ಮುಂಬೈ

ಶೀನಾ ಹತ್ಯೆ ಪ್ರಕರಣ: ಫೊರೆನ್ಸಿಕ್ ವರದಿಯತ್ತ ಈಗ ಎಲ್ಲರ ಚಿತ್ತ

Pinterest LinkedIn Tumblr

SHEENA--INDRANIಮುಂಬೈ: ಹೆತ್ತ ಮಗಳನ್ನೇ ಭೀಕರವಾಗಿ ಕೊಂದ ಒಂದು ಪಾತಕ, ಅದರೊಂದಿಗೆ ಊಹೆಗೂ ನಿಲುಕದ ದ್ರೋಹ, ವಂಚನೆ, ಪಿತೂರಿಗಳ ಕಲಸುಮೇಲೋಗರವಾಗಿರುವ ಶೀನಾ ಬೋರಾ ಹತ್ಯೆ ಪ್ರಕರಣದ ರೂವಾರಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಮುಂಬೈ ಪೊಲೀಸರು ಸದ್ಯಕ್ಕೆ ಯಶಸ್ವಿಯಾಗಿದ್ದರೂ ಅವರ ಪರಿಶ್ರಮ ತಾರ್ಕಿಕ ಅಂತ್ಯ ಕಾಣುವುದು ಶೀನಾ ಸಾವಿಗೆ ಕೋರ್ಟ್ ಕಟಕಟೆಯಲ್ಲಿ ನ್ಯಾಯ ಸಿಕ್ಕಾಗಲೇ.

ಕೋರ್ಟಿನ ಮುಂದೆ ಪ್ರಕರಣ ಬಂದಾಗ ನಿರ್ಣಾಯಕವಾಗುವುದು ಶೀನಾ ಮೃತದೇಹದ ಫೊರೆನ್ಸಿಕ್ ಮತ್ತು ಡಿಎನ್‍ಎ ಪರೀಕ್ಷೆಯ ವರದಿ. ಇದೀಗ ಇಡೀ ಪ್ರಕರಣದ ಗಮನ ಈ ನಿಟ್ಟಿನಲ್ಲಿ  ಕೇಂದ್ರೀಕರಿಸಿದೆ. ಆದರೆ, 3 ವರ್ಷದ ಹಿಂದೆ ಮೃತ ದೇಹ ಪತ್ತೆಯಾದ ವ್ಯಾಪ್ತಿಯ ಪೊಲೀಸರು ಪ್ರಕರಣವನ್ನು ನಿರ್ವಹಿಸಿದ ರೀತಿ ಆ ನಿರ್ಣಾಯಕ ಸಾಕ್ಷ್ಯಗಳನ್ನೇ ಹಳ್ಳ ಹಿಡಿಸಿದೆ. ಇದೀಗ ಮುಂಬೈ ಪೊಲೀಸರು ಮತ್ತೆ ಅಳಿದುಳಿದ ಅವಶೇಷಗಳ ಪತ್ತೆ ಮಾಡಿ ಫೊರೆನ್ಸಿಕ್ ವರದಿದಾಗಿ ಕಳಿಸಿದ್ದರೂ ಅದು ನಿರೀಕ್ಷಿತ ಮಾಹಿತಿ ನೀಡುವುದು ಅನುಮಾನಾಸ್ಪದ.

ರಾಯಗಡ ಪೊಲೀಸರ ನಿರ್ಲಕ್ಷ್ಯ

ಶೀನಾ ಪ್ರಕರಣದಲ್ಲಿ ಆಕೆಯ ದೇಹ ಪತ್ತೆಯಾದ ಪೆನ್ ಪ್ರದೇಶ ವ್ಯಾಪ್ತಿಯ ರಾಯಗಡ ಪೊಲೀಸರು ತನಿಖೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದ್ದು, ಆ ಹಿನ್ನೆಲೆಯಲ್ಲಿ ಅಲ್ಲಿನ ಎಸ್ಪಿ  ವಿರುದ್ಧ ತನಿಖೆ ಆದೇಶಿಸಲಾಗಿದೆ. ಜತೆಗೆ ನಾಲ್ವರು ಪೊಲೀಸರ ಮೇಲೆ ಕಣ್ಣಿಡಲಾಗಿದೆ. 2012ರ ಮೇ 23ರಂದು ಕೊಳೆತ ದೇಹ ಪತ್ತೆಯಾದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ನಂತರ ಅಲ್ಲಿನ  ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ದೇಹದ ಭಾಗಗಳನ್ನು ಸಂಗ್ರಹಿಸಿ, ಫೊರೆನ್ಸಿಕ್ ಪರೀಕ್ಷೆ ಬಳಿಕ ಶವ ಯಾರದ್ದು ಮತ್ತು ಸಾವಿಗೆ ಕಾರಣವೇನು ಎಂಬುದನ್ನು ತನಿಖೆ ನಡೆಸಿ, ಪ್ರಕರಣಕ್ಕೆ  ತಾರ್ಕಿಕ ಅಂತ್ಯ ನೀಡಬೇಕಿತ್ತು.

