ಮುಂಬೈ

ಭಾರೀ ಮಳೆಗೆ ಮುಂಬೈ ತತ್ತರ ! ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ; ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ !

Pinterest LinkedIn Tumblr

ಮುಂಬೈ: ಕೊಂಕಣತೀರದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ವಾಣಿಜ್ಯ ನಗರಿ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಈ ಮಳೆ ಅಬ್ಬರ ಹೆಚ್ಚಾಗಿದ್ದು, ಮುಂಬೈನ ಉತ್ತರ ಕೊಂಕಣ ತೀರ ಪ್ರದೇಶ, ನವಿ ಮುಂಬೈ, ಧಾಣೆ ಮತ್ತು ಪಾಲ್ಗರ್​ಗಳಲ್ಲಿ ಮುಂದಿನ ಆರು ಗಂಟೆ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಪಾಲ್ಗಾರ್ ಹಾಗೂ ಥಾಣೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ರಾಯ್​ಗಢದ ಪೊಲದ್ಪುರ್​ನಲ್ಲಿ ಗುಡ್ಡ ಕುಸಿದಿರುವ ವರದಿಯಾಗಿದೆ.

2014ರಲ್ಲಿ ಮಳೆಯ ದಾಖಲೆ ಮೀರಿ ಈ ಬಾರಿ ಮಳೆಯಾಗಿದೆ. ಇಲ್ಲಿಯವರೆಗೂ ಮುಂಬೈನಲ್ಲಿ 1451ಮಿ.ಮೀ ಮಳೆಯಾಗಿದೆ. ಭಾರೀ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಗೋವಾ-ಮುಂಬೈ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದ್ದು, ರಸ್ತೆ ಸಂಚಾರ ಬಂದ್​ ಮಾಡಲಾಗಿದೆ.

ಮುಂದಿನ 6 ಗಂಟೆ ಭಾರೀ ಮಳೆ ಸುರಿಯುವ ಹಿನ್ನೆಲೆ ಮನೆಯಿಂದ ಹೊರಬಾರದಂತೆ ಮುಂಬೈ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮಳೆಗೆ ಈಗಾಗಲೇ ರಸ್ತೆಯಲ್ಲಿ ನೀರು ನಿಂತಿದ್ದು, ಟ್ರಾಫಿಕ್​ ಜಾಮ್​ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಸೂಚಿಸಲಾಗಿದೆ.

ಪಶ್ಚಿಮ ತೀರು ಪ್ರದೇಶದಲ್ಲಿಯೂ ಎಚ್ಚರಿಕೆ ನೀಡಿದ್ದು, ಸಮುದ್ರದ ಸಮೀಪ ಹೋಗದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ರೈಲು ವ್ಯವಸ್ಥೆ ಸರಾಗವಾಗಿ ನಡೆದಿದ್ದು, ಎಚ್ಚರಿಕೆಯಿಂದ ನಿಧಾನಗತಿಯಲ್ಲಿ ರೈಲು ಸಂಚಾರ ನಡೆಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇನ್ನು ವಿಮಾನ ನಿಲ್ದಾಣದಲ್ಲಿಯೂ ಎಂದಿನಂತೆ ಕಾರ್ಯಚಾರಣೆ ನಡೆಯುತ್ತಿದ್ದು, ವಿಮಾನ ಹಾರಾಟದಲ್ಲಿ ವಿಳಂಬವಾಗುತ್ತಿದೆ.

Comments are closed.