
ಮುಂಬೈ(ನ.24): ಮಹಾರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಶಾಸಕ ಕಾಣೆಯಾಗಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿದೆ. ಇಲ್ಲಿನ ದಿಢೀರ್ ರಾಜಕೀಯ ಬೆಳವಣಿಗೆ ಮಧ್ಯೆ ಅಜಿತ್ ಪವಾರ್ ನೇತೃತ್ವದ ಹಲವು ಎನ್ಸಿಪಿ ಶಾಸಕರು ಬಿಜೆಪಿಗೆ ಬೆಂಬಲ ನೀಡಿದರು. ನಿನ್ನೆ ಶನಿವಾರ ಬೆಳಗ್ಗೆ ರಾಜಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ದೇವೇಂದ್ರ ಫಡ್ನವೀಸ್ ಎರಡನೇ ಬಾರಿ ಸಿಎಂ ಆಗಿ ಪ್ರಮಾನ ವಚನ ಸ್ವೀಕರಿಸಿದರು. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಂಡರು. ಈ ವೇಳೆ ಪ್ರಮಾನ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಎನ್ಸಿಪಿ ಶಾಸಕರು ದಿಢೀರ್ ಕಾಣೆಯಾಗಿದ್ದಾರೆ ಎಂಬ ದೂರು ಶಹಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಎನ್ಸಿಪಿ ಶಾಸಕ ದೌಲತ್ ದರೋಡ ರಾಜಭವನಕ್ಕೆ ಆಗಮಿಸಿದ್ದಾಗ ಕಾಣೆಯಾದವರು ಎಂದು ಹೇಳಲಾಗುತ್ತಿದೆ. ಮಾಜಿ ಶಾಸಕ ಪಾಂಡುರಂಗ ಬರೋರ ಎಂಬುವರು ಈ ಸಂಬಂಧ ಶಹಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ದೂರಿನಲ್ಲಿ ಶುಕ್ರವಾರ ರಾತ್ರಿಯೇ ದರೊಡ ಥಾಣೆಯಿಂದ ಪುತ್ರ ಕರಣ್ ಜತೆ ಮುಂಬೈಗೆ ಆಗಮಿಸಿದ್ದರು. ಆದರೀಗ ಮುಂಬೈಗೆ ಆಗಮಿಸಿದ ನಂತರವೇ ಕಾಣೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಪ್ರಸ್ತಾಪ ಮಾಡಿದ್ದಾರೆ.
ಈ ಬೆನ್ನಲ್ಲೇ ಸುದ್ದಿಗಾರರ ಜತೆ ಮಾತಾಡಿದ ಪುತ್ರ ಕರಣ್ ತಂದೆ ದರೋಡ ನಿನ್ನೆಯಿಂದಲೂ ಫೋನ್ ಮಾಡಿಲ್ಲ. ಯಾರ ಫೋನಿಗೂ ಸಿಗುತ್ತಿಲ್ಲ. ನಮಗೂ ಶರದ್ ಪವಾರ್ಗೆ ಬೆಂಬಲ ನೀಡಬೇಕೆಂದು ಆಸೆ ಇದೆ ಎಂದರು.
ಮಹಾರಾಷ್ಟ್ರದಲ್ಲಿ ಮೊನ್ನೆಯವರೆಗೂ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಎಂದಿದ್ದ ಸಮೀಕರಣ ನಿನ್ನೆ ರಾತ್ರೋರಾತ್ರಿ ಬಿಜೆಪಿ-ಎನ್ಸಿಪಿಯಾಗಿ ಬದಲಾಗಿ ಹೋಗಿದೆ. ಒಂದೆಡೆ ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಬಿಜೆಪಿ ಜತೆ ಸರ್ಕಾರ ರಚನೆಗೆ ಕೈಜೋಡಿಸಿದ್ದಾರೆ. ಇನ್ನೊಂದೆಡೆ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಈಗಲೂ ಕಾಂಗ್ರೆಸ್ ಮತ್ತು ಶಿವಸೇನಾ ಜೊತೆಯೇ ನಿಂತಿದ್ದಾರೆ. ಅಣ್ಣನ ಮಗ ಅಜಿತ್ ಪವಾರ್ ಮಾತ್ರವೇ ಬಿಜೆಪಿ ಜೊತೆ ಹೋಗಿರುವುದು, ಎನ್ಸಿಪಿ ಶಾಸಕರು ಯಾರು ಹೋಗಿಲ್ಲ ಎಂದು ಹೇಳಲಾಗುತ್ತದೆ.
ಮೂಲಗಳ ಪ್ರಕಾರ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಬಹುಮತ ಸಾಬೀತುಪಡಿಸಲು ಇನ್ನೊಂದು ವಾರ ಕಾಲ, ಅಂದರೆ ನ. 30ರವರೆಗೆ ಕಾಲಾವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷಗಳ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತು ಶಿವಸೇನಾ ರೆಸಾರ್ಟ್ಗಳನ್ನ ಆಯ್ಕೆ ಮಾಡಿಕೊಂಡಿವೆ. ಶಿವಸೇನಾದವರು ತಮ್ಮ ಶಾಸಕರನ್ನು ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಕರೆದೊಯ್ಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ರೆಸಾರ್ಟ್ನಲ್ಲಿ ಒಂದು ವಾರ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿತ್ತು. ಈ ಮಧ್ಯೆ ಎನ್ಸಿಪಿ ಶಾಸಕ ಕಾಣೆಯಾಗಿರುವುದು ಆಪರೇಷನ್ ಬಿಜೆಪಿ ಮುನ್ಸೂಚನೆ ಎಂಬ ಚರ್ಚೆ ನಡೆಯುತ್ತಿದೆ.
Comments are closed.