ಪೆನ್ ಪೊಲೀಸರು, ಮೃತ ದೇಹದ ಕೆಲ ಭಾಗಗಳನ್ನು ಫೊರೆನ್ಸಿಕ್ ಪರೀಕ್ಷೆಗಾಗಿ ಖಲಿನಾಗೆ ಕಳಿಸಿರುವುದಾಗಿ ಹೇಳಿದ್ದಾರೆ. ಆದರೆ, ಅನಾಮಿಕ ಮೃತ ದೇಹ ಪತ್ತೆಯಾದ ಬಗ್ಗೆಯಾಗಲೀ, ದೇಹದ  ಭಾಗಗಳನ್ನು ಫೊರೆನ್ಸಿಕ್ ವರದಿಗಾಗಿ ಕಳಿಸಿದ್ದ ಬಗ್ಗೆಯಾಗಲೀ ಠಾಣೆಯಲ್ಲಿ ಯಾವುದೇ ದಾಖಲೆ ಇಲ್ಲ. ಅಲ್ಲದೆ, ಮೃತ ದೇಹ ಪತ್ತೆಯಾದ ಬಗ್ಗೆ ಕನಿಷ್ಠ ಒಂದು ಕೇಸು ಕೂಡ ಹಾಕಿಲ್ಲ!

ಪ್ರಭಾವ ಕೆಲಸಮಾಡಿತೆ?

ಇಡೀ ಪ್ರಕರಣವನ್ನು ಮುಚ್ಚಿಹಾಕಲು ರಾಯಗಡ ಪೊಲೀಸರ ಮೇಲೆ ಇಂದ್ರಾಣಿ ತನ್ನ ಪ್ರಭಾವ ಬಳಸಿ ಒತ್ತಡ ಹೇರಿರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಮುಂಬೈ ಪೊಲೀಸರು, ರಾಯಗಡ ಪೊಲೀಸರ ನಿರ್ಲಕ್ಷ್ಯವನ್ನೂ ತಮ್ಮ ತನಿಖಾ ವ್ಯಾಪ್ತಿಗೆ ಸೇರಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಮುಂಬೈ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಳಿದುಳಿದ ಸಾಕ್ಷ್ಯಗಳನ್ನು ಸಂಗ್ರಹಿಸಿ  ಫೊರೆನ್ಸಿಕ್ ಪರೀಕ್ಷೆಗೆ ಕಳಿಸಿದ್ದಾರೆ.

ಅಲ್ಲಿ ಪತ್ತೆಯಾಗಿರುವ ದೇಹ ಶೀನಾಳದ್ದೇ ಎಂಬುದನ್ನು ದೃಢಪಡಿಸಿ ಕೊಳ್ಳಲು ತಲೆಬುರುಡೆ ಅತ್ಯಂತ ಮಹತ್ವದ್ದು. ಆದರೆ, ಯಾವುದೇ ಅವಶೇಷಗಳು  ಲಭ್ಯವಿಲ್ಲ. ಇನ್ನು ಆಕೆಯ ಸಾವು, ಸಾವಿನ ಸಂದರ್ಭದಲ್ಲಿನ ದೈಹಿಕ ಸ್ಥಿತಿಗತಿ ತಿಳಿಯಲು ಮೃದು ಅಂಗಾಂಶ ಅಥವಾ ಬೇರುಸಹಿತ ತಲೆಗೂದಲು ದೊರೆಯಬೇಕಿದೆ. ಆದರೆ, 3 ವರ್ಷಗಳಲ್ಲಿ  ಅಂತಹ ಸೂಕ್ಷ್ಮ ಅವಯವಗಳು ನಾಶವಾಗದೇ ಉಳಿದಿರುವುದು ಅನುಮಾನಾಸ್ಪದ.

ಹಾಗಾಗಿ, ಪತ್ತೆಯಾದ ದೇಹ ಶೀನಾಳದ್ದೇ?ಸಾವು ಹೇಗೆ ಸಂಭವಿಸಿದೆ? ಆಕೆ ದೈಹಿಕ ಸ್ಥಿತಿ ಹೇಗಿತ್ತು? ಮುಂತಾದ ಆರೋಪ ಸಾಬೀತು ದೃಷ್ಟಿಯಿಂದ ನಿರ್ಣಾಯಕವಾಗಬಲ್ಲ ಸಾಕ್ಷ್ಯ  ಕಲೆಹಾಕುವುದು ಇದೀಗ ಪೊಲೀಸರ ಮುಂದಿರುವ ಮಹತ್ವದ ಸವಾಲಾಗಿದೆ.

