ಮುಂಬೈ

ನೀವು ನಕ್ಸಲ್‌ ಸೇರಿ, ನಾವು ಶೂಟ್‌ ಮಾಡ್ತೇವೆ: ಸಚಿವ ಆಹಿರ್‌ ವಿವಾದ

Pinterest LinkedIn Tumblr


ಮುಂಬಯಿ: ಮಹಾರಾಷ್ಟ್ರದಲ್ಲಿ ತಾನು ಭಾಗವಹಿಸಿದ ವೈದ್ಯಕೀಯ ಕಾರ್ಯಕ್ರಮವೊಂದರಲ್ಲಿ ಹಿರಿಯ ವೈದ್ಯರು ಗೈರಾಗಿರುವುದನ್ನು ಕಂಡ ಆಕ್ರೋಶಿತರಾದ ಕೇಂದ್ರ ಸಚಿವ ಹಂಸರಾಜ್‌ ಆಹಿರ್‌ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿ ಮಾಡಿದ್ದಾರೆ.

“ನಿಮಗೆ (ವೈದ್ಯರಿಗೆ) ಪ್ರಜಾಸತ್ತೆಯಲ್ಲಿ ನಂಬಿಕೆ ಇಲ್ಲವೆಂದಾದರೆ ನೀವು ಮಾವೋವಾದಿ ಉಗ್ರ ಸಂಘಟನೆಗೆ ಸೇರಬಹುದು; ಆಗ ನಾವು ನಿಮ್ಮನ್ನು ಶೂಟ್‌ ಮಾಡುತ್ತೇವೆ’ ಎಂದು ಸಚಿವ ಆಹಿರ್‌ ಹೇಳಿರುವುದು ವೈದ್ಯರನ್ನು ತೀವ್ರವಾಗಿ ಕೆರಳಿಸಿದೆ.

ಸಚಿವ ಆಹಿರ್‌ ಅವರು ತಾನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಪೂರ್ವ ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದಲ್ಲಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ದಿನ 24 ತಾಸು ಔಷಧಿ ಸಿಗುವ ಸ್ಟೋರ್‌ ಒಂದನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭದಲ್ಲಿ ಹಿರಿಯ ವೈದ್ಯರ ಗೈರಿನಿಂದ ಕೋಪಗೊಂಡು ಈ ಮಾತುಗಳನ್ನು ಆಡಿದ್ದರು.

“ಈ ಕಾರ್ಯಕ್ರಮಕ್ಕೆ ಮೇಯರ್‌ ಬಂದ್ರು, ಉಪ ಮೇಯರ್‌ ಬಂದ್ರು; ವೈದ್ಯರಿಗೆ ಬರಲು ಏನು ಧಾಡಿ ?’ ಎಂದು ಸಚಿವ ಆಹಿರ್‌ ಖಾರವಾಗಿ ಪ್ರಶ್ನಿಸಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ “ಉತ್ತಮ ಆಡಳಿತೆ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿದ್ದು ಅದರಡಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಸಿವಿಲ್‌ ಸರ್ಜನ್‌ ಉಉದಯ್‌ ನವಾಡೆ ಮತ್ತು ಮೆಡಿಕಲ್‌ ಕಾಲೇಜಿನ ಡೀನ್‌ ಕೂಡ ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು.

”ನಕ್ಸಲರಿಗೆ ಬೇಕಾಗಿರುವುದು ಏನು ? ಅವರಿಗೆ ಪ್ರಜಾಸತ್ತೆ ಬೇಡ; ಹಾಗೆಯೇ ಇವತ್ತು ಇಲ್ಲಿ ಗೈರಾಗಿರುವ ವೈದ್ಯರಿಗೆ ಕೂಡ ಪ್ರಜಾಸತ್ತೆ ಬೇಕಾಗಿಲ್ಲ. ಹಾಗಿರುವಾಗ ಅವರು ನಕ್ಸಲ್‌ಗೆ ಸೇರುವುದೇ ಲೇಸು; ಅಂತಿರುವಾಗ ನೀವಿನ್ನೂ ಏಕೆ ಇಲ್ಲಿದ್ದೀರಿ ? ಹೋಗಿ ನಕ್ಸಲ್‌ ಪಡೆ ಸೇರಿಕೊಳ್ಳಿ; ನಾವು ನಿಮ್ಮ ಮೇಲೆ ಗುಂಡನ್ನು ಎಸೆಯುತ್ತೇವೆ; ಸಚಿವನಾಗಿ ನಾನಿಲ್ಲಿಗೆ ಬಂದಿರುವಾಗ ಹಿರಿಯ ವೈದ್ಯ ರಜೆಯಲ್ಲಿದ್ದಾರೆ. ಇದಕ್ಕೆ ನಾನು ಏನು ಹೇಳಬೇಕು” ಎಂದು ಸಚಿವ ಆಹಿರ್‌ ಮರಾಠಿಯಲ್ಲಿ ಮಾತನಾಡುತ್ತಾ ಗುಡುಗಿದರು.

ಮಹಾರಾಷ್ಟ್ರದ ನಕ್ಸಲ್‌ ಪೀಡಿತ ನಾಲ್ಕು ಜಿಲ್ಲೆಗಳಲ್ಲಿ ಚಂದ್ರಾಪುರವೂ ಒಂದಾಗಿದೆ. ಕೇಂದ್ರ ಸರಕಾರ ಇದನ್ನು ಮಾವೋ ಹಿಂಸಾಗ್ರಸ್ತ ಜಿಲ್ಲೆ ಎಂದು ಗುರುತಿಸಿದೆ.

-ಉದಯವಾಣಿ

Comments are closed.