
ಮುಂಬೈ: ಕಿರುತೆರೆ ನಟಿ ಮತ್ತು ರೂಪದರ್ಶಿ ಗೆಹನಾ ವಸಿಷ್ಠ ಅವರಿಗೆ ಚಿತ್ರೀಕರಣದ ವೇಳೆ ಹೃದಯಾಘಾತವಾಗಿದ್ದು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾದ ಪೌಷ್ಠಿಕಕಾಂಶದ ಆಹಾರ ಮತ್ತು ವಿಶ್ರಾಂತಿ ಇಲ್ಲದೇ ಇದ್ದುದ್ದರಿಂದ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗೆಹನಾ ವಸಿಷ್ಠ ವೆಬ್ ಸರಣಿಯೊಂದರಲ್ಲಿ ಬಿಡುವಿಲ್ಲದೆ ನಿರಂತರವಾಗಿ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಎರಡು ದಿನ ಯಾವುದೇ ಪೌಷ್ಠಿಕ ಆಹಾರ ಸೇವಿಸಿರಲಿಲ್ಲ. ಶೂಟಿಂಗ್ ತಂಡದವರು ಕೂಡ ಊಟವನ್ನು ಕೊಡದೆ ಬರೀ ಜ್ಯೂಸ್ ಕೊಟ್ಟಿದ್ದರು ಎಂದು ತಿಳಿದು ಬಂದಿದೆ. ಇದರಿಂದಾಗಿ ಶೂಟಿಂಗ್ ವೇಳೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮುಂಬೈನ ರಕ್ಷಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಉಸಿರಾಟಕ್ಕಾಗಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಕಳೆದ 48 ಗಂಟೆಗಳಿಂದ ಸೂಕ್ತ ಪೌಷ್ಠಿಕ ಆಹಾರ ಸೇವಿಸಿರಲಿಲ್ಲ. ಜೊತೆಗೆ ಕೆಲವು ಔಷಧಿಗಳು ಹಾಗೂ ಎನರ್ಜಿ ಡ್ರಿಂಕ್ ಒಟ್ಟಿಗೆ ಕುಡಿದ ಕಾರಣ ಹೃದಯಾಘಾತವಾಗಿದೆ. ಸದ್ಯಕ್ಕೆ ಗೆಹನಾ ಅವರಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗೆಹನಾ ವಸಿಷ್ಠ ಅವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಸುಮಾರು 70ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
Comments are closed.