ಮುಂಬೈ

ಇಷ್ಟಪಟ್ಟ ಹುಡುಗಿ ಮದುವೆಗೆ ಒಪ್ಪದಿದ್ದರೆ ಅಪಹರಿಸಿ ತಾಳಿ ಕಟ್ಟಿ: ಬಿಜೆಪಿ ಶಾಸಕ

Pinterest LinkedIn Tumblr


ಮುಂಬಯಿ: ಇಷ್ಟಪಟ್ಟ ಹುಡುಗಿ ಮದುವೆಗೆ ಒಪ್ಪದಿದ್ದರೆ ಅಂಥವರನ್ನು ಮುಲಾಜಿಲ್ಲದೆ ಅಪಹರಿಸಿ ತಾಳಿ ಕಟ್ಟಿ ಎಂದಿದ್ದ ಬಿಜೆಪಿ ಶಾಸಕನ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ. ತಾನು ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದರೂ ಸಹ ಶಾಸಕ ರಾಮ್ ಕದಮ್‌ಗೆ ಸಂಘ ಪರಿವಾರ, ಬಿಜೆಪಿಯಿಂದಲೇ ಬೆಂಬಲ ಸಿಗುತ್ತಿಲ್ಲ. ಬದಲಾಗಿ ಸಂಘ ಪರಿವಾರದಿಂದಲೇ ಶಾಸಕನ ವಿರುದ್ಧ ಕ್ರಮಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ಘಾಟ್ಕೋಪರ್‌ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ವಕ್ತಾರ ರಾಮ್‌ ಕದಮ್, ಶ್ರೀಕೃಷ್ಣ ಗೋಕುಲಾಷ್ಟಮಿ ಅಂಗವಾಗಿ ನಡೆದ ದಹಿ ಹಂಡಿ ಉತ್ಸವದ ವೇಳೆ ನೆರೆದಿದ್ದ ಯುವಕರನ್ನು ಉದ್ದೇಶಿಸಿ ಮಾತನಾಡಿದ ವೇಳೆ‘‘ಸಾಹೇಬ್‌, ನಾನೊಬ್ಬ ಹುಡುಗಿಯನ್ನು ಇಷ್ಟಪಟ್ಟಿದ್ದೇನೆ. ಮದುವೆಯಾಗಲು ಬಯಸಿದ್ದೇನೆ. ಆದರೆ ಹುಡುಗಿ ಒಪ್ಪುತ್ತಿಲ್ಲ ಎಂದು ನೀವು (ಯುವಕರು) ನನ್ನ ಬಳಿ ಹೇಳಿದರೆ, ನನ್ನ ಉತ್ತರ; ಖಂಡಿತ ಹುಡುಗಿ ವರ್ತನೆ ತಪ್ಪು ಎನ್ನುವುದಾಗಿದೆ. ಮೊದಲು ನಿಮ್ಮ ಪೋಷಕರ ಒಪ್ಪಿಗೆ ಪಡೆದು ನನ್ನ ಬಳಿ ಬನ್ನಿ, ಖಂಡಿತ ನಿಮಗೆ ಹುಡುಗಿಯನ್ನು ಹೊತ್ತೊಯ್ಯಲು ಸಹಾಯ ಮಾಡುತ್ತೇನೆ,’’ಎಂದು ಹೇಳಿದ್ದರು.

