ಮುಂಬೈ

ನಾನು ಶುಭಂ ಅಲ್ಲ…ಶೇಖ್; ಉಳಿದುಕೊಳ್ಳಲು ರೂಂ ಬೇಕಿತ್ತು, ಅದಕ್ಕಾಗಿ ಹಿಂದೂ ಹೆಸರು ಹೇಳಿದೆ! ಇದು ಯುಪಿಎಸ್‌ಸಿಯಲ್ಲಿ 361ನೇ ರ್ಯಾಂಕ್ ಗಳಿಸಿದ ಯುವಕನ ಸಾಧನೆ ಹಿಂದಿರುವ ಅನುಭವ ಕತೆ

Pinterest LinkedIn Tumblr

ansar-shaikh

ಪುಣೆ: ಪುಣೆಯ ಜಲ್ನಾದ ಶೆಡ್‌ಗಾಂವ್ ಗ್ರಾಮದಲ್ಲಿನ ಆಟೋ ಚಾಲಕನ ಮಗ 21ರ ಹರೆಯದ ಅನ್ಸಾರ್ ಅಹ್ಮದ್ ಶೇಖ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 361 ನೇ ರ್ಯಾಂಕ್ ಗಳಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಸಾಧನೆ ಮಾಡಿರುವ ಶೇಖ್ ಪುಣೆಯ ಫೆರ್‌ಗೂಸನ್ ಕಾಲೇಜಿನಲ್ಲಿ ಕಲೆ ಮತ್ತು ಪೊಲಿಟಿಕಲ್ ಸಯನ್ಸ್ ಪದವಿ ಪಡೆದಿದ್ದಾರೆ. ತಾನು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಲೆಂದೇ ಕಲಾ ವಿಷಯ ಆಯ್ಕೆ ಮಾಡಿಕೊಂಡಿದ್ದೆ ಎಂದು ಹೇಳುವ ಶೇಖ್, ಪುಣೆ ನಗರಕ್ಕೆ ಬಂದಾಗ ಅವರಿಗಾದ ಅನುಭವವನ್ನು ಮಾಧ್ಯಮದವರ ಮುಂದೆ ಹೇಳಿದ್ದಾರೆ.

ನಾನು ಈ ನಗರಕ್ಕೆ ಬಂದು ಉಳಿದುಕೊಳ್ಳಲು ಪಿಜಿ (ಪೇಯಿಂಗ್ ಗೆಸ್ಟ್) ಹುಡುಕುತ್ತಿದ್ದ ವೇಳೆ ನನಗೆ ಯಾರೂ ರೂಂ ನೀಡಲಿಲ್ಲ. ಇಲ್ಲಿ ಧರ್ಮಗಳ ನಡುವಿನ ತಾರತಮ್ಯ ಅನುಭವವಾಗಿದ್ದು ಆಗಲೇ. ನನ್ನೊಂದಿಗಿದ್ದ ಹಿಂದೂ ಧರ್ಮದ ಗೆಳೆಯರಿಗೆಲ್ಲರಿಗೂ ಪಿಜಿ ಸಿಕ್ಕಿತು, ಆದರೆ ನನ್ನ ಹೆಸರು ಕೇಳಿದ ಕೂಡಲೇ ನನಗೆ ಪಿಜಿ ಬಾಗಿಲು ಬಂದ್ ಆಗುತ್ತಿತ್ತು. ನಾನು ಮುಸ್ಲಿಂ ಎಂಬ ಕಾರಣಕ್ಕೆ ನನಗ್ಯಾರೂ ರೂಂ ನೀಡಲಿಲ್ಲ. ಈ ಕಾರಣದಿಂದಲೇ ನಾನು ನನ್ನ ಹೆಸರನ್ನು ಶುಭಂ ಎಂದು ಬದಲಾಯಿಸಿದೆ. ನಿಜವಾಗಿಯೂ ಅದು ನನ್ನ ಗೆಳೆಯನ ಹೆಸರು. ಈಗ ನಾನು ನನ್ನ ಹೆಸರನ್ನು ಯಾರ ಮುಂದೆಯೂ ಬಚ್ಚಿಡುವ ಅಗತ್ಯವಿಲ್ಲ. ನಾನು ಶೇಖ್, ಶುಭಂ ಅಲ್ಲ.

ನನ್ನ ಅಪ್ಪನಿಗೆ ಮೂರು ಪತ್ನಿಯರು. ನನ್ನಮ್ಮ ಎರಡನೇ ಪತ್ನಿ. ನನ್ನ ಕುಟುಂಬದಲ್ಲಿ ವಿದ್ಯಾಭ್ಯಾಸ ಅಷ್ಟೊಂದು ಅಗತ್ಯವಾಗಿರಲಿಲ್ಲ. ನನ್ನ ತಮ್ಮ ಸ್ಕೂಲ್ ಡ್ರಾಪ್ ಔಟ್ ಆಗಿದ್ದು, ನನ್ನ ಸಹೋದರಿಯರನ್ನು ಎಳೆ ವಯಸ್ಸಿನಲ್ಲೇ ಮದುವೆ ಮಾಡಿಕೊಡಲಾಗಿತ್ತು. ಈಗ ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ನಂತರ ಮನೆಗೆ ಫೋನ್ ಮಾಡಿ ವಿಷಯ ಹೇಳಿದಾಗ ಅವರೆಲ್ಲರಿಗೂ ಶಾಕ್ ಆಗಿತ್ತು ಎಂದು ಹೇಳುವ ಶೇಖ್ ಈಗ ಗೆಳೆಯರೊಂದಿಗೆ ಸಂಭ್ರಮಾಚರಣೆ ಮಾಡಿ ಮನೆಯಲ್ಲಿ ಅದ್ದೂರಿ ಆಚರಣೆ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ.

ತಮ್ಮ ಯಶಸ್ಸಿನ ಬಗ್ಗೆ ಈ ಯುವಕನಲ್ಲಿ ಕೇಳಿದಾಗ, ಯಶಸ್ಸಿಗೆ ಶಾರ್ಟ್ ಕಟ್ ಅನ್ನುವುದು ಇಲ್ಲವೇ ಇಲ್ಲ. ಕಳೆದ ಮೂರು ವರ್ಷ ನಾನು ದಿನದ 10-12 ಗಂಟೆಗಳ ಕಾಲ ಪರೀಕ್ಷಾ ಸಿದ್ಧತೆಯಲ್ಲೇ ತೊಡಗಿದ್ದೆ. ವಿದ್ಯಾರ್ಥಿಗಳು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು. ನಾನು ಯಾಕೆ ಓದಬೇಕು? ಯಾಕೆ ಸಾಧನೆ ಮಾಡಬೇಕು? ಎಂದು ಸ್ವಯಂ ಪ್ರಶ್ನಿಸಿಕೊಂಡು ಅದಕ್ಕೆ ಉತ್ತರ ಸಿಕ್ಕಿದರೆ ಅವರ ದಾರಿ ಸುಗಮವಾಗುತ್ತದೆ ಎಂದು ಶೇಖ್ ತಮ್ಮ ಸಕ್ಸೆಸ್ ಮಂತ್ರವನ್ನು ಹೇಳಿದ್ದಾರೆ.

Write A Comment