ಮುಂಬೈ

ರೆಸಾರ್ಟ್ ರಾಜಕೀಯ; ಜೈಪುರ, ಭೋಪಾಲ್​ನತ್ತ ಶಿವಸೇನಾ, ಕಾಂಗ್ರೆಸ್ ಶಾಸಕರು

Pinterest LinkedIn Tumblr


ಮುಂಬೈ(ನ. 23): ಮಹಾರಾಷ್ಟ್ರದಲ್ಲಿ ನಿನ್ನೆಯವರೆಗೂ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್ ಎಂದಿದ್ದ ಸಮೀಕರಣ ರಾತ್ರೋರಾತ್ರಿ ಬಿಜೆಪಿ-ಎನ್​ಸಿಪಿಯಾಗಿ ಬದಲಾಗಿ ಹೋಗಿದೆ. ಇಂದು ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿದರು. ಎನ್​ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ಪಡೆದರು. ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಈಗಲೂ ಕಾಂಗ್ರೆಸ್ ಮತ್ತು ಶಿವಸೇನಾ ಜೊತೆಯೇ ನಿಂತಿದ್ದಾರೆ. ಅವರ ಅಣ್ಣನ ಮಗ ಅಜಿತ್ ಪವಾರ್ ಮಾತ್ರವೇ ಬಿಜೆಪಿ ಜೊತೆ ಹೋಗಿರುವುದು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಅಧಿಕಾರ ರಚನೆಯ ಕಸರತ್ತು ಈಗಲೂ ಮುಕ್ತವಾಗಿದೆ.

ಮೂಲಗಳ ಪ್ರಕಾರ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಬಹುಮತ ಸಾಬೀತುಪಡಿಸಲು ಇನ್ನೊಂದು ವಾರ ಕಾಲ, ಅಂದರೆ ನ. 30ರವರೆಗೆ ಕಾಲಾವಕಾಶ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷಗಳ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತು ಶಿವಸೇನಾ ರೆಸಾರ್ಟ್​ಗಳನ್ನ ಆಯ್ಕೆ ಮಾಡಿಕೊಂಡಿವೆ. ಶಿವಸೇನಾದವರು ತಮ್ಮ ಶಾಸಕರನ್ನು ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಕರೆದೊಯ್ಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನ ರೆಸಾರ್ಟ್​​ನಲ್ಲಿ ಒಂದು ವಾರ ವಾಸ್ತವ್ಯ ಹೂಡಲಿದ್ದಾರೆ.

ಎನ್​ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಿರುವ ಅಜಿತ್ ಪವಾರ್ ಅವರು ಎಲ್ಲಾ 54 ಎನ್​ಸಿಪಿ ಶಾಸಕರ ಬೆಂಬಲ ಇದೆ ಎಂದು ಹೇಳುವ ಪತ್ರವನ್ನು ರಾಜ್ಯಪಾಲರಿಗೆ ಕೊಟ್ಟಿದ್ದಾರೆನ್ನಲಾಗಿದೆ. ಆದರೆ, ಎನ್​ಸಿಪಿ ಮೂಲಗಳ ಪ್ರಕಾರ ಕೇವಲ 9 ಶಾಸಕರು ಮಾತ್ರ ಸದ್ಯದ ಮಟ್ಟಿಗೆ ಅಜಿತ್ ಪವಾರ್ ಬೆಂಬಲಕ್ಕೆ ಇದ್ದಾರೆ. ಬಿಜೆಪಿ 105 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಿರುವುದು 145 ಸಂಖ್ಯೆ. ಅಂದರೆ ಬಿಜೆಪಿಗೆ ಕನಿಷ್ಠ 40 ಶಾಸಕರ ಬೆಂಬಲ ಸಿಗುವ ಅಗತ್ಯವಿದೆ. ಅಜಿತ್ ಪವಾರ್ ಕಡೆಯಿಂದ ಬರುವ 9 ಶಾಸಕರು ಯಾವುದಕ್ಕೂ ಸಾಲದು. ಬಿಜೆಪಿಯಿಂದ ಆಪರೇಷನ್ ನಡೆಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಶಿವಸೇನಾ ಮತ್ತು ಕಾಂಗ್ರೆಸ್ ಪಕ್ಷಗಳ ಶಾಸಕರನ್ನು ರೆಸಾರ್ಟ್​ನಲ್ಲಿ ಇರಿಸಲಾಗುತ್ತಿದೆ. ಎನ್​ಸಿಪಿ ಶಾಸಕರನ್ನೂ ರೆಸಾರ್ಟ್​​ನಲ್ಲಿ ಇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜ್ಯಪಾಲರು ಬಿಜೆಪಿಗೆ ಅಧಿಕಾರ ರಚಿಸಲು ಹೇಳಿರುವುದರಲ್ಲಿ ಯಾವುದೇ ಅಕ್ರಮವಿಲ್ಲ. ಅಜಿತ್ ಪವಾರ್ ಎಲ್ಲಾ 54 ಎನ್​ಸಿಪಿ ಶಾಸಕರ ಬೆಂಬಲ ಇರುವ ಪತ್ರವನ್ನು ರಾಜ್ಯಪಾಲರಿಗೆ ತೋರಿಸಿದ್ದಾರೆ. ಹೀಗಾಗಿ, ಅವರಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮತ್ತು ಶಿವಸೇನಾದವರು ತಮ್ಮ ಬೆಂಬಲದ ಸಂಖ್ಯೆಯನ್ನು ರಾಜ್ಯಪಾಲರಲ್ಲಿ ತೋರಿಸಿಲ್ಲ. ಆ ಪಕ್ಷಗಳು ಮಾಡುತ್ತಿರುವ ಟೀಕೆ ಮತ್ತು ಆರೋಪಗಳಲ್ಲಿ ಸತ್ವವಿಲ್ಲ ಎಂದು ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಹಾಗೆಯೇ, ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಪರೀಕ್ಷೆಯಲ್ಲಿ ತಮ್ಮ ಪಕ್ಷ ಗೆಲ್ಲುತ್ತದೆ ಎಂದು ರವಿಶಂಕರ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.