ಮುಂಬೈ

26/11: ಸ್ಮರಣೀಯ ಪೊಲೀಸ್‌ ಅಧಿಕಾರಿ ತುಕಾರಾಂ ಓಂಬಳೆ

Pinterest LinkedIn Tumblr

ಮುಂಬಯಿ: ಮುಂಬೈ ಮೇಲೆ ದಾಳಿ ಸಂಭವಿಸಿ ಇಂದಿಗೆ 9 ವರ್ಷವಾಗಿದೆ. ಆದರೂ ಇನ್ನೂ ಆ ಕರಾಳ ಘಟನೆಯ ನೆನಪುಗಳು ಮಾಸಿಲ್ಲ. ತಮ್ಮ ಆಪ್ತರನ್ನು ಕಳೆದುಕೊಂಡವರ ದುಃಖವನ್ನು ಯಾರೂ ಭರಿಸಲು ಸಾಧ್ಯವಿಲ್ಲ. ಇದರ ನಡುವೆಯೇ ದೇಶಕ್ಕಾಗಿ ಹುತಾತ್ಮರಾದವರ ಪಟ್ಟಿ ಕೂಡ ದೊಡ್ಡದಿದೆ. ಇದರಲ್ಲಿ ಪ್ರಮುಖರಾದವರು ತುಕಾರಾಂ ಓಂಬಳೆ.

ಪಾಕ್‌ನಿಂದ ಬಂದು ದಾಳಿ ನಡೆಸಿದ ಹತ್ತು ಉಗ್ರರ ಪೈಕಿ ಒಬ್ಬ ಉಗ್ರ ಅಜ್ಮಲ್ ಕಸಬ್‌ ಜೀವಂತ ಸೆರೆಯಾಗಿದ್ದು ತುಕಾರಾಂ ಓಂಬಳೆ ಅವರಿಂದಲೇ. ಈ ಉಗ್ರ ಬಂದೂಕಿನಿಂದ ಗುಂಡಿನ ಸುರಿಮಳೆಗರೆಯುತ್ತಿದ್ದರೂ ಕೆಚ್ಚದೆ, ಧೈರ್ಯ, ಸಾಹಸ ಪ್ರದರ್ಶಿಸಿ, ಪ್ರಾಣ ಹೋಗುತ್ತಿದ್ದರೂ ಲೆಕ್ಕಿಸದೇ ಉಗ್ರನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ತುಕಾರಾಂ ಓಂಬಳೆ ಇಂದಿಗೂ ಸ್ಮರಣೀಯರು.

ತುಕಾರಾಂ ಓಂಬಳೆ ಅವರ 26/11 ಘಟನೆಯಲ್ಲಿ ಪಾತ್ರದ ವಿವರ ಹೀಗಿದೆ….

ಪೊಲೀಸ್ ಅಧಿಕಾರಿಗಳೂ ಸೇರಿದಂತೆ 166 ಮಂದಿಯ ಸಾವಿಗೆ ಕಾರಣನಾದ 10 ಮಂದಿ ಉಗ್ರರಲ್ಲಿ ಬದುಕುಳಿದ ಪಾಕಿಸ್ತಾನಿ ಉಗ್ರಗಾಮಿ ಅಜ್ಮಲ್ ಕಸಬ್‌ಗೆ ಗಲ್ಲು ಶಿಕ್ಷೆಯಾಗಿದೆ. ಆದರೆ ಕಸಬ್ ಸೆರೆ ಸಿಕ್ಕಿ ಪಾಕಿಸ್ತಾನದ ವಿದ್ರೋಹಿ ತಂತ್ರಗಳು ಬಯಲಿಗೆ ಬರುವಲ್ಲಿ ಸಹಕರಿಸಿದ ಒಂದು ಆತ್ಮವು ಚಿರ ಶಾಂತಿ ಪಡೆದಿದೆ. ಅದು ಬೇರೆ ಯಾರದೂ ಅಲ್ಲ, ಮುಂಬಯಿ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ತುಕಾರಾಂ ಓಂಬಳೆ ಅವರದು.

