ಮುಂಬೈ

2019ರ ಲೋಕಸಭೆ ಚುನಾವಣೆಗೆ ಬಿಜೆಪಿ-ಶಿವಸೇನೆ ಮೈತ್ರಿಗೆ ಒಪ್ಪಿಗೆ!

Pinterest LinkedIn Tumblr


ಮುಂಬಯಿ: 2019ರ ಲೋಕಸಭೆ ಚುನಾವಣೆಗೆ ಜತೆಯಾಗಿ ಸ್ಪರ್ಧಿಸಲು ಬಿಜೆಪಿ ಮತ್ತು ಶಿವಸೇನೆ ತಾತ್ವಿಕವಾಗಿ ಒಪ್ಪಿಕೊಂಡಿವೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ನಡುವೆ ಮಾತೋಶ್ರೀಯಲ್ಲಿ ನಡೆದ ಸಮಾಲೋಚನೆಯಲ್ಲಿ ಈ ಒಪ್ಪಂದಕ್ಕೆ ಬರಲಾಯಿತು. ಹಾಗಿದ್ದರೂ ಮಹಾರಾಷ್ಟ್ರ ವಿಧಾನಸಭೆಗೆ ಸೀಟು ಹಂಚಿಕೆ ಸಂಬಂಧ ಒಮ್ಮತಕ್ಕೆ ಬರಲಾಗಿಲ್ಲ.

ಲೋಕಸಭಾ ಚುನಾವಣೆಗೆ 2014ರ ಮೈತ್ರಿ ಸೂತ್ರವನ್ನೇ ಪಾಲಿಸಲು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ಬಿಜೆಪಿಯ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಹಿಂದಿನ ಲೋಕಸಭಾ ಚುನಾವಣೆಗೆ ಒಟ್ಟು 48 ಸ್ಥಾನಗಳ ಪೈಕಿ 26ರಲ್ಲಿ ಬಿಜೆಪಿ, ಉಳಿದ 22 ಸ್ಥಾನಗಳಲ್ಲಿ ಶಿವಸೇನೆ ಸ್ಪರ್ಧಿಸಿದ್ದವು.

ಹಾಗಿದ್ದರೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಒಮ್ಮತ ಮೂಡಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಲಾಯಿತು. 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 260 ಸ್ಥಾನಗಳಲ್ಲಿ ಸ್ಪರ್ಧಿಸಿ 122ರಲ್ಲಿ ಗೆದ್ದಿತ್ತು. ಶಿವಸೇನೆ 282 ಸೀಟುಗಳಿಗೆ ಸ್ಪರ್ಧಿಸಿ 63ರಲ್ಲಿ ಜಯ ಸಾಧಿಸಿತ್ತು.

ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ 288 ಸ್ಥಾನಗಳಲ್ಲಿ 185 ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಮೈತ್ರಿ ಮುಂದುವರಿಸುವ ಬಗ್ಗೆ ಎರಡೂ ಪಕ್ಷಗಳಲ್ಲಿ ಒಮ್ಮತ ಮೂಡಿದೆ. ಈಗ ಗೆದ್ದಿರುವ ಸ್ಥಾನಗಳನ್ನು ಹೊರತುಪಡಿಸಿ ಉಳಿದ 103 ಸ್ಥಾನಗಳ ಹಂಚಿಕೆ ಬಗ್ಗೆ ಮಾತ್ರವೇ ಎರಡೂ ಪಕ್ಷಗಳು ಒಮ್ಮತಕ್ಕೆ ಬರಬೇಕಿದೆ.

Comments are closed.