ಮುಂಬಯಿ: ರಿಯಲನ್ಸ್ ಜಿಯೋದಲ್ಲಿನ ಶೇ. 2.32ರಷ್ಟು ಷೇರುಗಳನ್ನು ಸೌದಿ ಅರೇಬಿಯಾ ಮೂಲದ ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್‌ಗೆ (ಪಿಐಎಫ್) 11,367 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲು ಮುಂದಾಗಿದೆ.
ಇದರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಟೆಲಿಕಾಂ ಮತ್ತು ಡಿಜಿಟಲ್ ಉದ್ಯಮ ಜಿಯೋದಲ್ಲಿ ಕಳೆದ 8 ವಾರಗಳ ಅಂತರದಲ್ಲಿ ಒಟ್ಟು 10 ಕಂಪನಿಗಳು ಹಣ ಹೂಡಿದಂತಾಗಿದೆ.
ಈ ಹೂಡಿಕೆಯೊಂದಿಗೆ ಜಿಯೋದ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಜೊತೆಗೆ ಕಂಪನಿ ಮೌಲ್ಯ 5.16 ಲಕ್ಷ ಕೋಟಿ ರೂಪಾಯಿಗೆ ಏರಲಿದೆ. ಒಟ್ಟಾರೆ 10 ಹೂಡಿಕೆಗಳೊಂದಿಗೆ ಮಾತೃ ಸಂಸ್ಥೆ ರಿಲಯನ್ಸ್ ಶೇ. 24.70 ಷೇರುಗಳನ್ನು ಮಾರಿ 1.16 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದಂತಾಗಿದೆ.
3 ವಾರದಲ್ಲಿ 3ನೇ ಹೂಡಿಕೆ: ಜಿಯೋ ಆಟಕ್ಕೆ ಕೈಜೋಡಿಸಿದ ಮತ್ತೊಂದು ಬೃಹತ್ ಕಂಪನಿ!
ಜಿಯೋ ಸಂಸ್ಥೆಯ ಷೇರು ಮಾರಾಟ ಮತ್ತು 53,214 ಕೋಟಿ ರೂಪಾಯಿ ಮೊತ್ತದ ಹಕ್ಕಿನ ಷೇರುಗಳ ಮಾರಾಟದಿಂದ ರಿಲಯನ್ಸ್ ಕಂಪನಿಯ ಒಟ್ಟಾರೆ ಸಾಲದ ಪ್ರಮಾಣ 2020ನೇ ಆರ್ಥಿಕ ವರ್ಷದ ಅಂತ್ಯಕ್ಕೆ 1.61 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಲಿದೆ. ಇದರೊಂದಿಗೆ 2021ರ ಮಾರ್ಚ್‌ಗೆ ಸಾಲ ಮುಕ್ತವಾಗುವ ಹಾದಿಯಲ್ಲಿ ರಿಲಯನ್ಸ್ ಸಾಗುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದಕ್ಕೂ ಮೊದಲು ಜಿಯೋ ತನ್ನ ಶೇ. 1.32ರಷ್ಟು ಷೇರುಗಳನ್ನು 6,441.3 ಕೋಟಿ ರೂಪಾಯಿಗೆ ಅಮೆರಿಕಾದ ಹೂಡಿಕೆ ಸಂಸ್ಥೆ ಟಿಪಿಜಿ ಆಂಟ್ ಎಲ್ ಕ್ಯಾಟೆರ್ಟನ್ ಮಾರುತ್ತಿರುವುದಾಗಿ ಶುಕ್ರವಾರ ಹೇಳಿತ್ತು.
ಈಗಾಗಲೇ ಅಬುಧಾಬಿಯ ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ ಮತ್ತು ಮುಬಡಾಲ, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಫೇಸ್‌ಬುಕ್ ಕೂಡ ಜಿಯೋದಲ್ಲಿ ಹೂಡಿಕೆ ಮಾಡಿವೆ. ಇದರಲ್ಲಿ ಫೇಸ್‌ಬುಕ್ ಗರಿಷ್ಠ ಶೇ. 9.99 ಷೇರುಗಳನ್ನು 44,000 ಕೋಟಿ ರೂಪಾಯಿಗೆ ಖರೀದಿಸಿದೆ.
Comments are closed.