ಮುಂಬೈ

ಮುಂಬೈನಲ್ಲಿ ತಲೆ ಎತ್ತಲಿದೆ ಜಗತ್ತಿನ ಅತೀ ಎತ್ತರದ ಕಟ್ಟಡ; ದುಬೈನ ಬುರ್ಜ್ ಖಲೀಫಾ ದಾಖಲೆ ಮುರಿಯಲಿದೆ ಭಾರತ

Pinterest LinkedIn Tumblr

mumbai-tallest-building

ಮುಂಬೈ: ಭಾರತದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿಗಳಿಸಿರುವ ಮುಂಬೈ ಮತ್ತೊಂದು ದಾಖಲೆ ನಿರ್ಮಿಸಿಲು ಸಜ್ಜಾಗುತ್ತಿದ್ದು, ವಿಶ್ವದ ಅತೀ ಎತ್ತರದ ಗಗನಚುಂಬಿ ಕಟ್ಟಡ ಶೀಘ್ರದಲ್ಲಿಯೇ ಮುಂಬೈನಲ್ಲಿ ತಲೆ ಎತ್ತಲಿದೆ.

ಪ್ರಸ್ತುತ ವಿಶ್ವ ಅತೀ ಎತ್ತರದ ಕಟ್ಟಡ ಎಂದು ಖ್ಯಾತಿಗಳಿಸಿರುವ ದುಬೈನ ಬುರ್ಜ್ ಖಲೀಫಾಗಿಂತಲೂ ಎತ್ತರವಾದ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಮುಂಬೈ ಬಂದರು ಟ್ರಸ್ಟ್‌ಗೆ ಸೇರಿದ ಸುಮಾರು 1,800 ಎಕರೆ ಜಾಗದಲ್ಲಿ ಈ ಬೃಹತ್ ಗಗನಚುಂಬಿ ಕಟ್ಟಡ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಸ್ತುತ ಈ ಯೋಜನೆ ಪ್ರಾಥಮಿಕ ಹಂತದಲ್ಲಿದೆ. ರಸ್ತೆ ಸಾರಿಗೆ ಮತ್ತು ಬಂದರು ಅಭಿವೃದ್ಧಿ ಸಚಿವಾಲಯ ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

2014ರಲ್ಲೇ ನಿತಿನ್ ಗಡ್ಕರಿ ಕೆಲ ಯೋಜನೆಗಳನ್ನು ಘೋಷಿಸಿದ್ದರು. ಕ್ರೂಜ್ ಟರ್ಮಿನಲ್, ವಾಟರ್ ಪ್ರಾಜೆಕ್ಟ್, 500 ಕೋಣೆಗಳಿರುವ ತೇಲುವ ಹೋಟೆಲ್ ಮತ್ತು ಲಂಡನ್ ಐ ನಂತಹ ಫೆರಿ ವೀಲ್ ನಿರ್ಮಾಣ ಮಾಡುವ ಬಗ್ಗೆ ಘೋಷಿಸಿದ್ದರು. ಅವುಗಳಲ್ಲಿ ಅತಿ ಎತ್ತರದ ಕಟ್ಟಡ ಕೂಡಾ ಒಂದಾಗಿತ್ತು. ಇದೀಗ ಈ ಕಟ್ಟಡ ಕಾಮಗಾರಿ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ. ಪ್ರಸ್ತುತ ಮುಂಬೈನಲ್ಲಿರುವ 256 ಮೀಟರ್ ಎತ್ತರದ ದಿ ಇಂಪೀರಿಯಲ್ ಕಟ್ಟಡವೇ ಎತ್ತರದ ಕಟ್ಟಡವಾಗಿದ್ದು, ಭವಿಷ್ಯದಲ್ಲಿ ಇದರ ನಾಲ್ಕು ಪಟ್ಟು ದೊಡ್ಡದಾದ ಮತ್ತು ಎತ್ತರವಾದ ಕಟ್ಟಡ ಮುಂಬೈನಲ್ಲಿ ತಲೆ ಎತ್ತಲಿದೆ. 829.8 ಮೀಟರ್ ಎತ್ತರ ವಿರುವ ಬುರ್ಜ್ ಖಲೀಫಾ ಕಟ್ಟಡವೇ ಪ್ರಸ್ತುತ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿದೆ.

ಬುರ್ಜ್ ಖಲೀಫಾಗಿಂತ ಕಡಿಮೆ ವೆಚ್ಚದಲ್ಲಿ ಕಾಮಗಾರಿ
ಇನ್ನು ಸರ್ಕಾರದ ಈ ಉದ್ದೇಶಿತ ಯೋಜನೆಗೆ ಬುರ್ಜ್ ಖಲೀಫಾಗೆ ಖರ್ಚಾದ ಹಣಕ್ಕಿಂತಲೂ ಕಡಿಮೆ ಹಣ ವ್ಯಯಿಸಲಾಗುತ್ತಿದೆ. ಎಮ್ಮಾರ್ ಪ್ರಾಪರ್ಟೀಸ್ ಸಂಸ್ಥೆ ನಿರ್ಮಿಸಿದ್ದ ಬುರ್ಜ್ ಖಲೀಫಾಗೆ 1.33 ಲಕ್ಷ ಕೋಟಿ ರು. ವೆಚ್ಚವಾಗಿತ್ತು. ಆದರೆ ಮುಂಬೈನಲ್ಲಿ ತಲೆ ಎತ್ತಲಿರುವ ಅತೀ ಎತ್ತರದ ಕಟ್ಟಡವನ್ನು ಇದಕ್ಕಿಂತಲೂ ಕಡಿಮೆ ಅಂದರೆ 75 ಸಾವಿರ ಕೋಟಿ ರು.ಗಳಲ್ಲಿ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. 2004ರಲ್ಲಿ ಆರಂಭವಾಗಿದ್ದ ಬುರ್ಜ್ ಖಲೀಫಾ ಕಟ್ಟಡ ಕಾಮಗಾರಿ 2009ರಲ್ಲಿ ಪೂರ್ಣಗೊಂಡಿತ್ತು.

ಮುಂಬೈ ಉದ್ದೇಶಿತ ಕಟ್ಟಡದಲ್ಲಿ ಏನಿರಲಿದೆ?
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಈ ಅತೀ ಎತ್ತರದ ಕಟ್ಟಡದಲ್ಲಿ ಒಟ್ಟು 130 ಅಂತಸ್ತುಗಳಿರಲಿದ್ದು, ಈ ಕಟ್ಟಡದಲ್ಲಿ ಕಚೇರಿಗಳು, ವಸತಿ, ಹೋಟೆಲ್, ಕನ್ವೆನ್ಷನ್ ಸೆಂಟರ್, ಕಾರ್ ಪಾರ್ಕಿಂಗ್ ಸೇರಿ ಹಲವು ಸೌಲಭ್ಯ ಇರಲಿವೆ. ವಿಸ್ತಾರವಾದ ಪಾರ್ಕ್ ಮತ್ತು ರಿಸೆಪ್ಷನ್ ಕೂಡಾ ಇರಲಿದ್ದು, 1800 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಈ ಯೋಜನೆಗೆ 75 ಸಾವಿರ ಕೋಟಿ ರು. ವೆಚ್ಚ ತಗುಲುವ ಸಾಧ್ಯತೆ ಇದ್ದು, ಪ್ರಸ್ತುತ ಈ ಪ್ರದೇಶದಲ್ಲಿ ಅಕ್ರಮವಾಗಿ ವಾಸವಾಗಿರುವ ವ್ಯಕ್ತಿಗಳಿಗೆ ಬೇರೆಡೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.

Write A Comment