ಮುಂಬೈ: ತಾನು ಮುಸ್ಲಿಂ ಎಂಬ ಕಾರಣಕ್ಕೆ ಮುಂಬೈನಲ್ಲಿ ತನಗೆ ಫ್ಲ್ಯಾಟ್ ನೀಡಲು ನಿರಾಕರಿಸಿದರು ಎಂದು 25 ವರ್ಷದ ಮಿಸ್ಬಾ ಖಾದ್ರಿ ಅವರು ಬುಧವಾರ ಆರೋಪಿಸಿದ್ದಾರೆ.
ವದಲಾದ ಸಾಘ್ವಿ ಹೈಟ್ಸ್‌ನಲ್ಲಿರುವ ಮೂರು ಬೆಡ್‌ರೂಂನ ಮನೆಗೆ ಇನ್ನೇನು ಶಿಫ್ಟ್ ಆಗಬೇಕು ಎನ್ನುವ ಸಂದರ್ಭದಲ್ಲಿ, ಹೌಸಿಂಗ್ ಸೊಸೈಟಿ ಮುಸ್ಲಿಂ ಬಾಡಿಗೆದಾರರಿಗೆ ಮನೆ ನೀಡುವುದಿಲ್ಲ ಎಂದು ಬ್ರೋಕರ್ ಬೆದರಿಕೆ ಹಾಕಿದರು ಎಂದು ಯುವತಿ ದೂರಿದ್ದಾರೆ.
ಒಂದು ವೇಳೆ ಸೊಸೈಟಿಯ ವಿರೋಧದ ನಡುವೆಯೂ ನೀವು ಫ್ಲ್ಯಾಟ್ ನಲ್ಲಿ ವಾಸಿಸುವುದಾದರೆ ‘ನಿರಪೇಕ್ಷಣಾ ಪತ್ರ’ಕ್ಕೆ ಸಹಿ ಹಾಕಬೇಕು ಮತ್ತು ಅಲ್ಲಿ ನೆರಹೊರೆಯವರ ಕಿರುಕುಳಕ್ಕೆ ನಾವು ಹೊಣೆಯಲ್ಲಿ ಎಂದು ಬರೆದುಕೊಡಬೇಕು ಎಂದು ಬ್ರೋಕರ್ ಹೇಳಿರುವುದಾಗಿ ಖಾದ್ರಿ ತಿಳಿಸಿದ್ದಾರೆ.
ನಾನು ಮುಸ್ಲಿಂ ಎಂಬ ಕಾರಣಕ್ಕೆ ಹಲವು ಬ್ರೋಕರ್‌ಗಳು ನನಗೆ ಮನೆ ತೋರಿಸಲು ಸಹ ನಿರಾಕರಿಸಿದ್ದರು. ಅಲ್ಲದೆ ಮನೆ ಮಾಲೀಕರು ಸಹ ಧಾರ್ಮಿಕ ಕಾರಣ ನೀಡುತ್ತಿದ್ದಾರೆ ಎಂದು ಯುವತಿ ತನ್ನ ಅಳಲು ತೋಡಿಕೊಂಡಿದ್ದಾರೆ.
ಒಂದು ವಾರದ ಹಿಂದಷ್ಟೇ ಮುಂಬೈ ಮೂಲದ ವಜ್ರಾಭರಣ ರಫ್ತು ಸಂಸ್ಥೆಯು ಮುಸ್ಲಿಂ ಎಂಬ ಕಾರಣ ನೀಡಿ ಕೆಲಸಕ್ಕಾಗಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪದವೀಧರ ಜೆಶಾನ್ ಅಲಿ ಖಾನ್ ಎಂಬುವವರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.
