ಮುಂಬೈ

ಆರ್‌ಬಿಐ ಆಫೀಸರ್‌ ಹುದ್ದೆಗಳ ನೇಮಕ ಹೇಗೆ?

Pinterest LinkedIn Tumblr


ಆರ್‌ಬಿಐ ಆಫೀಸರ್‌ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಈ ನೇಮಕ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ ಇಲ್ಲಿದೆ.

ದೇಶದ ಕೇಂದ್ರ ಬ್ಯಾಂಕ್‌ ಆಗಿರುವ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಗೂಪ್‌ ‘ಬಿ’ಯ ಆಫೀಸರ್‌ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಒಟ್ಟು 166 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಇದರಲ್ಲಿ ಆಫೀಸರ್‌ ಗ್ರೇಡ್‌ (ಡಿಆರ್‌) ಜನರಲ್‌ನ 127, ಆಫೀಸರ್‌ ಗ್ರೇಡ್‌ (ಡಿಆರ್‌) – ಡಿಇಪಿಆರ್‌ನ 22 ಮತ್ತು ಆಫೀಸರ್‌ ಗ್ರೇಡ್‌ (ಡಿಆರ್‌)- ಡಿಎಸ್‌ಐಎಂನ 17 ಹುದ್ದೆಗಳು ಸೇರಿವೆ.

ಈಗಾಗಲೇ ಪ್ರಕಟಿಸಲಾಗಿರುವಂತೆ ಎರಡು ಹಂತದ ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆ ಹೇಗಿರುತ್ತದೆ? ಇದಕ್ಕೆ ಯಾವೆಲ್ಲಾ ವಿಷಯಗಳನ್ನು ಓದಿಕೊಳ್ಳಬೇಕು ಎಂಬುದನ್ನು ತಿಳಿಯೋಣ.

ಮೊದಲ ಹಂತದ ಪರೀಕ್ಷೆ

ಮೊದಲ ಹಂತದ ಪರೀಕ್ಷೆಯು 200ಅಂಕಗಳಿಗೆ ಆನ್‌ಲೈನ್‌ನಲ್ಲಿ ನಡೆಯಲಿದೆ. ರಾಜ್ಯದ ಏಳು ಜಿಲ್ಲಾ ಕೇಂದ್ರಗಳಲ್ಲಿ ಅಂದರೆ ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಉಡುಪಿ ಮತ್ತು ಶಿವಮೊಗ್ಗದಲ್ಲಿ ಮಾತ್ರ ಪರೀಕ್ಷಾ ಕೇಂದ್ರ ಇರಲಿದೆ. ಪರೀಕ್ಷಾ ಕೇಂದ್ರದ ಮಾಹಿತಿ, ದಿನಾಂಕ ಮತ್ತು ಸಮಯವನ್ನು ಅಭ್ಯರ್ಥಿಗಳಿಗೆ ಪ್ರವೇಶ ಪತ್ರದಲ್ಲಿ ಒದಗಿಸಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ದಿನದಂದು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆಯಬೇಕಿರುತ್ತದೆ.

ಅಬ್ಜೆಕ್ಟೀವ್‌ ಮಾದರಿಯಲ್ಲಿ 200 ಅಂಕಗಳ ಈ ಪರೀಕ್ಷೆ ಬರೆಯಲು 120 ನಿಮಿಷ ಅಂದರೆ 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಇಂಗ್ಲಿಷ್‌ ಭಾಷೆಯನ್ನು ಹೊರತು ಪಡಿಸಿದ ಮತ್ತೆಲ್ಲಾ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿರುತ್ತವೆ. ಒಟ್ಟು ನಾಲ್ಕು ವಿಷಯಗಳನ್ನು ಈ ಪರೀಕ್ಷೆ ಒಳಗೊಂಡಿರುತ್ತದೆ. ಅವುಗಳೆಂದರೆ;

1. ಜನರಲ್‌ ಅವೇರ್ನೆಸ್‌

2. ಇಂಗ್ಲಿಷ್‌ ಲಾಂಗ್ವೇಜ್‌

3.ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌

4.ರೀಸನಿಂಗ್‌

ಈ ಪ್ರತಿ ವಿಷಯದಲ್ಲಿಯೂ ಬ್ಯಾಂಕ್‌ ನಿಗದಿಪಡಿಸಿದಷ್ಟು ಕನಿಷ್ಠ ಅಂಕವನ್ನು ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ. ಆಗಸ್ಟ್‌ 16ರಂದು ಮೊದಲ ಹಂತದ ಪರೀಕ್ಷೆ ನಡೆಸಲಾಗುವುದು ಎಂದು ಈಗಾಗಲೇ ಪ್ರಕಟಿಸಲಾಗಿದ್ದು, ಪರೀಕ್ಷೆ ನಡೆದ ಒಂದೇ ವಾರದಲ್ಲಿ ಎರಡನೇ ಹಂತದ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಮಾಹಿತಿಯನ್ನು ಆರ್‌ಬಿಐನ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ.