ಕುಡಿದು ಬಾಯ್ಬಿಟ್ಟಿದ್ದ

ಇಂದ್ರಾಣಿ ಕಾರು ಚಾಲಕ ಶ್ಯಾಮ್ ರಾಯಾ ಎರಡು ತಿಂಗಳ ಹಿಂದೆ ಬಾರ್‍ವೊಂದರಲ್ಲಿ ಕುಡಿಯುತ್ತಿರುವಾಗ ತನ್ನ ಗೆಳೆಯನ ಮುಂದೆ ಹತ್ಯೆಯ ಕಥೆ ಬಾಯ್ಬಿಟ್ಟಿದ್ದ. ರಾಯಾನ ದುರಾದೃಷ್ಟಕ್ಕೆ ಪಕ್ಕದ  ಟೇಬಲ್‍ನಲ್ಲೇ ಮುಂಬೈ ಪೊಲೀಸರ ಮಾಹಿತಿದಾರನೊಬ್ಬ ಕೂತಿದ್ದ. ಡ್ರೈವರ್ ಹೇಳಿದ್ದನ್ನೆಲ್ಲ ಕೇಳಿಸಿಕೊಂಡ ಆತ ನಂತರ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದ. ಆ ನಂತರ ಮುಂಬೈ  ಪೊಲೀಸರು ರಾಯಾನನ್ನು ಹಿಂಬಾಲಿಸಲು, ಮಾಹಿತಿ ಕಲೆ ಹಾಕಲು ಆರಂಭಿಸಿದ್ದರು. ಹತ್ಯೆಯ ವಿಚಾರ ಖಚಿತವಾಗುತ್ತಿದ್ದಂತೆ ಇಂದ್ರಾಣಿಯನ್ನು ವಶಕ್ಕೆ ತೆಗೆದುಕೊಂಡರು.

ಉಲ್ಟಾ ಹೊಡೆದ ಖನ್ನಾ

ನ್ಯೂಸ್‍ಎಕ್ಸ್ ಕಂಪನಿಗೆ ರು.168 ಕೋಟಿ ನಷ್ಟ ಉಂಟುಮಾಡಿದ್ದ ಇಂದ್ರಾಣಿ ಮತ್ತು ಇತರರು. ಈ ನಿಟ್ಟಿನಲ್ಲೂ ತನಿಖೆ ಆರಂಭ

ಈವರೆಗೆ ಶೀನಾ ಕೊಲೆ ದಿನ ಕಾರಿನಲ್ಲಿ ಇಂದ್ರಾಣಿ ಹಾಗೂ ಡೈವರ್ ಜೊತೆಗೆ ತಾನೂ ಇದ್ದದ್ದಾಗಿ ಹೇಳಿದ್ದ ಸಂಜೀವ್ ಖನ್ನಾ, ಈಗ ಕೊಲೆ ನಡೆದಾಗ ತಾನು ಕಾರಿನಲ್ಲಿ ಇರಲೇ ಇಲ್ಲ. ಮೃತ ದೇಹ

ಸಾಗಿಸಲು ಮಾತ್ರ ನೆರವಾಗಿದ್ದು, ಮಿಖೈಲ್‍ನನ್ನೂ ಕೊಲ್ಲುವ ಇಂದ್ರಾಣಿಯ ಉದ್ದೇಶವನ್ನು ತಾನೇ ತಪ್ಪಿಸಿದ್ದಾಗಿ ಹೇಳಿದ್ದಾನೆ

ಇಂದ್ರಾಣಿ ಕೂಡ ಹೇಳಿಕೆಯನ್ನು ತಿರುಚಿದ್ದು, ಕೊಲೆಯಲ್ಲಿ ತಾನು ಭಾಗಿಯಾಗಿಲ್ಲ. ಅಂದು ಆಕೆಯನ್ನು ಭೇಟಿ ಮಾಡಿ ಟೀ ಕುಡಿದು ನಾನು ಆಕೆಯಿಂದ ಬೇರ್ಪಟ್ಟೆ. ಆ ಬಳಿಕ ಈ ಕೊಲೆ  ನಡೆದಿರಬಹುದು ಎಂದಿದ್ದಾಳೆ.

ಶೀನಾ ಅವಶೇಷಗಳೊಂದಿಗೆ ಹೋಲಿಕೆಗಾಗಿ ಪೊಲೀಸರು ಇಂದ್ರಾಣಿ ಮತ್ತು ಮಿಖೈಲ್ ರಕ್ತ ಮತ್ತು ಕೂದಲು ಮಾದರಿ ಸಂಗ್ರಹಿಸಿ ಫೊರೆನ್ಸಿಕ್ ಪರೀಕ್ಷೆಗೆ ಕಳಿಸಿದ್ದಾರೆ

ಶೀನಾ ಸಹೋದರ ಮಿಖೈಲ್ ಹಾಗೂ ಆಕೆಯ ಪ್ರಿಯಕರ ರಾಹುಲ್ ಮುಖರ್ಜಿಯ ವಿಚಾರಣೆ.

Write A Comment