ಮುಂಬೈ

ರಾಹುಲ್ ರ‍್ಯಾಲಿಯಲ್ಲಿ ಈ ಹಸಿರು ಧ್ವಜವನ್ನು ಪಾಕ್ ಧ್ವಜ ಎಂದ ನಟಿ: ತಕ್ಕ ಉತ್ತರ ನೀಡಿದ ಬಿಜೆಪಿ ಬೆಂಬಲಿಗ!

Pinterest LinkedIn Tumblr


ಮುಂಬೈ: ಹಸಿರು ಧ್ವಜ ಕಂಡಾಕ್ಷಣ ಪಾಕಿಸ್ತಾನದ ಧ್ವಜ ಎನ್ನುವವರಿಗೇನೂ ಕಡಿಮೆಯಿಲ್ಲ. ಆದರೆ ಎಲ್ಲಾ ಹಸಿರು ಧ್ವಜ ಪಾಕ್ ಧ್ವಜ ಆಗಿರಲ್ಲ ಎಂಬ ಸತ್ಯ ಕೆಲವರಿಗಷ್ಟೇ ಗೊತ್ತು.

ಅದೇ ರೀತಿ ಬಾಲಿವುಡ್ ನಟಿ ಕೊಯಿನಾ ಮಿತ್ರಾ ಅವರಿಗೂ ಕೂಡ ಈ ಹಸಿರು ಧ್ವಜ ಅದೆಕೋ ಗೊಂದಲ ಉಂಟು ಮಾಡಿದೆ. ಆದರೆ ಬಿಜೆಪಿ ಬೆಂಬಲಿಗರೊಬ್ಬರು ಈ ಗೊಂದಲವನ್ನು ದೂರ ಮಾಡಿ ಸುದ್ದಿಯಾಗಿದ್ದಾರೆ.

ಕೇರಳದ ವೈನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರ ರ‍್ಯಾಲಿಯೊಂದರಲ್ಲಿ ಹಸಿರು ಧ್ವಜ ರಾರಾಜಿಸಿವೆ.

ರಾಹುಲ್ ರ‍್ಯಾಲಿಯಲ್ಲಿ ಹಸಿರು ಧ್ವಜ ರಾರಾಜಿಸುತ್ತಿರುವ ಫೋಟೋ ಶೇರ್ ಮಾಡಿರುವ ನಟಿ ಕೊಯಿನಾ ಮಿತ್ರಾ, ಭಯೋತ್ಪಾದಕ ಮೊಹ್ಮದ್ ಅಲಿ ಜಿನ್ನಾ ಅವರಿಂದ ಭಾರತ ಮೊದಲ ಬಾರಿ ಇಬ್ಭಾಗವಾಗಿತ್ತು. ಇದೀಗ ರಾಹುಲ್ ಗಾಂಧಿ ಅವರಿಂದಾಗಿ ದೇಶ ಎರಡನೇ ಬಾರಿ ಇಬ್ಭಾಗವಾಗಲಿದೆ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಸೂಕ್ತ ಉತ್ತರ ನೀಡಿರುವ ಬಲಪಂಥೀಯ ಹೋರಾಟಗಾರ ಮತ್ತು ಬಿಜೆಪಿ ಬೆಂಬಲಿಗ ರಾಹುಲ್ ಈಶ್ವರ್, ಇದು ಪಾಕಿಸ್ತಾನದ ಧ್ವಜ ಅಲ್ಲ, ಬದಲಿಗೆ ವಿಭಜನೆ ವೇಳೆ ಜಿನ್ನಾರ ಸಿದ್ಧಾಂತ ಮತ್ತು ಪಾಕಿಸ್ತಾನವನ್ನು ಧಿಕ್ಕರಿಸಿ ಗಾಂಧಿ ಭಾರತವನ್ನು ಅಪ್ಪಿಕೊಂಡ ದೇಶಭಕ್ತ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಪಕ್ಷದ ಧ್ವಜ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ತಾವೂ ಕೂಡ ಪ್ರಧಾನಿ ಮೋದಿ ಬೆಂಬಲಿಗರಾಗಿದ್ದು, ಈ ಬಾರಿ ಬಿಜೆಪಿಗೆ ಮತ ಹಾಕಲಿರುವುದಾಗಿ ತಿಳಿಸಿರುವ ರಾಹುಲ್, ಹಾಗೆಂದ ಮಾತ್ರಕ್ಕೆ ಸತ್ಯವನ್ನು ಮರೆಮಾಚಿ ಸುಳ್ಳನ್ನು ಹರಡುವುದು ಸಲ್ಲ ಎಂದು ಸೂಕ್ತ ತಿರುಗೇಟು ನೀಡಿದ್ದಾರೆ.

Comments are closed.