ಮುಂಬೈ (ಜು. 19): ಆತ 70 ವರ್ಷದ ವೃದ್ಧ. ಹೆಂಡತಿ ಸಾವನ್ನಪ್ಪಿ 1 ವರ್ಷ ಆಗಿತ್ತು. ಆತನಿಗೆ ತನ್ನ ಕೊನೆಯ ಕಾಲದಲ್ಲಿ ಹೆಂಡತಿ ಬೇಕೆಂಬ ಆಸೆ ಹೆಚ್ಚಾಗಿತ್ತು. ಹೀಗಾಗಿ, ಮರುಮದುವೆಯಾಗಲು ನಿರ್ಧರಿಸಿದ್ದ ವೃದ್ಧನ ಅದೃಷ್ಟಕ್ಕೆ 40 ವರ್ಷದ ವಿಧವೆಯೊಬ್ಬಳು ಸಿಕ್ಕಿದ್ದಳು. ಆಕೆಗೆ 21 ವರ್ಷದ ಮಗಳೂ ಇದ್ದಳು. ಎರಡೂ ಮನೆಯವರೆಲ್ಲ ಒಪ್ಪಿದ ಮೇಲೆ ಮದುವೆಗೆ ಎಲ್ಲ ತಯಾರಿಯೂ ನಡೆಯಿತು. ಆದರೆ, ಮದುವೆಯ ಸಂಭ್ರಮದಲ್ಲಿ ತೇಲಬೇಕಾಗಿದ್ದ ತಾತನಿಗೆ ದೊಡ್ಡ ಆಘಾತ ಕಾದಿತ್ತು!
ಮುಂಬೈನ ಬೊರಿವಲಿ ನಿವಾಸಿಯಾದ 70 ವರ್ಷದ ವೃದ್ಧ 2019ರ ಆಗಸ್ಟ್ನಲ್ಲಿ ಜೈಪುರದ ವಿಧವೆಯೊಂದಿಗೆ ಮದುವೆಯಾಗಲು ನಿರ್ಧರಿಸಿದ್ದರು. ವೃದ್ಧನಿಗೆ ತನ್ನ ಸ್ನೇಹಿತರ ಮೂಲಕ ಆ ಯುವತಿಯ ಪರಿಚಯವಾಗಿತ್ತು. ಆದರೆ, ಮದುವೆಗೂ ಮುನ್ನ ಆ ಮಹಿಳೆ ವೃದ್ಧನ ಬಳಿ ಇದ್ದ 28 ಲಕ್ಷ ಮೌಲ್ಯದ ಒಡವೆ, ಹಣವನ್ನು ಕದ್ದು ಪರಾರಿಯಾಗಿದ್ದಳು. ಇದರಿಂದ ಆಘಾತಕ್ಕೊಳಗಾಗಿದ್ದ ವೃದ್ಧ ಮಾನಸಿಕ ಖಿನ್ನತೆಗೂ ಒಳಗಾಗಿದ್ದರು. ಅದೇ ಆಘಾತದಲ್ಲಿ ಅವರಿಗೆ ಇತ್ತೀಚೆಗೆ ಹೃದಯಾಘಾತವಾಗಿದೆ. ನಂತರ ಅವರು ಕಳೆದ ವರ್ಷ ನಡೆದ ಮೋಸದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮದುವೆಯ ವಸ್ತುಗಳ ಖರೀದಿಗಾಗಿ ಮಹಿಳೆ ತನ್ನ ಕುಟುಂಬದೊಂದಿಗೆ ಮುಂಬೈಗೆ ಬಂದಿದ್ದಳು. ಆಗ ತನ್ನನ್ನು ಮದುವೆಯಾಗುವ ಯುವತಿ ಉಳಿದುಕೊಳ್ಳಲೆಂದು 70 ವರ್ಷದ ವೃದ್ಧ ತನ್ನ ಮನೆಯ ಕೀಯನ್ನು ಅವರಿಗೆ ಕೊಟ್ಟು ತಾನು ಇನ್ನೊಂದು ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ, ಆ ಮನೆಯಲ್ಲಿದ್ದ ಒಡವೆ, ಬೆಲೆಬಾಳುವ ವಸ್ತುಗಳನ್ನೆಲ್ಲ ದೋಚಿಕೊಂಡು ಆಕೆ ಪರಾರಿಯಾಗಿದ್ದಳು. ಈ ಬಗ್ಗೆ ವೃದ್ಧ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಮೋಸ ಹೋದ ವೃದ್ಧನ ಹೆಂಡತಿ 2018ರಲ್ಲಿ ತೀರಿ ಹೋಗಿದ್ದರು. ಈ ವೇಳೆ ಮನೆಯಲ್ಲಿ ಒಬ್ಬರೇ ಇದ್ದ ಅವರಿಗೆ ಆತನ ಸ್ನೇಹಿತ ಜೈಪುರದ ಓರ್ವ ವಿಧವೆಯನ್ನು ಮದುವೆಯಾಗುವಂತೆ ಸಲಹೆ ನೀಡಿದ್ದರು. ಆದರಂತೆ ಆತನೇ 21 ವರ್ಷದ ಮಗಳಿರುವ ವಿಧವೆಯನ್ನು ತೋರಿಸಿದ್ದ. ಈ ಮದುವೆಗೆ ವಿಧವೆಯ ಅಣ್ಣ, ತಮ್ಮಂದಿರು, ಮಗಳು ಕೂಡ ಒಪ್ಪಿದ್ದರು. ಮದುವೆಯಾಗುವವರೆಗೆ ತಮ್ಮ ಮನೆಯಲ್ಲೇ ಇರುವಂತೆ ವೃದ್ಧ ತನ್ನ ಮನೆಯ ಕೀಯನ್ನು ಆ ಮಹಿಳೆಗೆ ಕೊಟ್ಟಿದ್ದರು. ಆದರೆ, ಆಕೆ ಚಿನ್ನಾಭರಣ, ಹಣ, ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ತೆಗೆದುಕೊಂಡು ವೃದ್ಧನ ಮನೆಯಿಂದ ಎಸ್ಕೇಪ್ ಆಗಿದ್ದಳು. ನಂತರ ಅನುಮಾನಗೊಂಡು ವೃದ್ಧ ಮನೆಯಲ್ಲಿ ಹುಡುಕಾಡಿದಾಗ 28 ಲಕ್ಷ ರೂ. ಮೌಲ್ಯದ ವಸ್ತುಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ.
ಜೈಪುರಕ್ಕೆ ಅವಳ ಮನೆಗೆ ಹೋಗಿ ನೋಡಿದಾಗ ಆಕೆ ಅಲ್ಲಿಂದಲೂ ನಾಪತ್ತೆಯಾಗಿದ್ದಳು. ಇದೇ ಆಘಾತದಲ್ಲಿ ಆ ವೃದ್ಧನಿಗೆ ಹೃದಯಾಘಾತವೂ ಆಗಿತ್ತು. ಪದೇಪದೆ ಹೃದಯಾಘಾತ ಸಂಭವಿಸಿದ್ದರಿಂದ ತನಗೆ ಅನ್ಯಾಯ ಮಾಡಿದ ಮಹಿಳೆಯನ್ನು ಹಿಡಿಯಬೇಕೆಂದು ವೃದ್ಧ ಮತ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Comments are closed.