ಮುಂಬೈ

ಇಂದು ನಡೆಯಲಿರುವ ಅಂಬಾನಿ ಮಗಳ ಮದುವೆಗೆ ಖರ್ಚಾಗುತ್ತಿರುವುದು ಎಷ್ಟು ಗೊತ್ತೆ?

Pinterest LinkedIn Tumblr


ಮುಂಬೈ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಮದುವೆ ಸಮಾರಂಭ ಡಿಸೆಂಬರ್ 12 ರಂದು ನಡೆಯಲಿದ್ದು, ಒಟ್ಟು ಮದುವೆ ಸಮಾರಂಭಕ್ಕೆ ಬರೋಬ್ಬರಿ 100 ಮಿಲಿಯನ್ ಡಾಲರ್ (ಸುಮಾರು 7200 ಕೋಟಿ ರೂ.) ಖರ್ಚು ಮಾಡಲಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇಶಾ ಮದುವೆ ಸಮಾರಂಭದ ಕಾರ್ಯಗಳು ಈಗಾಗಲೇ ಆರಂಭವಾಗಿದ್ದು ಡಿಸೆಂಬರ್ 8ರಂದೇ ಬಾಲಿವುಡ್ ಸ್ಟಾರ್ ನಟರು ಸೇರಿದಂತೆ ಸ್ನೇಹಿತರಿಗೆ ಆಹ್ವಾನ ನೀಡಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಹಲವು ಗಣ್ಯರು ಭಾಗವಹಿಸಿ ಶುಭಕೋರಿ ಸಂಭ್ರಮಿಸಿದ್ದರು. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಮುದ್ದಿನ ಮಗಳಾದ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಅವರ ವಿವಾಹ ಆಗುತ್ತಿದ್ದು, ಸದ್ಯ ಮದುವೆಯ ಪೂರ್ವ ಶಾಸ್ತ್ರಗಳು ನಡೆಯುತ್ತಿದೆ.

ವಿವಾಹಕ್ಕೆ ಇಂಗ್ಲೆಂಡ್ ರಾಜ ಕುಟುಂಬ, ಹಾಲಿವುಡ್, ಬಾಲಿವುಡ್ ನಟರು, ದೇಶ, ವಿದೇಶ ಗಣ್ಯ ಉದ್ಯಮಿಗಳು ಆಗಮಿಸುತ್ತಾರೆ. ಇವರಿಗೆ ಸೌಲಭ್ಯ ನೀಡಲೆಂದೇ ಮುಂಬೈಯಲ್ಲಿರುವ ಬಹುತೇಕ ಸ್ಟಾರ್ ಹೋಟೆಲ್ ಗಳನ್ನು ಬುಕ್ ಮಾಡಲಾಗಿದೆ. ಅಲ್ಲದೇ ಮದುವೆ ಆಗಮಿಸುವ ಅತಿಥಿಗಳಿಗೆ 100ಕ್ಕೂ ಹೆಚ್ಚು ಚಾರ್ಟರ್ ವಿಮಾನಗಳನ್ನು ಬುಕ್ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಏಷ್ಯಾದ ಶ್ರೀಮಂತ ಉದ್ಯಮಿ ಎಂದ ಹೆಗ್ಗಳಿಕೆ ಪಡೆದಿರುವ ಮುಕೇಶ್ ಅಂಬಾನಿ ತಮ್ಮ ಮಗಳ ವಿವಾಹ ಕಾರ್ಯಕ್ರಮದಲ್ಲಿ ಕೇವಲ ಶ್ರೀಮಂತರಿಗೆ ಮಾತ್ರವಲ್ಲದೇ ಸುಮಾರು 5,100 ಬಡ ಮಕ್ಕಳಿಗೂ ಕೂಡ ನಾಲ್ಕು ದಿನಗಳ ಕಾಲ ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಭಾರತದ ಪ್ರಮುಖ ಸಂಪ್ರದಾಯಿಕ ಕಲೆಗಳಿಗೆ ಬೆಂಬಲ ನೀಡಲು ವಿವಿಧ ಕಲಾವಿದರಿಗೆ ವ್ಯವಸ್ಥೆಯನ್ನು ಏರ್ಪಡಿಸಿದ್ದಾರೆ. ಮದುವೆಯ ಪ್ರಮುಖ ಕಾರ್ಯಕ್ರಮ ಮುಂಬೈನ ಮನೆಯಲ್ಲಿ ನಡೆಯಲಿದ್ದು, ಮದುವೆಗೂ ಮುನ್ನ ಆಚರಣೆಗಳು ನಗರದಲ್ಲಿ ನಡೆಯಲಿದೆ. ಮದುವೆಯ ಒಂದು ಆಮಂತ್ರಣ ಪತ್ರಿಕೆಗೆ 3 ಲಕ್ಷ ರೂ. ಖರ್ಚು ಮಾಡಲಾಗಿತ್ತು.

Comments are closed.