ಮುಂಬೈ

ದಾವುದ್ ಇಬ್ರಾಹಿಂ ಕರೆ ಪ್ರಕರಣದಲ್ಲಿ ಏಕನಾಥ್ ಖಡ್ಸೆಗೆ ಕ್ಲೀನ್ ಚಿಟ್?

Pinterest LinkedIn Tumblr

Eknath-Khadseಮುಂಬೈ: ಹಲವು ಅಕ್ರಮಗಳ ಆರೋಪ ಎದುರಿಸಿ ಕಳೆದ ವಾರ ಮಹಾರಾಷ್ಟ್ರ ಕಂದಾಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಮುಖಂಡ ಏಕನಾಥ್ ಖಡ್ಸೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿವಾದದಲ್ಲಿ ಕ್ಲೀನ್ ಚಿಟ್ ಸಿಗುವ ಸಾಧ್ಯತೆ ಇದೆ.
ಏಕನಾಥ್ ಖಡ್ಸೆಗೆ ಕರಾಚಿ ಮೂಲದ ಲ್ಯಾಂಡ್ ಲೈನ್( ದಾವೂದ್ ಇಬ್ರಾಹಿಂ ನ ಪತ್ನಿಯಿಂದ) ಬರಲಾಗುತ್ತಿದ್ದ ಕರೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯಗೊಂಡಿದ್ದು ಒಂದು ವಾರದಲ್ಲಿ ಈ ಬಗ್ಗೆ ವರದಿ ಬರಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಏಕನಾಥ್ ಖಡ್ಸೆಗೆ ಬರುತ್ತಿದ್ದ ಕರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಮಹತ್ವದ ವಿಚಾರಗಳೇನು ಬಹಿರಂಗವಾಗಿಲ್ಲ ಎಂದು ಹೇಳಲಾಗಿದ್ದು, ದಾವೂದ್ ಇಬ್ರಾಹಿಂ ವಿಚಾರದಲ್ಲಿ ಏಕನಾಥ್ ಖಡ್ಸೆ ಕ್ಲೀನ್ ಚಿಟ್ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಏಕನಾಥ್ ಖಡ್ಸೆ ವಿರುದ್ಧ ಆಮ್ ಆದ್ಮಿ ಪಕ್ಷ ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ ಎಂದು ಈ ಹಿಂದೆಯೂ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ. ಇನ್ನು ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿಗಳು ಆಮ್ ಆದ್ಮಿ ಪಕ್ಷದ ಆರೋಪಕ್ಕೆ ಆಧಾರವಾಗಿದ್ದ ಪಾಕಿಸ್ತಾನಿ ಟೆಲಿಕಾಂ ನ ಮಾಹಿತಿಗಳನ್ನು ಪಡೆದಿರುವ ಹ್ಯಾಕರ್ ಮನೀಶ್ ಭಂಗಲೆ ಅವರನ್ನೂ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಮನೀಶ್ ಭಂಗಲೆ ಈ ವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಏಕನಾಥ್ ಖಡ್ಸೆಗೆ ದಾವೂದ್ ಇಬ್ರಾಹಿಂ ಕರೆ ಮಾಡುತ್ತಿದ್ದ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕೆಂದು ಮನೀಶ್ ಭಂಗಲೆ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದು ಜೂ.14 ಕ್ಕೆ ವಿಚಾರಣೆ ನಡೆಯಲಿದೆ.
ದಾವೂದ್ ಇಬ್ರಾಹಿಂ ವಿಚಾರವಾಗಿ ಆರೋಪ ನಿರಾಕರಿಸಿದ್ದ ಖಡ್ಸೆ, ದಾವೂದ್ ಇಬ್ರಾಹಿಂ ನಿಂದ ಕರೆ ಬರುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿರುವ ದೂರವಾಣಿ ಸಂಖ್ಯೆ ಕಳೆದು ಒಂದು ವರ್ಷದಿಂದ ಚಾಲ್ತಿಯಲ್ಲಿಲ್ಲ ಎಂದು ಹೇಳಿದ್ದರು.

Comments are closed.