
ಮುಂಬೈ: ಹಲವಾರು ಮಂದಿ ಫೋಟೋ ಕ್ಲಿಕ್ಕಿಸಿ, ವಿಡಿಯೋ ಮಾಡಿದರೂ ಅದನ್ನು ಲೆಕ್ಕಿಸದೆ ಯುವ ಜೋಡಿಯೊಂದು ಸಾರ್ವಜನಿಕ ಪ್ರದೇಶದಲ್ಲಿ ಅನುಚಿತ ವರ್ತನೆಯಲ್ಲಿ ತೊಡಗಿದ್ದ ಘಟನೆ ವಾಣಿಜ್ಯ ನಗರಿಯಲ್ಲಿ ನಡೆದಿದೆ.
ಮುಂಬೈನ ಮರೀನೆ ಡ್ರೈವ್ ಪ್ರದೇಶದ ನಾರಿಮನ್ ಕೇಂದ್ರದ ಬಳಿಯಿರುವ ರಸ್ತೆ ವಿಭಜಕದ ಮೇಲೆಯೇ ಮನಬಂದಂತೆ ವರ್ತಿಸುತ್ತಿದ್ದ ಯುವ ಜೋಡಿಯನ್ನು ಕಂಡು ಮುಜಗರಕ್ಕೀಡಾದ ಸಾರ್ವಜನಿಕರು ಸ್ಥಳೀಯ ಮರೀನೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಮೊದಲು ಮಹಿಳೆಯನ್ನು ಹಿಡಿದಿದ್ದಾರೆ. ಈ ವೇಳೆ ನೋಡಲು ವಿದೇಶಿ ಪ್ರಜೆಯಂತಿದ್ದ ವ್ಯಕ್ತಿ ಕಾಲಿಗೆ ಬುದ್ಧಿ ಹೇಳಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಪೊಲೀಸರ ಪ್ರಶ್ನೆಗೆ ಉತ್ತರಿಸಿದ ಮಹಿಳೆ ಮೊದ ಮೊದಲು ನಾನು ಗೋವಾದವಳೆಂದು ಹೇಳಿಕೊಂಡಿದ್ದಾಳೆ. ನಂತರ ಗೊಂದಲಮಯವಾದ ಹೇಳಿಕೆಗಳನ್ನು ನೀಡಿದ್ದಾಳೆ.
ಮಹಿಳೆಯು ನೋಡಲು ಮಾನಸಿಕ ಅಸ್ಥಿರತೆಯನ್ನು ಹೊಂದಿದ್ದಾಳೆ. ಅವಳ ವಿಳಾಸ ಮತ್ತು ಸಂಬಂಧಿಕರ ದೂರವಾಣಿ ಸಂಖ್ಯೆಯನ್ನು ತಿಳಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾಳೆ. ಆಕೆಯನ್ನು ಮಹಿಳಾ ರಿಮ್ಯಾಂಡ್ ಹೋಮ್ಗೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮನೋಜ್ ಕುಮಾರ್ ಶರ್ಮಾ ಅವರು ತಿಳಿಸಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ಅನುಚಿತ ವರ್ತನೆ ಬಗ್ಗೆ ಪೊಲೀಸರು ಇದುವರೆಗೂ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಆದರೆ, ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ.
Comments are closed.