ಹೌದು, 26-11-2008ರ ಆ ನತದೃಷ್ಟ ರಾತ್ರಿಯಲ್ಲಿ ಪಾಕಿಸ್ತಾನದಿಂದ ನುಸುಳಿದ್ದ ಉಗ್ರಗಾಮಿಗಳಲ್ಲಿ ಕಸಬ್ ತನ್ನ ಮತ್ತೊಬ್ಬ ಸಹಚರ ಇಸ್ಮಾಯಿಲ್ ಜೊತೆ ಸೇರಿಕೊಂಡು ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಮಾರಣಹೋಮ ನಡೆಸಿದ್ದರು. ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ 52 ಮಂದಿ ಮುಗ್ಧ ಜನರನ್ನು ಗುಂಡಿನ ಸುರಿಮಳೆಗೈದು ಕೊಂದು ಹಾಕಿ, ಪೊಲೀಸ್ ವಾಹನವನ್ನೇ ಹೈಜಾಕ್ ಮಾಡಿ ಪರಾರಿಯಾಗುತ್ತಿದ್ದರು. ಈ ವಾಹನಕ್ಕೆ ಅಡ್ಡಲಾಗಿ ಬಂದ ಓಂಬಳೆ, ಸಾಹಸಮಯವಾಗಿ ತನ್ನ ಕೈಯಲ್ಲಿದ್ದ ರೈಫಲ್ ಅಡ್ಡ ಹಿಡಿದು, ಆ ಕಾರನ್ನು ತಡೆದಿದ್ದರು. ಕಸಬ್ ಮತ್ತು ಸಹಚರ ತನ್ನ ಮೇಲೆ ಗುಂಡಿನ ಮಳೆಗೈಯುತ್ತಿದ್ದರೂ ಲೆಕ್ಕಿಸದೆ ಕಸಬ್ ದಾಳಿಗೆ ಎದೆಯೊಡ್ಡಿದ ಅವರು, ತನ್ನ ಸಹೋದ್ಯೋಗಿಗಳು ಕಸಬ್‌ನನ್ನು ಸೆರೆಹಿಡಿಯುವಂತೆ ನೋಡಿಕೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದ ಅವರು ಕೊನೆಯುಸಿರೆಳೆದಿದ್ದರು.

ಗಿರ್ಗಾಂವ್ ಚೌಪಾಟಿಯಲ್ಲಿ ಕಸಬ್ ಮತ್ತು ಇಸ್ಮಾಯಿಲ್ ಪರಾರಿಯಾಗುತ್ತಿದ್ದ ಪೊಲೀಸ್ ವಾಹನದ ಟೈರ್ ಪಂಕ್ಚರ್ ಆಗಿದ್ದುದರಿಂದ ಇದು ಸಾಧ್ಯವಾಗಿತ್ತು. ಬಳಿಕ ಓಂಬಳೆಗೆ ಮರಣೋತ್ತರವಾಗಿ ಅಶೋಕ ಚಕ್ರ ಶೌರ್ಯ ಪ್ರಶಸ್ತಿಯನ್ನು ಪ್ರದಾನಿಸಲಾಗಿತ್ತು. ಈ ಚಕಮಕಿಯ ವೇಳೆ ಮತ್ತೊಬ್ಬ ಉಗ್ರಗಾಮಿ ಇಸ್ಮಾಯಿಲ್ ಸಾವನ್ನಪ್ಪಿದ್ದ.

ಸುಪ್ರೀಂ ಕೋರ್ಟು ಕಸಬ್‌ನ ಮರಣದಂಡನೆಯನ್ನು ಎತ್ತಿ ಹಿಡಿದಾಗ ಓಂಬಳೆಯ ಪುತ್ರಿ ವೈಶಾಲಿ ಓಂಬಳೆ ಹೇಳಿದ್ದಳು “ನನ್ನ ಅಪ್ಪನ ಬಲಿದಾನ ಫಲ ಕೊಟ್ಟಿದೆ”!

ತುಕಾರಾಮ್‌ ಓಂಬಳೆ ಹೆಸರು ಎಂದೆಂದಿಗೂ ಅಜರಾಮರ.

Comments are closed.