ಎರಡನೇ ಹಂತದ ಪರೀಕ್ಷೆ

ಒಟ್ಟು 300 ಅಂಕಗಳ ಎರಡನೇ ಹಂತದ ಪರೀಕ್ಷೆಯನ್ನು ಸೆಪ್ಟೆಂಬರ್‌ 6 ಮತ್ತು 7ರಂದು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯು 3 ವಿಷಯಗಳನ್ನೊಳಗೊಂಡಿದ್ದು, ಪ್ರತಿ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಲು 90 ನಿಮಿಷ ಎಂದರೆ ಒಂದೂವರೆ ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ಪ್ರಶ್ನೆ ಪತ್ರಿಕೆಗೂ ತಲಾ 100 ಅಂಕ ನಿಗದಿಪಡಿಸಲಾಗಿರುತ್ತದೆ. ಪರೀಕ್ಷೆಯ ವಿಷಯಗಳು ಇಂತಿವೆ;

1. ಪತ್ರಿಕೆ-1: Objective Type- ಅಬ್ಜೆಕ್ಟೀವ್‌ ಮಾದರಿ

2. ಪತ್ರಿಕೆ-2: – ವಿವರಣಾತ್ಮಕ ಪರೀಕ್ಷೆ. ಅಭ್ಯರ್ಥಿಗಳು ಕೀ ಬೋರ್ಡ್‌ನಲ್ಲಿ ಉತ್ತರವನ್ನು ಟೈಪ್‌ ಮಾಡಬೇಕಿರುತ್ತದೆ.

3. ಪತ್ರಿಕೆ-3: ಅಬ್ಜೆಕ್ಟೀವ್‌ ಮಾದರಿ – ಇದು ಆಪ್‌ಷನಲ್‌ ಪತ್ರಿಕೆಯಾಗಿರುತ್ತದೆ

ಈ ಪರೀಕ್ಷೆಯಲ್ಲಿ ಮೂರು ವಿಷಯಗಳಲ್ಲಿಯೂ ಹೆಚ್ಚು ಅಂಕ ಪಡೆದವರು ಸಂದರ್ಶನಕ್ಕೆ ಅರ್ಹತೆ ಪಡೆಯಲಿದ್ದಾರೆ. ಈ ಪರೀಕ್ಷೆಯಲ್ಲಿ ಇಂಗ್ಲಿಷ್‌ ಭಾಷೆಯನ್ನು ಹೊರತು ಪಡಿಸಿದ ಮತ್ತೆಲ್ಲಾ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿರುತ್ತವೆ. ಸಂದರ್ಶನವು 50 ಅಂಕಗಳಿಗೆ ನಡೆಯಲಿದೆ. ಸಂದರ್ಶನವನ್ನು ಕೂಡ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲಾಗುತ್ತದೆ. ಎರಡನೇ ಹಂತದ ಪರೀಕ್ಷೆ ಮತ್ತು ಸಂದರ್ಶನದಲ್ಲಿನ ಅಂಕವನ್ನು ಕ್ರೋಢೀಕರಿಸಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಸಿಲಬಸ್‌ ಏನು?

ಮೊದಲ ಹಂತದ ಪರೀಕ್ಷೆಗೆ ಸಿಲಬಸ್‌ ಏನೆಂದು ಆರ್‌ಬಿಐ ಪ್ರಕಟಿಸಿಲ್ಲ. ಇದೊಂದು ಅರ್ಹತಾ ಪರೀಕ್ಷೆ ಆಗಿರುವುದರಿಂದ ಅಭ್ಯರ್ಥಿಗಳು ನೀಡಲಾಗಿರುವ ವಿಷಯಗಳ ಬಗ್ಗೆ ಬೇಸಿಕ್‌ ಮಾಹಿತಿಯನ್ನು ಇಟ್ಟುಕೊಂಡು ಅಧ್ಯಯನ ನಡೆಸಬಹುದು. ಪರೀಕ್ಷೆಯ ಪ್ರವೇಶ ಪತ್ರದ ಜತೆಯಲ್ಲಿ ಪರೀಕ್ಷೆ ಹೇಗಿರುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವ ಬುಕ್‌ಲೆಟ್‌ ಅನ್ನು ಒದಗಿಸಲಾಗುತ್ತದೆ. ಅಭ್ಯರ್ಥಿಗಳು ಇದನ್ನು ನೋಡಿಕೊಂಡು ಪರೀಕ್ಷೆಗೆ ಅಂತಿಮ ಸಿದ್ಧತೆ ಮಾಡಿಕೊಳ್ಳಬಹುದು.

