ಮುಂಬೈ

ಶಾಂತಿಯುತ ಪ್ರತಿಭಟನಾಕಾರರು ದೇಶದ್ರೋಹಿಗಳಲ್ಲ: ಬಾಂಬೆ ಹೈಕೋರ್ಟ್

Pinterest LinkedIn Tumblr


ಮುಂಬೈ/ನವದೆಹಲಿ: ಯಾವುದೇ ಒಂದು ಕಾನೂನು ವಿರುದ್ಧ ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೆ ಅವರನ್ನು ದೇಶದ್ರೋಹಿ ಅಥವಾ ದೇಶ ವಿರೋಧಿಗಳು ಎಂದು ಕರೆಯಬಾರದು ಎಂದು ಬಾಂಬೆ ಹೈಕೋರ್ಟ್ ನ ಔರಂಗಬಾದ್ ಪೀಠ ತಿಳಿಸಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕುಳಿತು ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಮಹಾರಾಷ್ಟ್ರದ ನಿವಾಸಿ ಇಫ್ತಿಕರ್ ಶೇಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಪೀಠ ಈ ಆದೇಶ ನೀಡಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸರು ಶೇಕ್ ಗೆ ಪ್ರತಿಭಟನೆ ನಡೆಸಲು ಅನುಮತಿಯನ್ನು ನಿರಾಕರಿಸಿದ್ದರು. ಸಿಎಎ ವಿರುದ್ಧ ಅಸಂಬದ್ಧ ರೀತಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶವೇ ಇಲ್ಲ. ಆದರೆ ಇಂತಹ ವ್ಯಕ್ತಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಅವರ ಹಕ್ಕು ಎಂಬುದಾಗಿ ಕೋರ್ಟ್ ನಿರೀಕ್ಷಿಸುತ್ತದೆ. ಹಾಗಾಗಿ ಇಂತಹ ವ್ಯಕ್ತಿಗಳನ್ನು ದೇಶದ್ರೋಹಿಗಳು ಅಥವಾ ದೇಶ ವಿರೋಧಿಗಳು ಎಂದು ಕರೆಯಬಾರದು. ಇದು ಸರ್ಕಾರದ ವಿರುದ್ಧದ ಪ್ರತಿಭಟನೆ ಎಂದು ವಿಭಾಗೀಯ ಪೀಠದ ಜಸ್ಟೀಸ್ ಟಿವಿ ನಾಲಾವಾಡೆ ಮತ್ತು ಎಂಜಿ ಸೆವಾಲಿಕರ್ ಹೇಳಿದರು.

ಭಾರತ ಸ್ವಾತಂತ್ರ್ಯ ಪಡೆದದ್ದು ಚಳವಳಿಯ ಮೂಲಕ. ಇದೊಂದು ಅಹಿಂಸಾ ವಿಧಾನ..ಹಾಗಾಗಿ ಈವರೆಗೂ ದೇಶದ ಜನರು ಅಹಿಂಸೆಯನ್ನೇ ಅನುಸರಿಸುತ್ತಾ ಬಂದಿದ್ದಾರೆ. ನಾವು ಅದೃಷ್ಟವಂತರು..ದೇಶದ ಬಹುತೇಕ ಜನರು ಅಹಿಂಸೆಯನ್ನು ನಂಬಿದ್ದಾರೆ. ಈ ಕಕ್ಷಿದಾರ ಕೂಡಾ ಶಾಂತಿಯುತವಾಗಿ ಪ್ರತಿಭಟಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Comments are closed.