ಮುಂಬೈ

ನಾನೆಂದೂ ಎನ್.ಸಿ.ಪಿ.ಯವನೇ ಮೋದಿ ಜೀ – ಏನಿದು ಅಜಿತ್ ಪವಾರ್ ಹೇಳಿಕೆ?

Pinterest LinkedIn Tumblr


ಮುಂಬಯಿ: ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿ ಶನಿವಾರವಷ್ಟೇ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಎನ್.ಸಿ.ಪಿ. ನಾಯಕ ಅಜಿತ್ ಪವಾರ್ ಅವರು ಸುಮಾರು 36 ಗಂಟೆಗಳ ಬಳಿಕ ತಮ್ಮ ಅಧಿಕೃತ ಟ್ವಟ್ಟರ್ ಅಕೌಂಟ್ ಅನ್ನು ಮರುಚಾಲನೆಗೊಳಿಸಿದ್ದಾರೆ. ಮತ್ತು ಸ್ಟೇಟಸ್ ಅನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಎಂದು ಬದಲಾಯಿಸಿಕೊಂಡಿದ್ದಾರೆ. ಮತ್ತು ತಮಗೆ ಅಭಿನಂದನೆ ಸಲ್ಲಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಜಿತ್ ಪವಾರ್ ಅವರು ಧನ್ಯವಾದ ಸಲ್ಲಿಸಿ ಗಮನ ಸೆಳೆದಿದ್ದಾರೆ.

‘ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು ನರೇಂದ್ರ ಮೋದಿ ಜಿ, ಮಹಾರಾಷ್ಟ್ರದಲ್ಲಿ ಸ್ಥಿರ ಸರಕಾರವನ್ನು ನೀಡುತ್ತೇವೆ ಎಂಬ ಭರವಸೆಯನ್ನು ನಾವು ನಿಮಗೆ ನೀಡುತ್ತಿದ್ದೇವೆ ಮತ್ತು ಈ ಸರಕಾರ ಮಹಾರಾಷ್ಟ್ರದ ಜನರ ಅಭ್ಯುದಯಕ್ಕೆ ಶ್ರಮಿಸಲಿದೆ’ ಎಂದು ಅಜಿತ್ ಪವಾರ್ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಪವಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಮತ್ತು ನಿತಿನ್ ಗಡ್ಕರಿ ಅವರಿಗೂ ಸಹ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಶನಿವಾರ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಎನ್.ಸಿ.ಪಿ.ಯ ಅಜಿತ್ ಪವಾರ್ ಅವರು ಬೆಂಬಲ ಸೂಚಿಸುವುದರೊಂದಿಗೆ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಈ ಬೆಳವಣಿಗೆಯ ಬಳಿಕ ಶರದ್ ಪವಾರ್ ಅವರು ಪಕ್ಷದ ಎಲ್ಲಾ ಶಾಸಕರ ಸಭೆಯನ್ನು ಕರೆದಿದ್ದರು ಆ ಸಭೆಗೆ ಅಜಿತ್ ಪವಾರ್ ಅವರು ಗೈರಾಗಿದ್ದರು. ಈ ಸಭೆಯಲ್ಲಿ ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಲಾಗಿತ್ತು ಮತ್ತು ಜಯಂತ್ ಪಾಟೀಲ್ ಅವರನ್ನು ಎನ್.ಸಿ.ಪಿ.ಯ ಶಾಸಕಾಂಗ ಪಕ್ಷದ ನೂತನ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ನಾಯಕ ಶರದ್ ಪವಾರ್ ಅವರು ನೀಡಿದ್ದ ಸೂಚನೆಯನ್ನು ಅಜಿತ್ ಪವಾರ್ ಅವರು ನಿರಾಕರಿಸಿದ್ದರು. ಅಜಿತ್ ಪವಾರ್ ಅವರು ತಮ್ಮ ಇನ್ನೊಂದು ಟ್ವೀಟ್ ನಲ್ಲಿ ‘ನಾನು ಎನ್.ಸಿ.ಪಿ.ಯವನಾಗಿದ್ದೇನೆ ಮತ್ತು ಯಾವಾಗಲೂ ಎನ್.ಸಿ.ಪಿ.ಯಲ್ಲೇ ಇರುತ್ತೇನೆ ಹಾಗೂ ಶರದ್ ಪವಾರ್ ಸಾಹೇಬ್ ಅವರೇ ನಮ್ಮ ನಾಯಕರು. ಮಹಾರಾಷ್ಟ್ರದಲ್ಲಿ ಮುಂದಿನ ಐದು ವರ್ಷಗಳ ಕಾಲ ಬಿಜೆಪಿ – ಎನ್.ಸಿ.ಪಿ ಮೈತ್ರಿ ಉತ್ತಮ ಸ್ಥಿರ ಸರಕಾರವನ್ನು ನೀಡಲಿದೆ’ ಎಂದು ಬರೆದುಕೊಂಡಿದ್ದಾರೆ.

Comments are closed.