ಮನೋರಂಜನೆ

ಕೊನೆಯವರೆಗೂ ಹೋರಾಡುವೆ: ನಟ ಸಲ್ಮಾನ್ ಖಾನ್

Pinterest LinkedIn Tumblr

salman-khanಮುಂಬೈ: 2002ರ ಹಿಟ್ ರನ್ ಪ್ರಕರಣ ಸಂಬಂಧ ತಾವು ಕೊನೆಯವರೆಗೂ ಹೋರಾಡುವುದಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.

ತಮ್ಮ 50ನೇ ಜನ್ಮ ದಿನಾಚರಣೆ ಪ್ರಯುಕ್ತ ಮುಂಬೈನಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಔತಣಕೂಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಲ್ಮಾನ್ ಖಾನ್ ಅವರು, ನ್ಯಾಯಾಲಯದ ತೀರ್ಪು ನನ್ನ ಕುಟುಂಬಸ್ಥರಿಗೆ ನಿಜಕ್ಕೂ ಸಂತಸವನ್ನುಂಟು ಮಾಡಿದೆ. ನ್ಯಾಯಾಲಯದ ತೀರ್ಪಿನಿಂದಾಗಿ ನಮ್ಮ ತಂದೆ-ತಾಯಿಯ ದೊಡ್ಡ ಆತಂಕವೊಂದು ದೂರಾಗಿದೆ ಎಂದು ಹೇಳಿದರು.

ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಪ್ರಕರಣದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ಕುರಿತು ಮಾತನಾಡಿದ ಅವರು, ಅದು ಮಹಾರಾಷ್ಟ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದು ಅವರ ಹಕ್ಕಾಗಿದೆ. ಒಂದು ವೇಳೆ ಅವರು ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಪ್ರಶ್ನಿಸಿದರೆ, ತಾವು ಕೂಡ ಕೊನೆಯವರೆಗೂ ಹೋರಾಡಲು ಸಿದ್ಧರಿದ್ದೇವೆ. ಹೋರಾಡುವುದೇ ಜೀವನವಾಗಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಸತತ 13 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಾಂಬೇ ಹೈಕೋರ್ಟ್ ಸಲ್ಮಾನ್ ರನ್ನು ಖುಲಾಸೆ ಗೊಳಿಸಿ ತನ್ನ ತೀರ್ಪು ನೀಡಿತ್ತು. ಇದಾದ ಬಳಿಕ ಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಲ್ಲು, ನವೀ ಮುಂಬೈನ ಪಂದೇಲ್ ನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರ ಪ್ರೇಯಸಿ ಲುಲಿಯಾ ವಂಟುರ್ ಸೇರಿದಂತೆ ಬಾಲಿವುಡ್ ನ ಗಣ್ಯಾತಿ ಗಣ್ಯರು ಪಾಲ್ಗೊಂಡು ಸಲ್ಮಾನ್ ಖಾನ್ ಗೆ ಶುಭ ಹಾರೈಸಿದರು.

ನಟಿ ಸೋನಾಕ್ಷಿ ಸಿನ್ಹಾ ಮತ್ತು ಅವರ ತಂದೆ ನಟ ಶತ್ರುಘ್ನ ಸಿನ್ಹಾ ಅವರು ಕುಟುಂಬ ಸಮೇತರಾಗಿ ಆಗಮಿಸಿದ್ದರು. ನಟಿ ಸೋನಮ್ ಕಪೂರ್ ಮತ್ತು ಅವರ ತಂದೆ ಅನಿಲ್ ಕಪೂರ್, ಭಜರಂಗಿ ಭಾಯ್ ಜಾನ್ ಚಿತ್ರದ ಮುನ್ನಿ ಪಾತ್ರಧಾರಿ ಹರ್ಷಾಲಿ ಮಲ್ಹೋತ್ರಾ, ನಟಿ ಶ್ರೇಯಾ ಸರಣ್, ಮಲ್ಲಿಕಾ ಶೆರಾವತ್, ರಿತೇಶ್ ದೇಶ್ ಮುಖ್ ಮತ್ತು ಅವರ ಪತ್ನಿ ಜನಿಲಿಯಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಬಳಿಕ ನಟಿ ಟಬು, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ನೃತ್ಯ ನಿರ್ದೇಶಕಿ ಫರ್ಹಾ ಖಾನ್ ಅವರು ಸಲ್ಮಾನ್ ರೊಂದಿಗೆ ತೆಗೆಸಿಕೊಂಡ ಸೆಲ್ಫಿಯನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ ಶುಭ ಕೋರಿದ್ದರು.

Write A Comment