ರಾಷ್ಟ್ರೀಯ

ಮಹಾರಾಷ್ಟ್ರ ಸರಕಾರ ರಚನೆ ಕುರಿತು ಬಿಜೆಪಿಗೆ 10 ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್ !

Pinterest LinkedIn Tumblr


ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಬೆಳವಣಿಗೆ ನಡೆದಿದ್ದು, ದೇವೇಂದ್ರ ಫಡ್ನವಿಸ್‌ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅಜಿತ್‌ ಪವಾರ್‌ ಉಪ ಮುಕ್ಯಮಂತ್ರಿಯಾಗಿದ್ದಾರೆ. ಈ ಹಿನ್ನೆಲೆ ಶಿವಸೇನೆ ನೇತೃತ್ವದ ಸರಕಾರ ರಚನೆಗೆ ಒಪ್ಪಿಕೊಂಡಿದ್ದ ಕಾಂಗ್ರೆಸ್‌ ಸಹಜವಾಗಿ ಬಿಜೆಪಿ ವಿರುದ್ಧ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಕಮಲ ಪಕ್ಷದ ವಿರುದ್ಧ 10 ಪ್ರಶ್ನೆಗಳನ್ನು ಕಾಂಗ್ರೆಸ್‌ ಕೇಳಿದೆ.

ಶಿವಸೇನೆಯೊಂದಿಗೆ ಸರಕಾರ ರಚಿಸಲು ಆರಂಭದಲ್ಲಿ ಹಿಂದೇಟು ಹಾಕಿದ್ದ ಕಾಂಗ್ರೆಸ್‌ ನಂತರ ಒಪ್ಪಿಕೊಂಡಿತ್ತು. ಅಲ್ಲದೆ, ಇನ್ನೇನು ಎನ್‌ಸಿಪಿಯೊಂದಿಗೆ ಸೇರಿ ಮೂರೂ ಪಕ್ಷಗಳು ಸರಕಾರ ರಚಿಸಲಿವೆ ಎಂದೇ ಹೇಳಲಾಗುತ್ತಿತ್ತು. ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತವಾಗಿದ್ದಾಗಲೇ ದೇವೇಂದ್ರ ಫಡ್ನವಿಸ್ ಸದ್ದಿಲ್ಲದೆ ಮತ್ತೆ ಮಹಾರಷ್ಟ್ರದ ಸಿಎಂ ಆಗಿದ್ದಾರೆ.

ಈ ಹಿನ್ನೆಲೆ ಬಿಜೆಪಿಯ ನಡೆಗೆ ಕಾಂಗ್ರೆಸ್ ಈ 10 ಪ್ರಶ್ನೆಗಳನ್ನು ಕೇಳಿದೆ.

1. ರಾಷ್ಟ್ರಪತಿ ಆಡಳಿತ ಹಿಂಪಡೆದು ಸರಕಾರ ರಚಿಸುವ ನಿರ್ಧಾರವನ್ನು ಬಿಜೆಪಿ ಯಾವಾಗ ತೆಗೆದುಕೊಂಡಿತು?

2. ದೇವೇಂದ್ರ ಫಡ್ನವಿಸ್‌ಗೆ ಎಷ್ಟು ಬಿಜೆಪಿ – ಎನ್‌ಸಿಪಿ ಶಾಸಕರ ಬೆಂಬಲವಿದೆ?

3. ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರು ರಾತ್ರಿಯ ವೇಳೆ ಒಂದೇ ಗಂಟೆಯಲ್ಲಿ ಹೇಗೆ ಪರಿಶೀಲನೆ ನಡೆಸಿದರು?

4. ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡ ಸಮಯ ಎಷ್ಟು?

5. ಯಾವ ಸಮಯದಲ್ಲಿ ಕೇಂದ್ರ ಸಂಪುಟ ಸಭೆ ನಡೆಸಲಾಯಿತು, ಆ ವೇಳೆ ಸಭೆಯಲ್ಲಿ ಯಾರಿದ್ದರು? ರಾಷ್ಟ್ರಪತಿ ಆಡಳಿತ ಹಿಂಪಡೆದುಕೊಳ್ಳುವ ಬಗ್ಗೆ ಎಷ್ಟು ಹೊತ್ತಿಗೆ ರಾಜ್ಯಪಾಲರಿಗೆ ಮಾಹಿತಿ ನೀಡಲಾಯಿತು?

6. ರಾಷ್ಟ್ರಪತಿ ಆಡಳಿತ ಹಿಂಪಡೆದುಕೊಳ್ಳುವ ಬಗ್ಗೆ ಕೇಂದ್ರ ಸಂಪುಟ ಎಷ್ಟು ಹೊತ್ತಿಗೆ ರಾಜ್ಯಪಾಲರಿಗೆ ಪತ್ರ ರವಾನಿಸಿದೆ?

7. ಕೇಂದ್ರ ಸಂಪುಟದ ನಿರ್ಣಯಕ್ಕೆ ಒಪ್ಪಿಗೆ ಸಿಕ್ಕಿದ್ದು ಯಾವಾಗ?

8. ರಾಜ್ಯಪಾಲರು ದೇವೇಂದ್ರ ಫಡ್ನವಿಸ್‌ಗೆ ಹಾಗೂ ಅಜಿತ್‌ ಪವಾರ್‌ಗೆ ಎಷ್ಟು ಹೊತ್ತಿಗೆ ಕರೆ ಮಾಡಿದರು? ಎಷ್ಟು ಹೊತ್ತಿಗೆ ಪ್ರಮಾಣ ವಚನ ಸ್ವೀಕಾರ ನಡೆಯಿತು? ಒಂದು ಖಾಸಗಿ ಸುದ್ದಿ ವಾಹಿನಿಯನ್ನು ಹೊರತುಪಡಿಸಿದರೆ , ಡಿಡಿ ಸೇರಿ ಇತರೆ ಮಾಧ್ಯಮಗಳಿಗೇಕೆ ಆಹ್ವಾನ ನೀಡಿಲ್ಲ? ಮಹಾರಾಷ್ಟ್ರದ ಮುಖ್ಯ ನ್ಯಾಯಮೂರ್ತಿಗೂ ಆಹ್ವಾನ ನೀಡಿಲ್ಲವೇಕೆ?

9. ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕವೂ ಫಡ್ನವಿಸ್‌ ಪೂರ್ಣ ಸರಕಾರ ಯಾವಾಗ ರಚನೆಯಾಗಲಿದೆ ಎಂಬ ಬಗ್ಗೆ ರಾಜ್ಯಪಾಲರು ಏಕೆ ತಿಳಿಸಿಲ್ಲ?

10. ಫಡ್ನವಿಸ್ ಸರಕಾರಕ್ಕೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಇನ್ನೂ ಏಕೆ ಗಡುವು ನೀಡಿಲ್ಲ?

Comments are closed.