ಮುಂಬೈ

ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದಿರುವುದು ನನಗೆ ಮರಣದಂಡನೆಯಾಗಿದೆ: ಮಲ್ಯ

Pinterest LinkedIn Tumblr


ಮುಂಬೈ: ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ವಿಶೇಷ ನ್ಯಾಯಾಲಯ ಘೋಷಿಸಿರುವುದು ಹಾಗೂ ತನ್ನ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಂಡಿರುವುದು ತನ್ನ ಪಾಲಿಗೆ ಆರ್ಥಿಕ ಮರಣದಂಡನೆಯಾದಂತಾಗಿದೆ ಎಂದು ವಿಜಯ್ ಮಲ್ಯ ಅವರು ಬಾಂಬೆ ಹೈಕೋರ್ಟ್ ಮುಂದೆ ಅಳಲು ತೋಡಿಕೊಂಡ ಘಟನೆ ನಡೆದಿದೆ. ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆಯ ಕೆಲ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮಲ್ಯ ಪರ ವಕೀಲರು ಈ ಹೇಳಿಕೆ ನೀಡಿದರು.

“ನನ್ನ ಸಾಲಗಳು ಹಾಗೂ ಅದರ ಮೇಲಿನ ಬಡ್ಡಿ ಮೊತ್ತವು ಹೆಚ್ಚಾಗುತ್ತಿವೆ. ಈ ಸಾಲಗಳನ್ನ ತೀರಿಸುವಷ್ಟು ಆಸ್ತಿಗಳು ನನ್ನಲ್ಲಿವೆ. ಆದರೆ, ಈ ಆಸ್ತಿ ಬಳಸಿ ಸಾಲ ತೀರಿಸಲು ಸರಕಾರ ಅವಕಾಶ ನೀಡುತ್ತಿಲ್ಲ. ನನ್ನ ಆಸ್ತಿಗಳ ಮೇಲೆ ನನಗೇ ಅಧಿಕಾರ ಇಲ್ಲದಂತಾಗಿದೆ. ಇದು ನನಗೆ ಆರ್ಥಿಕ ಮರಣ ದಂಡನೆ ನೀಡಿದಂತಾಗಿದೆ” ಎಂದು ಮಲ್ಯ ಪರ ವಕೀಲ ಅಮಿತ್ ದೇಸಾಯಿ ಅವರು ಹೈಕೋರ್ಟ್ ಪೀಠಕ್ಕೆ ತಿಳಿಸಿದರು.

ಹಾಗೆಯೇ, ದೇಶಾದ್ಯಂತ ಇರುವ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮಕ್ಕೆ ತಡೆ ನೀಡಬೇಕೆಂದೂ ವಕೀಲ ಅಮಿತ್ ದೇಸಾಯಿ ಮನವಿ ಮಾಡಿಕೊಂಡರು.

ಆದರೆ, ನ್ಯಾ| ರಂಜಿತ್ ಮೋರೆ ಮತ್ತು ನ್ಯಾ| ಭಾರತಿ ದಾಂಗ್ರೆ ಅವರಿದ್ದ ಬಾಂಬೆ ಹೈಕೋರ್ಟ್ ಪೀಠವು ವಿಜಯ್ ಮಲ್ಯ ಅವರ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು.

2018ರ ಆಗಸ್ಟ್​ ತಿಂಗಳಲ್ಲಿ ಕೇಂದ್ರ ಸರಕಾರವು ತಲೆ ಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ (ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್ ಆ್ಯಕ್ಟ್) ರೂಪಿಸಿತ್ತು. ಇದರ ಆಧಾರದ ಮೇಲೆ ಮುಂಬೈನ ವಿಶೇಷ ನ್ಯಾಯಾಲಯವೊಂದು ಇದೇ ಜನವರಿ ತಿಂಗಳಲ್ಲಿ ಮಲ್ಯ ಅವರನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿತು.

ಇದಾದ ನಂತರ ವಿಜಯ್ ಮಲ್ಯ ಅವರು ಬಾಂಬೆ ಹೈ ಕೋರ್ಟ್​ನಲ್ಲಿ ಎರಡು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದರು. ಒಂದು ಅರ್ಜಿಯಲ್ಲಿ ಅವರು ಕಾಯ್ದೆಯ ಕೆಲ ಕಾನೂನುಗಳನ್ನು ಪ್ರಶ್ನಿಸಿದರು. ತನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮವನ್ನೂ ಅವರು ಪ್ರಶ್ನಿಸಿದರು. ಮತ್ತೊಂದು ಅರ್ಜಿಯಲ್ಲಿ ಅವರು ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದಾರೆ.

