ಮುಂಬೈ

ನಾವು ಅಧಿಕಾರದಲ್ಲಿದ್ದೇವೆ, ಆದ್ರೆ, ಸರಕಾರ ನಮ್ಮದಲ್ಲ: ಶಿವಸೇನೆ

Pinterest LinkedIn Tumblr

bjpಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆಯ ಬಿಕ್ಕಟ್ಟು ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ನಾವು ಅಧಿಕಾರದಲ್ಲಿದ್ದೇವೆ. ಆದರೆ, ಸರಕಾರ ನಮ್ಮದಲ್ಲ ಸರಕಾರ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಾವು ಭಾಗಿಯಾಗಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

ಬಡತನದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಲಾತೂರ್ ಜಿಲ್ಲೆಯ ನಿವಾಸಿ 16 ವರ್ಷ ವಯಸ್ಸಿನ ಸ್ವಾತಿ ಪಿತಾಲೆ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಾಲಕಿಯ ಸಾವಿಗೆ ಜಿಲ್ಲಾಡಳಿತವನ್ನು ಹೊಣೆ ಮಾಡುವುದನ್ನು ಬಿಟ್ಟು ನುಣುಚಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ನನ್ನ ಮತ್ತು ಪಕ್ಷದ ನಿಲುವಾಗಿದೆ. ಇಂತಹ ಘಟನೆಗಳು ಮರುಕಳಿಸುತ್ತಿರುವುದು ನೋಡಿದಲ್ಲಿ ಮಹಾರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಸರಕಾರದಲ್ಲಿದ್ದೇವೆ. ಆದರೆ, ಸರಕಾರ ನಮ್ಮದಲ್ಲ. ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಚಿವ ಸಂಪುಟದ ಪ್ರಮುಖ ಖಾತೆಗಳು ಶಿವಸೇನೆ ಬಳಿಯಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿರುವುದನ್ನು ಸಮರ್ಥಿಸಿಕೊಂಡ ರಾವುತ್, ಚುನಾವಣೆಯಲ್ಲಿ ಮತ್ತೊಮ್ಮೆ ಇಂತಹ ಸರಕಾರಗಳು ಅಧಿಕಾರಕ್ಕೆ ಬರಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷದ ವಿರುದ್ಧ ಹೋರಾಟ ಮಾಡಲಾಯಿತು. ಇದೀಗ ಬಿಜೆಪಿ ಸರಕಾರವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

Write A Comment