
ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಜಿಗಿತವನ್ನು ದಾಖಲಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಸಂಜೆ ಕೊನೇ ತಾಸಿನ ವಹಿವಾಟಿನಲ್ಲಿ ನಾಟಕೀಯ ಮಾರಾಟ ಒತ್ತಡಕ್ಕೆ ಗುರಿಯಾಗಿ 430 ಅಂಕಗಳ ಭಾರೀ ನಷ್ಟ ಅನುಭವಿಸಿ ದಿನದ ವಹಿವಾಟನ್ನು, ಮೂರು ತಿಂಗಳ ಕನಿಷ್ಠ ಮಟ್ಟವಾಗಿ, 33,317 ಅಂಕಗಳ ಮಟ್ಟಕ್ಕೆ ಕುಸಿದು ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 109 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 10,249.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತಕ್ಕೆ ಬ್ಯಾಂಕ್ ಶೇರುಗಳ ಮಾರಾಟ ಒತ್ತಡವೇ ಕಾರಣವಾಯಿತು. 10,600 ಕೋಟಿ ರೂ.ಗಳ ಪಿಎನ್ಬಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಮತ್ತು ಎಕ್ಸಿಸ್ ಬ್ಯಾಂಕ್ ಮುಖ್ಯಸ್ಥರಿಗೆ ಎಸ್ಎಫ್ಐಓ ಸಮನ್ಸ್ ನೀಡಿದೆ ಎನ್ನುವ ವರದಿಯಿಂದ ಬ್ಯಾಂಕ್ ಶೇರುಗಳು ಕುಸಿದು ಬಿದ್ದವು.
ಪರಿಣಾಮವಾಗಿ ಎಸ್ಬಿಐ, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಪಿಎನ್ಬಿ, ಕೋಟಕ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಎಸ್ ಬ್ಯಾಂಕ್ ಶೇರುಗಳು ಶೇ.2.77ರಷ್ಟು ಕುಸಿದವು.
ಕಳೆದ ಡಿಸೆಂಬರ್ 14ರಂದು ಸೆನ್ಸೆಕ್ಸ್ 33,246.70 ಅಂಕಗಳ ಮಟ್ಟಕ್ಕೆ ಜಾರಿತ್ತು. ಅನಂತರದಲ್ಲಿ ಸೆನ್ಸೆಕ್ಸ್ ಕಂಡಿರುವ ದೊಡ್ಡ ಕುಸಿತವೇ ಇಂದಿನದ್ದಾಗಿದೆ. ಹಾಗೆಯೇ ಫೆ.6ರ ಬಳಿಕ ಸೆನ್ಸೆಕ್ಸ್ ಕಂಡಿರುವ 561.22 ಅಂಕಗಳ ಏಕದಿನ ಬೃಹತ್ ಕುಸಿತದ ಬಳಿಕ ಇಂದಿನದು ಅತೀ ದೊಡ್ಡ ಏಕದಿನ ಕುಸಿತವಾಗಿದೆ.
ಸೆನ್ಸೆಕ್ಸ್ ಕಳೆದ ಐದು ದಿನಗಳಲ್ಲಿ 1,129 ಅಂಕಗಳ ನಷ್ಟಕ್ಕೆ ಗುರಿಯಾದಂತಾಗಿದೆ.
-ಉದಯವಾಣಿ
Comments are closed.