ಇವತ್ತು ಮೊದಲ ಅರ್ಜಿಯ ವಿಚಾರಣೆ ನಡೆದಿದೆ. ಎರಡನೇ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ನ ಇನ್ನೊಂದು ಪೀಠ ನಡೆಸಲಿದೆ.

ಇವತ್ತಿನ ವಿಚಾರಣೆಯ ವೇಳೆ, ಕೇಂದ್ರ ಸರಕಾರದ ಈ ಎಫ್​ಇಓ ಕಾಯ್ದೆಯ ಔಚಿತ್ಯವನ್ನು ಮಲ್ಯ ಪರ ವಕೀಲರು ಪ್ರಶ್ನಿಸಿದರು. ಈ ಕಾಯ್ದೆಯು ಅಸಾಂವಿಧಾನಿಕವಾಗಿದ್ದು, ಯಾವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನ ಕೇಂದ್ರ ಸರಕಾರಕ್ಕೆ ನೀಡಿದಂತಾಗುತ್ತದೆ ಎಂದು ವಾದಿಸಿದರು.

ಆದರೆ, ಮಲ್ಯ ಅವರ ವಾದವನ್ನು ಅಲ್ಲಗಳೆದ ಜಾರಿ ನಿರ್ದೇಶನಾಲಯದ ಪರ ವಕೀಲರು, ಕೇಂದ್ರದ ಎಫ್​ಇಓ ಕಾಯ್ದೆಯಲ್ಲಿ ಅಂಥದ್ದೇನೂ ದುರುದ್ದೇಶವಿಲ್ಲ. ಮೇಲಾಗಿ ತನಿಖಾ ಸಂಸ್ಥೆಗಳು ತಮ್ಮಿಚ್ಛೆಯಂತೆ ವರ್ತಿಸದಂತೆ ನಿಯಂತ್ರಣ ಹಾಕುತ್ತದೆ. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಯಾವುದೇ ಕೆಲಸಕ್ಕೂ ಕೋರ್ಟ್ ಆದೇಶ ಪಡೆಯಬೇಕು. ಎರಡೂ ಕಡೆಯವರ ವಿಚಾರಣೆ ನಡೆಸಿಯೇ ಕೋರ್ಟ್ ಆದೇಶ ನೀಡುತ್ತದೆ ಎಂದು ವಿವರಿಸಿದರು.

“ಈ ಕಾಯ್ದೆಯು ಮಲ್ಯರಂಥ ಜನರಿಗೆ ಮಾತ್ರ ಇದೆ. ಇದು ಸಾಧಾರಣ ಕಾನೂನನಲ್ಲ. 100 ಕೋಟಿಗಿಂತ ಹೆಚ್ಚು ಮೊತ್ತದ ಸಾಲ ಮರುಪಾವತಿ ಮಾಡದೆ ತಪ್ಪಿಸಿಕೊಂಡವರನ್ನು ವಾಪಸ್ ಕರೆಸಲು ಈ ಕಾಯ್ದೆ ರೂಪಿಸಲಾಗಿದೆ” ಎಂದು ಇ.ಡಿ. ಪರ ವಕೀಲ ಡಿ.ಪಿ. ಸಿಂಗ್ ಅವರು ಹೈ ಕೋರ್ಟ್ ಪೀಠಕ್ಕೆ ತಿಳಿಸಿದರು.

ಜಾರಿ ನಿರ್ದೇಶನಾಲಯದ ವಾದವನ್ನು ಒಪ್ಪಿದ ನ್ಯಾಯಪೀಠವು, ಮಲ್ಯಗೆ ತಿಳಿಹೇಳುವ ಕೆಲಸ ಮಾಡಿತು. “ಈ ಕಾನೂನು ಸ್ವಲ್ಪ ಕಠಿಣ ಇರುವುದು ನಮಗೆ ಗೊತ್ತು. ಕ್ಲಿಷ್ಟ ಸಂದರ್ಭಗಳನ್ನು ಎದುರಿಸಲು ಈ ಕಾಯ್ದೆ ಕಠಿಣವಾಗಿಯೇ ಇರಬೇಕಾಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದೇ ವೇಳೆ, ಕಾಯ್ದೆಯನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿರುವ ಅರ್ಜಿಗೆ ಉತ್ತರ ನೀಡುವಂತೆ ಕೇಂದ್ರದ ಅಟಾರ್ನಿ ಜನರಲ್ ಅವರಿಗೆ ಕೋರ್ಟ್ ನೋಟೀಸ್ ನೀಡಿದೆ.

Comments are closed.