
ಮುಂಬೈ: ಹೆತ್ತ ತಂದೆಯಿಂದ ನದಿಗೆ ಎಸೆಯಲ್ಪಿಟ್ಟಿದ್ದ 6 ವರ್ಷದ ಬಾಲಕಿಯೊಬ್ಬಳನ್ನ ಸುಮಾರು 11 ಗಂಟೆ ನಂತರ ಸುರಕ್ಷಿತವಾಗಿ ರಕ್ಷಣೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
6 ವರ್ಷದ ಪುಟ್ಟ ಬಾಲಕಿ ಎಕ್ತಾ ತುಳಸಿರಾಮ್ ಸಿಯಾನಿ ಪ್ರಾಣಾಪಾಯದಿಂದ ಪಾರಾಗಿದ್ದು, ತಂದೆ ಶೂ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಆತನ ಗೆಳೆಯನೊಂದಿಗೆ ಸೇರಿಕೊಂಡು ಉಲ್ಲಾಸ್ ನದಿಯಲ್ಲಿ ಎಸೆದಿದ್ದನು. ಆದ್ರೆ ಬದ್ಲಾಪುರ್‍ನ ವಲ್ವಿಲಿ ಸೇತುವೆಯ ಬದಿ ಗಿಡಗಳನ್ನ ಹಿಡಿದು ಬಾಲಕಿ ಪ್ರಾಣ ಉಳಿಸಿಕೊಂಡಿದ್ದು, ಆಕೆಯನ್ನು ಸುಮಾರು 11 ಗಂಟೆಯ ಬಳಿಕ ರಕ್ಷಣೆ ಮಾಡಲಾಗಿದೆ.
ಜೂನ್ 29ರಂದು ಬುಧವಾರ ಈ ಘಟನೆ ನಡೆದಿದ್ದು, 11 ಗಂಟೆಯ ಬಳಿಕ ಅಂದ್ರೆ ಗುರುವಾರ ಬೆಳಗ್ಗೆ 6.45ರ ವೇಳೆಗೆ ಆಕೆಯನ್ನ ರಕ್ಷಣೆ ಮಾಡಲಾಗಿದೆ. ನದಿಯ ತೀರದಲ್ಲಿರುವ ಮೋಹನ್ ಗ್ರೂಪ್ ಆಫ್ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಒಬ್ಬರು ಸೇತುವೆಯ ಬಳಿ ಬರಬೇಕಾದ್ರೆ ಬಾಲಕಿಯ ಕಿರುಚಾಟ ನೋಡಿ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಕೇವಲ 20 ನಿಮಿಷದಲ್ಲಿ ಆಕೆಯನ್ನ ರಕ್ಷಿಸಿದ್ದಾರೆ.
ಬಾಲಕಿ ಹೇಳಿದ್ದೇನು?: ಶೂ ಕೊಡಿಸುವುದಾಗಿ ಕರೆದುಕೊಂಡು ತಂದೆ ನನ್ನನ್ನು ಬುಧವಾರ ರಾತ್ರಿ 8 ಗಂಟೆ ವೇಳೆಗೆ ಶೂ ಕೊಡಿಸಿ, ಆ ಶೂನಿಂದ ನನ್ನ ಕಾಲನ್ನ ಕಟ್ಟಿ ಸೇತುವೆಯಿಂದ ಎಸೆದರು, ಈ ವೇಳೆ ಅವರ ಸ್ನೇಹಿತ ಕೂಡ ಇದ್ದರು. ಈ ಸೇತುವೆ ಬಳಿ ನದಿಯ ಆಳ 40 ಅಡಿ ಎಂದು ಅಂದಾಜಿಸಲಾಗಿದ್ದು, ಬಾಲಕಿ ಬದುಕಿರುವುದು ಪವಾಡವೆನ್ನಲಾಗಿದೆ.
ಇತ್ತ ಬಾಲಕಿಯ ಬಗ್ಗೆ ತಾಯಿ ಬುಧವಾರವೇ ನಾಪತ್ತೆ ದೂರು ನೀಡಿದ್ದರು ಎನ್ನಲಾಗಿದ್ದು, ಬಾಲಕಿ ಕೊಲೆಗೆ ಯತ್ನಿಸಿದ ತಂದೆ ಹಾಗೂ ಆತನ ಸ್ನೇಹಿತ ಪರಾರಿಯಾಗಿದ್ದಾರೆ.
Comments are closed.