ಮನೋರಂಜನೆ

ಮಹಿಳೆಯರ ಘನತೆಗೆ ಧಕ್ಕೆ; ಸನ್ನಿ ಲಿಯೋನ್ ಗಡಿಪಾರು ಮಾಡಲು ಹಿಂದು ಜಾಗರಣ ಸಮಿತಿ ಆಗ್ರಹ

Pinterest LinkedIn Tumblr

Sunny Leone

ಥಾಣೆ: ತನ್ನ ಅಂತರ್ಜಾಲ ತಾಣದಲ್ಲಿ ಅಶ್ಲೀಲತೆ ಪ್ರದರ್ಶಿಸುತ್ತಿದ್ದಾರೆ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ದೂರಿ ಹಿಂದು ಜಾಗರಣ ಸಮಿತಿ ನಟಿ ಸನ್ನಿ ಲಿಯೋನ್ ಳನ್ನು ಗಡಿಪಾರು ಮಾಡಿ ಮತ್ತೆ ಭಾರತಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದೆ.

ಥಾಣೆಯ ದಾಂಬಿವಿಲ್ಲಿ ಪೋಲಿಸ್ ಠಾಣೆಯ ಮುಖ್ಯಸ್ಥ ಸುನಿಲ್ ಶಿವರ್ಕರ್ ಅವರಲ್ಲಿ ನಟಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದೇವೆ ಎಂದು ಹಿಂದು ಜಾಗರಣ ಸಮಿತಿ ವಕ್ತಾರ ಉದಯ್ ಧೂರಿ ತಿಳಿಸಿದ್ದಾರೆ. “ನಮ್ಮ ಪ್ರಾದೇಶಿಕ ಪ್ರತಿನಿಧಿ ಅಂಜಲಿ ಪಾಲನ್ ಅವರು ಎಫ್ ಐ ಆರ್ ದಾಖಲಿಸಿದ್ದಾರೆ. ಅಲ್ಲದೆ ಕಳೆದ ವಾರದಲ್ಲಿ ಮಹಾರಾಷ್ಟ್ರ ಮತ್ತು ಗೋವಾ ಸೇರಿದಂತೆ ಸುಮಾರು 12 ದೂರು ಸಲ್ಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಧೂರಿ ದೂರಿದ್ದಾರೆ.

ಸದ್ಯಕ್ಕೆ ಬಾಲಿವುಡ್ ಸಿನೆಮಾಗಳಲ್ಲಿ ನಟಿಸುವ ಸನ್ನಿ ಲಿಯೋನ್ ಅವರು ತಮ್ಮ ಅಂತರ್ಜಾಲ ತಾಣ (www.sunnyleone.com) ಮೂಲಕ ಅಶ್ಲೀಲತೆ ಪ್ರದರ್ಶಿಸಿ ಭಾರತೀಯ ಯುವಕರನ್ನು ಹಾಳುಗೆಡವುತ್ತಿದ್ದಾರೆ ಹಾಗೂ ಭಾರತೀಯ ಮಹಿಳೆಯರ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಅವರು ದೂರಿದ್ದಾರೆ.

ಅಂತರ್ಜಾಲ ತಾಣದಲ್ಲಿ ಸೂಚನೆ ನೀಡಿದ್ದರು ಸಹ ಅದು ಕೆಲಸಕ್ಕೆ ಬರುವುದಿಲ್ಲ ಏಕೆಂದರೆ ಮಕ್ಕಳು ಕೂಡ ಸುಲಭವಾಗಿ ಆ ತಾಣವನ್ನು ನೋಡಬಹುದು ಎಂದಿದ್ದಾರೆ. “ಕಳೆದ ವಾರ ನಾವು ನವಿ ಮುಂಬೈ ಪೊಲೀಸ್ ಮಹಾನಿರ್ದೇಶಕ ಕೆ ಎಲ್ ಪ್ರಸಾದ್ ಅವರಲ್ಲಿ ದೂರು ಸಲ್ಲಿಸಿದ್ದೆವು. ಅವರು ತಮ್ಮನ್ನು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ, ಇದರ ಬದಲು ಮಹಿಳೆಯರಿಗಾಗಿ ಶೌಚಾಲಯ ಕಟ್ಟಿಸುವ ಬಗ್ಗೆ ಚಿಂತಿಸಿ ಎಂದು ಪ್ರಸಾದ್ ನಮಗೆ ತಿಳಿಸಿದರು” ಎಂದು ಕೂಡ ತಿಳಿಸಿದ್ದಾರೆ.

ಸನ್ನಿ ಲಿಯೋನ್ ಹೇಗೆ ಜನರನ್ನು ಪ್ರಭಾವಿಸುತ್ತಿದ್ದಾರೆ ಎಂದು ವಿವರಿಸಿದ ಧೂರಿ, ಗೂಗಲ್ ಹುಡುಕಾಟದ ಎಂಜಿನ್ ನಲ್ಲಿ ಪ್ರಧಾನಿ ಮೋದಿ ಅವರಿಗಿಂದ ಸನ್ನಿ ಲಿಯೋನ್ ಜನಪ್ರಿಯ ಎಂಬ ಮಾಧ್ಯಮ ವರದಿಗಳಿವೆ. ಇದು ಅಪಾಯಕಾರಿ ಬೆಳವಣಿಗೆ ಎನ್ನುತ್ತಾರೆ.

Write A Comment