ಮುಂಬೈ

18 ಗಂಟೆ ಪ್ರಯಾಣದ ನಂತರ ಲಾತೂರ್‌ ತಲುಪಿದ ‘ಜಲ ರೈಲು’

Pinterest LinkedIn Tumblr

water

ಮುಂಬೈ: ಹನಿ ನೀರಿಲ್ಲದೆ ಒಣಗಿ ಹೋಗಿರುವ ಮರಾಠವಾಡ ಪ್ರದೇಶದ ಲಾತೂರಿಗೆ 5 ಲಕ್ಷ ಲೀಟರ್ ನೀರು ಹೊತ್ತ ವಿಶೇಷ ರೈಲು 18 ಗಂಟೆಗಳ ನಂತರ ತನ್ನ ಗಮ್ಯ ಸ್ಥಾನವನ್ನು ತಲುಪಿದೆ. ಲಾತೂರಿನಲ್ಲಿ ಹಿಂದೆಂದೂ ಕಾಣದಂತಹ ಬರ ಮತ್ತು ಜಲಕ್ಷಾಮ ತಲೆದೋರಿದೆ.

10 ನೀರಿನ ಟ್ಯಾಂಕರ್‌ಗಳನ್ನು ಎಳೆಯುತ್ತಾ `ನೀರಿನ ರೈಲು’ ಪಶ್ಚಿಮ ಮಹಾರಾಷ್ಟ್ರದ ಮೀರಜ್‌ನಿಂದ ನಿನ್ನೆ ಬೆಳಿಗ್ಗೆ 11 ಗಂಟೆಗೆ ಹೊರಟಿದ್ದು, ಇಂದು ಮುಂಜಾನೆಗೆ 5 ಗಂಟೆಗೆ ಲಾತೂರನ್ನು ತಲುಪಿತು. 350 ಕಿ.ಮೀ. ಕ್ರಮಿಸಲು ರೈಲಿಗೆ 18 ಗಂಟೆಗಳ ಕಾಲ ಬೇಕಾಯಿತು.

ಪ್ರತಿ ಟ್ಯಾಂಕರ್‌ಗೆ 50,000 ಲೀಟರ್

`ಸಾಂಗ್ಲಿ ಜಿಲ್ಲೆಯಲ್ಲಿರುವ ಮೀರಜ್ ರೈಲು ನಿಲ್ದಾಣದಲ್ಲಿ ಪ್ರತಿ ಟ್ಯಾಂಕರ್‌ಗೆ 50,000 ಲೀಟರ್ ನೀರನ್ನು ತುಂಬಿಸಲಾಯಿತು’ ಎಂದು ಕೇಂದ್ರ ರೈಲ್ವೆಯ ವಕ್ತಾರ ನರೇಂದ್ರ ಪಾಟೀಲ್ ಹೇಳಿದ್ದಾರೆ.

ಲಾತೂರು ರೈಲು ನಿಲ್ದಾಣಕ್ಕೆ ಸಮೀಪದಲ್ಲಿರುವ ಬೃಹತ್ ಬಾವಿಯೊಂದರಲ್ಲಿ ರೈಲಿನಲ್ಲಿ ತಂದ ನೀರನ್ನು ಸಂಗ್ರಹಿಸಿ ನಂತರ ಲಾತೂರ್ ಪಟ್ಟಣಕ್ಕೆ ಒಯ್ದು ಪೂರೈಸಲಾಗುವುದು.

ಏ. 15ಕ್ಕೆ ಇನ್ನೊಂದು ರೈಲು

50 ಟ್ಯಾಂಕರ್‌ಗಳುಳ್ಳ ಎರಡನೇ `ನೀರು ರೈಲು’ ಏಪ್ರಿಲ್ 15ರೊಳಗೆ ಸಿದ್ಧವಾಗಲಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದು, ಇದರ ಪ್ರತಿ ಟ್ಯಾಂಕರಿನಲ್ಲಿ 54,000 ಲೀಟರ್ ಸಂಗ್ರಹಿಸಬಹುದಾಗಿದೆ.

ಕೇಜ್ರಿವಾಲ್‌ರಿಂದ ಮೋದಿ ಶ್ಲಾಘನೆ

ಮರಾಠವಾಡ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಧಾನಮಂತ್ರಿ ನರೇಂದ್ರಮೋದಿ ಕೈಗೊಂಡಿರುವ ಕ್ರಮಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದಾರೆ.

ಲಾತೂರಿಗೆ `ನೀರು ರೈಲು’ ಕಳಿಸುವ ಬಗ್ಗೆ ದೆಹಲಿ ಸರ್ಕಾರವೂ ಪರಿಶೀಲಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದಿಲ್ಲಿಯಿಂದ ನೀರು

ಈ ಬಗ್ಗೆ ಕೇಜ್ರಿವಾಲ್ ಈಗಾಗಲೇ ಜಲ ಸಚಿವ ಕಪಿಲ್ ಮಿಶ್ರ ಅವರೊಂದಿಗೆ ಚರ್ಚಿಸಿದ್ದು, ದೆಹಲಿ ಜಲಮಂಡಲಿ ಲಾತೂರಿಗೆ ನೀರು ಕೊಡಲು ಸಿದ್ಧ ಎಂದೂ ಅವರು ಹೇಳಿದ್ದಾರೆ.

ಲಾತೂರಿಗೆ ನೀರು ಕಳುಹಿಸಲು ರೈಲೊಂದನ್ನು ಒದಗಿಸುವಂತೆ ದೆಹಲಿ ಸರ್ಕಾರ ರೈಲ್ವೆ ಇಲಾಖೆಯನ್ನು ಕೋರಲಿದೆ.

ನೀರು ಉಳಿಸಲು ಮನವಿ

ಕೇಜ್ರಿವಾಲ್ ಅವರು ಲಾತೂರಿನ ಜನರಿಗಾಗಿ ನೀರನ್ನು ಉಳಿಸುವಂತೆ ದೆಹಲಿಯ ಜನತೆಗೆ ಮನವಿ ಮಾ‌ಡಿ ಟ್ವೀಟ್ ಮಾಡಿದ್ದಾರೆ.

Write A Comment