ಆದರೆ, ರಾಮ್ ಕದಮ್ ಹೇಳಿಕೆಗೆ ದೇಶಾದ್ಯಂತ ಜನರಿಂದ ಹಾಗೂ ವಿಪಕ್ಷಗಳಿಂದ ಭಾರೀ ಆಕ್ಷೇಪ ಕೇಳಿಬಂದಿತ್ತು. ಬಳಿಕ, ಮುಜುಗರಕ್ಕೆ ಸಿಲುಕಿದ್ದ ಬಿಜೆಪಿ, ಶಾಸಕನ ಹೇಳಿಕೆ ಬಗ್ಗೆ ಮಾತನಾಡಲು ಪಕ್ಷದ ಹಲವರು ನಿರಾಕರಿಸಿದ್ದರು. ಇನ್ನೊಂದೆಡೆ, ಘಾಟ್ಕೋಪರ್‌ ಕ್ಷೇತ್ರದ ಶಾಸಕನ ವಿರುದ್ಧ ಬಿಜೆಪಿಯ ವಿದ್ಯಾರ್ಥಿಗಳ ಸಂಘ ಎಬಿವಿಪಿ ಬೂಟುಗಳಿಂದ ಹೊಡೆಯಿರಿ ( ಜೂತೆ ಮಾರೋ ) ಪ್ರತಿಭಟನೆ ನಡೆಸಿತ್ತು. ಅಲ್ಲದೆ, ಬಿಜೆಪಿ ರಾಷ್ಟ್ರೀಯ ವಕ್ತಾರೆ ಶೈನಾ ಎನ್‌ಸಿ ಸಹ ಶಾಸಕರ ಹೇಳಿಕೆಗೆ ಆಘಾತ ವ್ಯಕ್ತಪಡಿಸಿದ್ದರು. ಅಲ್ಲದೆ, ಮುಂಬೈನ ಎಬಿವಿಪಿ ನಾಯಕಿ ಸ್ವಾತಿ ಚೌಧರಿ ಸಹ ಬಿಜೆಪಿ ಶಾಸಕನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ರನ್ನು ಆಗ್ರಹಿಸಿದ್ದರು. ಈ ಹಿನ್ನೆಲೆ, ರಾಮ್ ಕದಮ್‌ಗೆ ಭಾರಿ ಸಂಕಷ್ಟ ಎದುರಾಗಿದೆ.

ಘಾಟ್ಕೋಪರ್ ಶಾಸಕನ ಹೇಳಿಕೆಗೆ ತೀವ್ರ ವಿರೋಧ ಕೇಳಿಬಂದ ಬಳಿಕ ಎಚ್ಚೆತ್ತುಕೊಂಡ ರಾಮ್ ಕದಮ್, ಬುಧವಾರ ಟ್ವಿಟರ್‌ನಲ್ಲಿ ವೀಡಿಯೋ ಮೂಲಕ ಕ್ಷಮೆ ಕೇಳಿದ್ದರು. ಅಲ್ಲದೆ, ಪತ್ರದ ಮೂಲಕವೂ ಗುರುವಾರ ಕ್ಷಮೆ ಕೇಳಿದ್ದರು. ಆದರೆ, ಎರಡು ಬಾರಿ ಕ್ಷಮೆ ಯಾಚಿಸಿದರೂ ಸಹ ವಿವಾದ ತಣ್ಣಗಾಗುತ್ತಿಲ್ಲ.

ವಿವಾದಕ್ಕೆ ತುಪ್ಪ ಸುರಿದ ಕಾಂಗ್ರೆಸ್ ನಾಯಕ
ಈ ನಡುವೆ, ಬಿಜೆಪಿ ಶಾಸಕನ ಹೇಳಿಕೆಯನ್ನು ಖಂಡಿಸಲು ಹೋಗಿ ಕಾಂಗ್ರೆಸ್‌ ಮುಖಂಡರೊಬ್ಬರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ‘ ಬಿಜೆಪಿ ಶಾಸಕ ರಾಮ್ ಕದಮ್‌ನ ನಾಲಿಗೆಯನ್ನು ಯಾರಾದರೂ ಕಡಿದರೆ, ನಾನು ಅವರಿಗೆ 5 ಲಕ್ಷ ರೂ. ಬಹುಮಾನ ನೀಡುತ್ತೇನೆ. ಹುಡುಗಿಯರನ್ನು ಕಿಡ್ನಾಪ್ ಮಾಡಿ ಎಂಬ ಅವರ ಹೇಳಿಕೆಯನ್ನು ತಾನು ತೀವ್ರವಾಗಿ ಖಂಡಿಸುತ್ತೇನೆ ಎಂಬ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿಸಚಿವ ಸುಬೋಧ್ ಸಾವ್‌ಜೀ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

Comments are closed.