ಎರಡನೇ ಹಂತದ ಪರೀಕ್ಷೆಯ ಸಿಲಬಸ್‌ ಅನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಬ್ಯಾಂಕ್‌ನ ವೆಬ್‌ನಲ್ಲಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಸಿಲಬಸ್‌ನ ಪ್ರಕಾರವೇ ಪರೀಕ್ಷೆಗೆ ಸಿದ್ಧತೆ ನಡೆಸಬಹುದು. ತಾವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇವೆ, ಹೀಗಾಗಿ ಯಾವ ವಿಷಯದ ಪರೀಕ್ಷೆ ಬರೆಯಬೇಕಾಗುತ್ತದೆ ಎಂಬುದನ್ನು ಸರಿಯಾಗಿ ನೋಡಿಕೊಂಡು ಸಿಲಬಸ್‌ನ ಬಗ್ಗೆ ಮಾಹಿತಿ ಪಡೆಯಬೇಕು. ಅಧಿಸೂಚನೆಯಲ್ಲಿ ಸಿಲಬಸ್‌ನ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಯಾವ ಪುಸ್ತಕಗಳನ್ನು ಓದಬೇಕು, ಪತ್ರಿಕೆಗಳನ್ನು ಗಮನಿಸಬೇಕೆಂಬ ಮಾಹಿತಿಯನ್ನೂ ನೀಡಲಾಗಿದೆ. ಅಭ್ಯರ್ಥಿಗಳು ಇದನ್ನೂ ಗಮನಿಸುವುದು ಒಳ್ಳೆಯದು.

ಇತ್ತ ಗಮನಿಸಿ

* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪ್ರಥಮ ಹಂತದ ಪರೀಕ್ಷೆಯನ್ನು ಆರು ಬಾರಿ ಮಾತ್ರ ಬರೆಯಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಆರು ಬಾರಿ ಈ ಪರೀಕ್ಷೆ ಬರೆದವರು ಅರ್ಜಿ ಸಲ್ಲಿಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

* ಈಗ ಪ್ರಕಟಣೆಗೊಂಡಿರುವ ಆಫೀಸರ್‌ ಗ್ರೇಡ್‌ (ಡಿಆರ್‌) – ಡಿಇಪಿಆರ್‌ನ 22 ಹುದ್ದೆಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಅಧಿಸೂಚನೆಯನ್ನು ಆರ್‌ಬಿಐ ವೆಬ್‌ನಲ್ಲಿ ಪ್ರಕಟಿಸಿದೆ. ವಿದ್ಯಾರ್ಹತೆಯಲ್ಲಿ ಕೆಲ ಬದಲಾವಣೆ ತರಲಾಗಿದ್ದು, ಅಭ್ಯರ್ಥಿಗಳು ಇದನ್ನು ನೋಡಿಕೊಂಡು ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

*ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ. ಇದನ್ನು ಬಿಟ್ಟು ಬೇರೆ ವಿಧಾನದಲ್ಲಿ ಅರ್ಜಿ ಸಲ್ಲಿಸಿದರೆ ಸ್ವೀಕರಿಸಲಾಗುವುದಿಲ್ಲ. ಈ ಬಾರಿಯಿಂದ ಲಿಖಿತ ದೃಢೀಕರಣ ಪತ್ರವನ್ನು ಅಪ್‌ ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ. ದೃಢೀಕರಣದ ಟೆಕ್ಸ್ಟ್‌ ಅನ್ನು ಅಧಿಸೂಚನೆಯಲ್ಲಿ ಒದಗಿಸಲಾಗಿದ್ದು, ಅದನ್ನು ಬಿಳಿ ಹಾಳೆಯಲ್ಲಿ ಕಪ್ಪುಶಾಹಿಯ ಪೆನ್ನಿನಿಂದ ಬರೆದು ಸ್ಕ್ಯಾ‌ನ್‌ ಮಾಡಿ (ಸೈಜ್‌: 20kb-50kb ) ಅಪ್‌ಲೋಡ್‌ ಮಾಡಬೇಕಿದೆ.

Comments are closed.