ಮುಂಬೈ

ಹೇಮಾ ಪ್ರಕರಣ: ಪತಿ ಚಿಂತನ್, ಇತರರ ವಿರುದ್ಧ ಚಾರ್ಜ್‌ಶೀಟ್‌

Pinterest LinkedIn Tumblr

Hema-Upadhyay

ಮುಂಬೈ: ಅನುಸ್ಥಾಪನ ಕಲಾವಿದೆ (ಇನ್‌ಸ್ಟಾಲೇಷನ್‌) ಹೇಮಾ ಉಪಾಧ್ಯಾಯ ಮತ್ತು ಅವರ ವಕೀಲ ಹರೀಶ್‌ ಭಂಬಾನಿ ನಿಗೂಢ ಕೊಲೆ ಪ್ರಕರಣ ಸಂಬಂಧ ಚಾರ್ಜ್‌ಶೀಟ್ ದಾಖಲಿಸಿರುವ ಮುಂಬೈ ಪೊಲೀಸರು, ಹೇಮಾ ಪತಿ ಚಿಂತನ್ ಉಪಾಧ್ಯಾಯ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ.

ಬೊರಿವಿಲಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೀಟ್‌ ಕೋರ್ಟ್‌ನಲ್ಲಿ ಸಲ್ಲಿಸಿರುವ ಎರಡು ಸಾವಿರ ಪುಟಗಳ ಬೃಹತ್ ಗಾತ್ರದ ದೋಷಾರೋಪ ಪಟ್ಟಿಯಲ್ಲಿ ಚಿಂತನ್ ಹಾಗೂ ಇತರ ನಾಲ್ವರಾದ ವಿದ್ಯಾಧರ್ ರಾಜಭರ್, ಪ್ರದೀಪ್ ರಾಜಭರ್, ಶಿವಕುಮಾರ್ ರಾಜಭರ್ ಹಾಗೂ ವಿಜಯ್ ರಾಜಭರ್ ಅವರ ವಿರುದ್ಧ ಆರೋಪ ಹೊರಿಸಲಾಗಿದೆ.

ಚಿಂತನ್, ಪ್ರದೀಪ್ ಹಾಗೂ ಶಿವಕುಮಾರ್ ಬಂಧನದಲ್ಲಿದ್ದು, ವಿದ್ಯಾಧರ್ ಈಗಲೂ ತಲೆಮರಿಸಿಕೊಂಡಿದ್ದಾರೆ.

‘ಪ್ರಕರಣದ ತನಿಖೆಯನ್ನು ಮುಗಿಸಿದ್ದೇವೆ. ದೋಷಾರೋಪ ಪಟ್ಟಿಯನ್ನು ಬೊರಿವಿಲಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಪ್ರಕರಣ ಸೆಷೆನ್ಸ್ ಕೋರ್ಟ್‌ಗೆ ಬಂದಾಗ ದೋಷಾರೋಪ ನಿಗದಿಯಾಗಲಿದ್ದು, ವಿಚಾರಣೆ ಆರಂಭಗೊಳ್ಳಲಿದೆ’ ಎಂದು ಹಿರಿಯ ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೇ ಉಜ್ವಲ್ ನಿಕ್ಕಂ ಅವರನ್ನು ಪ್ರಕರಣದ ವಿಶೇಷ ಸರ್ಕಾರಿ ವಕೀಲರಾಗಿ ನೇಮಿಸುವಂತೆಯೂ ಪೊಲೀಸರು ಶಿಫಾರಸು ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ವಿದ್ಯಾಧರ್ ಅವರ ತಾಯಿ ಸೇರಿದಂತೆ 30 ಸಾಕ್ಷ್ಮಿಗಳನ್ನು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿದ್ದಾರೆ.

ಹಿನ್ನೆಲೆ: ಕಲಾವಿದೆ ಹೇಮಾ ಉಪಾಧ್ಯಾಯ ಮತ್ತು ಅವರ ವಕೀಲ ಹರೀಶ್‌ ಭಂಬಾನಿ ಕಳೆದ ಡಿಸೆಂಬರ್ ತಿಂಗಳಲ್ಲಿ ನಿಗೂಢವಾಗಿ ಕೊಲೆಯಾಗಿದ್ದರು. ಅವರ ಮೃತದೇಹಗಳು ಮುಂಬೈನ ಹೊರವಲಯದ ಕಾಲುವೆಯೊಂದರ ಸಮೀಪ ಪತ್ತೆಯಾಗಿದ್ದವು.

ಮನೆಯಿಂದ ಹೊರಹೊಗಿದ್ದ ಹೇಮಾ ಬಳಿಕ ಮರಳಿರಲಿಲ್ಲ. ಹೇಮಾ ಕಾಣೆಯಾದ ಕುರಿತು ಸಂತಾ ಕ್ರೂಜ್‌ ಪೊಲೀಸ್‌ ಠಾಣೆಯಲ್ಲಿ ಅವರ ಮನೆಕೆಲಸದವರೊಬ್ಬರು ದೂರು ನೀಡಿದ್ದರು. ಅದೇ ರೀತಿ ಹರೀಶ್‌ ಅವರ ಕುಟುಂಬದ ಸದಸ್ಯರು ಆ್ಯಂಟಾಪ್‌ ಹಿಲ್‌ ಪೊಲೀಸ್‌ ಠಾಣೆಯಲ್ಲಿ ಇದೇ ರೀತಿಯ ದೂರು ದಾಖಲಿಸಿದ್ದರು.

Write A Comment