ಮುಂಬೈ

ಶಿವಸೇನೆ ನಮ​ಗೆ ಬೆಂಬಲ ನೀಡಲು ಬಯಸಿದರೆ ಮಾತುಕತೆ ಸಿದ್ಧ: ಕಾಂಗ್ರೆಸ್

Pinterest LinkedIn Tumblr


ಮುಂಬೈ: ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿ ಸ್ಪರ್ಧಿಸಿದ್ದ ಶಿವಸೇನೆ ಕಾಂಗ್ರೆಸ್​ಗೆ ಬೆಂಬಲ ನೀಡಲು ಬಯಸಿದರೆ ಮಾತುಕತೆ ಸಿದ್ಧ ಎಂದು ಶುಕ್ರವಾರ ಮಹಾರಾಷ್ಟ್ರ ಕಾಂಗ್ರೆಸ್​ ಹೇಳಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿದೆ.​

ಶಿವಸೇನೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡರೆ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಜೊತೆ ಕೈ ಜೋಡಿಸಲು ಸಿದ್ಧ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಲಾಸಾಹೇಬ್ ಥೋರಟ್ ಶುಕ್ರವಾರ ಹೇಳಿದ್ದಾರೆ.

ನಾನು ಮುಕ್ತವಾಗಿ ಹೇಳುತ್ತಿದ್ದೇನೆ. ಶಿವಸೇನೆ ನಮಗೆ ಪ್ರಸ್ತಾವನೆ ಕಳುಹಿಸಿದರೆ ನಾನು ನಮ್ಮ ಪಕ್ಷದ ದೆಹಲಿ ನಾಯಕರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ, ಮೂಲಗಳ ಪ್ರಕಾರ ಶಿವಸೇನೆ ಅಭ್ಯರ್ಥಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಶಿವಸೇನೆ ಜೊತೆಗಿನ ಮೈತ್ರಿಗೆ ಕಾಂಗ್ರೆಸ್​ ಮಿತ್ರಪಕ್ಷವಾಗಿರುವ ಎನ್​ಸಿಪಿಯ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಥೋರಟ್​, ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಭವಿಷ್ಯದ ತಂತ್ರಗಾರಿಕೆ ಕುರಿತು ಚರ್ಚಿಸುವುದಾಗಿ ತಿಳಿಸಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲ ಪಕ್ಷಗಳು ನಿರ್ಧಾರ ಮಾಡಿದರೆ, ಅವರು ಸರ್ಕಾರ ರಚನೆ ಮಾಡಬಹುದು ಎಂದು ಕಾಂಗ್ರೆಸ್​ನ ಹೆಸರೇಳಲು ಇಚ್ಛಿಸದ ನಾಯಕರೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಹತ್ತು ಮಂದಿ ಪಕ್ಷೇತರ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ ಹಾಗೂ ಶಿವಸೇನೆ ಸಂಪರ್ಕದಲ್ಲಿ 9 ರೆಬೆಲ್​ ಶಾಸಕರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.

288 ಸದಸ್ಯ ಬಲದ ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್​ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್​ ಮಿತ್ರಪಕ್ಷವಾದ ಎನ್​ಸಿಪಿ 54 ಸ್ಥಾನಗಳಲ್ಲಿ ಗೆದ್ದಿದೆ. ಮತ್ತು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಮೈತ್ರಿಯ ಶಿವಸೇನೆ 56 ಸ್ಥಾನಗಳಲ್ಲಿ ಗೆದ್ದಿದೆ. ಬಹುಮತ ಸಾಬೀತಿಗೆ 145 ಸ್ಥಾನಗಳ ಅವಶ್ಯಕತೆ ಇದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು 15 ರೆಬೆಲ್ ಶಾಸಕರು ತಮ್ಮ ಸಂಪರ್ಕದಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ.

Comments are closed.