ಮುಂಬೈ

ಲಾಕ್‌ಡೌನ್‌ ಉಲ್ಲಂಘನೆ: ಊರಿಗೆ ಹೋಗಲು ಬಾಂದ್ರಾದಲ್ಲಿ ಸಾವಿರಾರು ಕಾರ್ಮಿಕರು ಪ್ರತಿಭಟನೆ

Pinterest LinkedIn Tumblr


ಮುಂಬಯಿ: ದೇಶವ್ಯಾಪಿ ಲಾಕ್‌ಡೌನ್‌ನ್ನು ಮೇ 3ರವರೆಗೆ ವಿಸ್ತರಣೆ ಮಾಡಿದ್ದರಿಂದ ಆತಂಕಗೊಂಡ ವಲಸೆ ಕಾರ್ಮಿಕರು ಮನೆಗೆ ಹೋಗಲು ಅವಕಾಶ ನೀಡಿ ಎಂದು ಮುಂಬೈನ ಬಾಂದ್ರಾ ಬಳಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಬಹಳಷ್ಟು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರನ್ನು ಚದುರಿಸಿದ್ದಾರೆ.

ಬಾಂದ್ರಾ ನಿಲ್ದಾಣದ ಅಹ್ಲೆ ಸುನ್ನತ್‌ ರಾಝಾ ಜಾಮಾ ಮಸೀದಿ ಹತ್ತಿರ ಸಾವಿರಾರೂ ಸಂಖ್ಯೆಯಲ್ಲಿ ಕಾರ್ಮಿಕರು ಸೇರಿದ್ದರು. 21 ದಿನಗಳ ಲಾಕ್‌ಡೌನ್‌ನಿಂದ ಬಹಳಷ್ಟು ಸಮಸ್ಯೆ ಅನುಭವಿಸಿರುವ ವಲಸೆ ಕಾರ್ಮಿಕರು ಲಾಕ್‌ಡೌನ್‌ ಇನ್ನು 19 ದಿನ ವಿಸ್ತರಣೆಯಾಗುತ್ತಿದ್ದಂತೆ ಆತಂಕಗೊಂಡು ನಮ್ಮನ್ನು ಮನೆಗೆ ಹೋಗಲು ಬಿಡಿ ಎಂದು ಪ್ರತಿಭಟನೆ ನಡೆಸಿದ್ದಾರೆ.

ಲಾಕ್‌ಡೌನ್‌ ಉಲ್ಲಂಘಿಸಿ ಸಾವಿರಾರೂ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪೊಲೀಸರು ಕಾರ್ಮಿಕರನ್ನು ಲಾಠಿ ಚಾರ್ಜ್‌ ಮಾಡಿ ಚದುರಿಸಿದ್ದು, ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ. ಮಾರ್ಚ್‌ 25ರಿಂದ ದೇಶವ್ಯಾಪಿ ಲಾಕ್‌ಡೌನ್‌ನ್ನು ಪ್ರಧಾನಿ ಮೋದಿ ಏಕಾ ಏಕಿ ಘೋಷಿಸಿದ್ದರು. ಇದರಿಂದ ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ಧವಾಗಿ ತವರಿಗೆ ಮರಳಲಾಗದೇ ವಲಸಿಗರು ಸಮಸ್ಯೆಯನ್ನು ಅನುಭವಿಸಿದ್ದರು.

ಘಟನೆ ಬಗ್ಗೆ ಟ್ವಿಟ್ಟರ್‌ನಲ್ಲಿ ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ ಪ್ರತಿಕ್ರಿಯಿಸಿದ್ದು, ಕೇಂದ್ರದ ಮೇಲೆ ಗೂಬೆ ಕೂರಿಸಿದ್ದಾರೆ. ಬಾಂದ್ರಾ ನಿಲ್ದಾಣದಂತೆಯೇ ಸೂರತ್‌ನಲ್ಲೂ ಪರಿಸ್ಥಿತಿ ಇದೆ. ಆದರೆ, ಕೇಂದ್ರ ಸರಕಾರ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಲು ಯಾವುದೇ ಜವಾಬ್ದಾರಿಯನ್ನು ಹೋರುತ್ತಿಲ್ಲ. ಕಾರ್ಮಿಕರಿಗೆ ಆಹಾರ, ವಸತಿ ಬೇಕಿಲ್ಲ. ಅವರು ಮನೆಗೆ ಹೋದರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಇನ್ನು, ದೇಶದಲ್ಲಿಯೇ ಅತಿಹೆಚ್ಚು ಕೊರೊನಾ ಪಾಸಿಟಿವ್‌ ಕೇಸ್‌ಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. ಇದುವರೆಗೂ 2337 ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿದ್ದು, ಮುಂಬೈ ನಗರದಲ್ಲಿಯೇ ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕಿತರು ಇದ್ದಾರೆ.

Comments are closed.