತಿತ್ತು. ಅತ್ತೆಯ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಅಂಜನಾ ಅದೆಲ್ಲವನ್ನೂ ತನ್ನ ಗಂಡನ ಹೆಸರಿಗೆ ಮಾಡುವಂತೆ ಅನೇಕ ಬಾರಿ ಕೇಳಿದ್ದಳು. ಈ ವಿಷಯಕ್ಕೆ ಅತ್ತೆ-ಸೊಸೆ ನಡುವೆ ಜಗಳವೂ ಆಗುತ್ತಿತ್ತು.
ಕಳೆದ ವಾರ ತನ್ನ ಅತ್ತೆಯನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆತಂದಿದ್ದ ಅಂಜನಾ ಆಕೆ ಬಾತ್ರೂಮ್ನಲ್ಲಿ ಜಾರಿ ಬಿದ್ದಿದ್ದಾರೆ ಎಂದಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಂಜನಾ ಪಾಟೀಲ್ ಮೃತಪಟ್ಟಿದ್ದರು. ಈ ಪ್ರಕರಣದ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ತನಿಖೆ ನಡೆಸಿದ್ದರು. ಆಗ ಅದು ಆಕಸ್ಮಿಕ ಸಾವಲ್ಲ, ಕೊಲೆ ಎಂಬುದು ಗೊತ್ತಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಸಾವನ್ನಪ್ಪಿದ ಸಂಜನಾ ಅವರ ಮೈಮೇಲೆ 14 ಕಡೆ ಗಾಯ ಹಾಗೂ ಕುತ್ತಿಗೆ ಮೇಲೆ ಕೈಗುರುತು ಮೂಡಿರುವುದನ್ನು ಕಂಡು ಅನುಮಾನಗೊಂಡಿದ್ದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಅಂಜನಾ ಅವರ ಮನೆಗೆ ಹೋಗಿ ತನಿಖೆ ನಡೆಸಿದಾಗ ಅಂಜನಾಳ ಮಗಳು ತನ್ನ ತಾಯಿ ಹಾಗೂ ಅಜ್ಜಿ ಜೋರಾಗಿ ಜಗಳವಾಡಿದ್ದರು ಎಂದು ಹೇಳಿದ್ದಳು. ಪ್ರತಿದಿನ ಭಿಕ್ಷೆಯಿಂದ ಬಂದ ಹಣವನ್ನು ಸಂಜನಾ ಮನೆಯಲ್ಲಿ ಅಡಗಿಸಿಡುತ್ತಿದ್ದರು. ಆ ಹಣಕ್ಕಾಗಿ ಅತ್ತೆ-ಸೊಸೆ ಪ್ರತಿದಿನ ಜಗಳವಾಡುತ್ತಿದ್ದರು. ಅಲ್ಲದೆ, ಸಾವನ್ನಪ್ಪಿದ ಸಂಜನಾರ ಒಡವೆಗಳನ್ನು ಅಂಜನಾ ತನ್ನ ಒಳಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದು ವಿಚಾರಣೆ ವೇಳೆ ಬಯಲಾಗಿತ್ತು.
ಅಷ್ಟಕ್ಕೂ ಆಗಿದ್ದೇನು?:
ಕಳೆದ ವಾರ ಮಧ್ಯಾಹ್ನ ಭಿಕ್ಷೆ ಬೇಡಿಕೊಂಡು ಮನೆಗೆ ಬಂದ ಸಂಜನಾ ಜೊತೆಗೆ ಎಂದಿನಂತೆ ಅಂಜನಾ ಜಗಳ ಶುರುಮಾಡಿದ್ದಳು. ಆಗ ಜಗಳ ವಿಪರೀತಕ್ಕೆ ಹೋಗಿ ಅಂಜನಾ ಸಿಟ್ಟಿನಿಂದ ತನ್ನ ಮಗನ ಕ್ರಿಕೆಟ್ ಬ್ಯಾಟ್ನಿಂದ ತನ್ನ ಅತ್ತೆಗೆ ಹೊಡೆದಿದ್ದಳು. ಮೈತುಂಬ ಬ್ಯಾಟ್ನಿಂದ ಹೊಡೆದ ಅಂಜನಾ ಆಕೆಯನ್ನು ತಳ್ಳಿ ಬೀಳಿಸಿದ್ದಳು. ನಂತರ ತನ್ನ ಅತ್ತೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆಂದು ಆಸ್ಪತ್ರೆಗೆ ಸೇರಿಸಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಸಂಜನಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದರು.
Comments are closed.